ADVERTISEMENT

ರಂಗನತಿಟ್ಟಿಗೆ ‘ರಾಕೆಟ್‌ ಬಾಲದ ಡ್ರೋಂಗೋ’ ಆಗಮನ

ನವೆಂಬರ್‌ ತಿಂಗಳ ಗಣತಿಯಲ್ಲಿ 72 ಪ್ರಭೇದದ 3,300 ಹಕ್ಕಿಗಳ ಗುರುತು

ಸಿದ್ದು ಆರ್.ಜಿ.ಹಳ್ಳಿ
Published 23 ನವೆಂಬರ್ 2024, 3:43 IST
Last Updated 23 ನವೆಂಬರ್ 2024, 3:43 IST
‘ದೊಡ್ಡ ರಾಕೆಟ್‌ ಬಾಲದ ಡ್ರೋಂಗೋ’ ಪಕ್ಷಿ
‘ದೊಡ್ಡ ರಾಕೆಟ್‌ ಬಾಲದ ಡ್ರೋಂಗೋ’ ಪಕ್ಷಿ   

ಮಂಡ್ಯ: ಶ್ರೀರಂಗಪಟ್ಟಣ ತಾಲ್ಲೂಕಿನ ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮದಲ್ಲಿ ನವೆಂಬರ್‌ ತಿಂಗಳಲ್ಲಿ ನಡೆದ ಗಣತಿಯಲ್ಲಿ 72 ಜಾತಿಯ 3300ಕ್ಕಿಂತ ಹೆಚ್ಚಿನ ಸಂಖ್ಯೆಯ ಪಕ್ಷಿಗಳು ಪತ್ತೆಯಾಗಿವೆ. 

ವಿಶೇಷವೆಂದರೆ, ಪ್ರಥಮ ಬಾರಿಗೆ ದೊಡ್ಡ ರಾಕೆಟ್‌ ಬಾಲದ ಡ್ರೋಂಗೋ (ಭೀಮರಾಜ) ಪಕ್ಷಿಯ ಆಗಮನವಾಗಿದೆ. ಇದು ಹೆಚ್ಚಾಗಿ ತೇವಾಂಶಯುಕ್ತ ಎಲೆ ಉದುರುವ ಕಾಡು, ನಿತ್ಯ ಹರಿದ್ವರ್ಣ ಕಾಡು ಮತ್ತು ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಪಕ್ಷಿಯಾಗಿದೆ. 

ಡ್ರೋಂಗೋ ಪಕ್ಷಿಯು ತುದಿಗೆ ಸೀಮಿತವಾದಂತಹ ಅಡ್ಡೆಳೆಗಳ ಹೆಣಿಗೆಯನ್ನು ಹೊಂದಿರುವ ಉದ್ದವಾದ ಬಾಲದ ಹೊರಗಿನ ಪುಕ್ಕ ಅಥವಾ ಗರಿಗಳ ವೈಶಿಷ್ಟ್ಯವನ್ನು ಹೊಂದಿರುವ ಮಧ್ಯಮ ಗಾತ್ರದ ಏಷ್ಯಾದ ಪಕ್ಷಿಯಾಗಿದೆ. ಇವು ಮುಖ್ಯವಾಗಿ ಕೀಟಗಳನ್ನು ಮತ್ತು ಹಣ್ಣುಗಳನ್ನು ತಿನ್ನುತ್ತವೆ. ಮಕರಂದಕ್ಕಾಗಿ ಹೂವಿನ ಮರಗಳಿಗೆ ಭೇಟಿ ನೀಡುತ್ತವೆ. ಇತರ ಪಕ್ಷಿಗಳ ಕೂಗುಗಳನ್ನು ಸ್ಪಷ್ಟ ಅನುಕರಣೆಗಳೂ ಸೇರಿದಂತೆ ಉಚ್ಚ ಸ್ಥಾಯಿಯಲ್ಲಿ ಕೂಗುವುದರ ಮೂಲಕ ಗಮನವನ್ನು ಸೆಳೆಯುತ್ತವೆ.

ADVERTISEMENT

350 ಗೂಡುಗಳು:

ನವೆಂಬರ್‌ ತಿಂಗಳಲ್ಲಿ ಸ್ಪಾಟ್‌ ಬಿಲ್ಡ್‌ ಪೆಲಿಕಾನ್‌, ಇಂಡಿಯನ್‌ ಕಾರ್ಮೊರೆಂಟ್‌, ಮಿಂಚುಳ್ಳಿ, ಯುರೇಷಿಯನ್‌ ಸ್ಪೂನ್‌ಬಿಲ್‌ ಪಕ್ಷಿಗಳು ಸಂತಾನಾಭಿವೃದ್ಧಿಗಾಗಿ ಗೂಡು ಕಟ್ಟುವ ಪ್ರಕ್ರಿಯೆನ್ನು ಮಾಡುತ್ತಿವೆ. ಅಂದಾಜು 350ಕ್ಕಿಂತ ಹೆಚ್ಚಿನ ಗೂಡುಗಳನ್ನು ಇಲ್ಲಿ ಕಾಣಬಹುದಾಗಿದೆ. 

ಬ್ಲೂ ಕ್ಯಾಪ್ಡ್‌ ರಾಕ್‌ ತ್ರಶ್‌, ಫಾರೆಸ್ಟ್‌ ವಾಗ್‌ಟೈಲ್‌, ಬೂಟೆಡ್‌ ಬ್ಯಾಬ್ಲರ್‌, ಇಂಡಿಯನ್‌ ಪಿಟ್ಟಾ (ನವರಂಗ), ವುಡ್‌ ಸ್ಯಾಂಡ್‌ ಪೈಪರ್‌ ಇತ್ಯಾದಿ ವಲಸೆ ಪಕ್ಷಿಗಳ ಕೂಡ ರಂಗನತಿಟ್ಟಿಗೆ ಬಂದು ಪ್ರವಾಸಿಗರ ಮನಸೆಳೆಯುತ್ತಿವೆ. ಇವುಗಳೊಂದಿಗೆ ಹೆರಾನ್‌, ಲೆಸರ್‌ ಫಿಶ್‌ ಈಗಲ್‌, ಬ್ರಾಹ್ನಿಣಿ ಕೈಟ್‌, ರಿವರ್‌ ಟರ್ನ್‌, ಓರಿಯಂಟಲ್‌ ಡಾರ್ಟರ್‌, ಇಂಡಿಯನ್‌ ಗ್ರೇ ಹಾರ್ನ್‌ಬಿಲ್‌, ರೆಡ್‌ ವಿಶ್‌ಕರ್ಡ್‌ ಬುಲ್‌ಬುಲ್‌ ಪಕ್ಷಿಗಳು ಕೂಡ ರೆಂಬೆ ಕೊಂಬೆಗಳಲ್ಲಿ ಚಿಲಿಪಿಲಿ ಗುಟ್ಟುತ್ತಿವೆ ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಪ್ರಸ್ತುತ ಸಾಲಿನಲ್ಲಿ ಅಂದರೆ ಏಪ್ರಿಲ್‌ 24ರಿಂದ ಅಕ್ಟೋಬರ್‌ 24ರವರೆಗೆ ಒಟ್ಟು 1,69,373 ಪ್ರವಾಸಿಗರು ಭೇಟಿ ನೀಡಿದ್ದು, ಇದರಲ್ಲಿ 1,68,141 ಭಾರತೀಯರು ಹಾಗೂ 1232 ವಿದೇಶಿ ಪ್ರವಾಸಿಗರು ರಂಗನತಿಟ್ಟಿಗೆ ಭೇಟಿ ನೀಡಿದ್ದಾರೆ. ಪ್ರತಿ ವರ್ಷ 3.50 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಪಕ್ಷಿಧಾಮಕ್ಕೆ ಆಗಮಿಸುತ್ತಾರೆ. 

‘ಚಳಿಗಾಲದಲ್ಲಿ ಅಂದರೆ ನವೆಂಬರ್‌ ತಿಂಗಳಿಂದ ಜನವರಿವರೆಗೆ ಅತಿ ಹೆಚ್ಚು ವಲಸೆ ಪಕ್ಷಿಗಳು ಇಲ್ಲಿಗೆ ಸಂತಾನಾಭಿವೃದ್ಧಿಗಾಗಿ ಆಗಮಿಸುತ್ತವೆ. ನವೆಂಬರ್‌ ತಿಂಗಳಲ್ಲಿ ಒಟ್ಟು 25,022 ಪ್ರವಾಸಿಗರು ಭೇಟಿ ನೀಡಿದ್ದು, ಇದರಲ್ಲಿ 24,707 ಭಾರತೀಯರು ಮತ್ತು 315 ವಿದೇಶಿ ಪ್ರವಾಸಿಗರು ಭೇಟಿ ನೀಡಿ, ಪಕ್ಷಿಗಳ ಕಲರವನ್ನು ಕಣ್ತುಂಬಿಕೊಂಡಿದ್ದಾರೆ’ ಎಂದು ರಂಗನತಿಟ್ಟು ಪಕ್ಷಿಧಾಮದ ಆರ್‌ಎಫ್‌ಒ ನದೀಮ್‌ ತಿಳಿಸಿದ್ದಾರೆ. 

ಶ್ರೀರಂಗಪಟ್ಟಣ ತಾಲ್ಲೂಕಿನ ರಂಗನತಿಟ್ಟು ಪಕ್ಷಿಧಾಮದ ಪಕ್ಷಿನೋಟ 
ರಂಗನತಿಟ್ಟು ಪಕ್ಷಿಧಾಮದಲ್ಲಿ ದೊಡ್ಡ ರಾಕೆಟ್‌ ಬಾಲದ ಡ್ರೋಂಗೊ ಮೊದಲ ಬಾರಿಗೆ ಕಾಣಿಸಿಕೊಂಡಿರುವುದು ಸಂತಸ ತಂದಿದೆ. ಪ್ರತಿ ವರ್ಷ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಲೇ ಇದೆ
ನದೀಮ್‌ ಆರ್‌ಎಫ್‌ಒ ರಂಗನತಿಟ್ಟು ಪಕ್ಷಿಧಾಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.