ಮಂಡ್ಯ: ಮೈಸೂರು ಸಕ್ಕರೆ ಕಂಪನಿ (ಮೈಷುಗರ್)ಗೆ ಸೇರಿದ 27.39 ಎಕರೆ ಜಾಗದಲ್ಲಿ ಕೆಲವರು ಅಕ್ರಮವಾಗಿ ಅನುಭವದಲ್ಲಿ ಇರುವುದನ್ನು ಗುರುತಿಸಲಾಗಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗಳನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದರು.
ಮೈಷುಗರ್ ಕಂಪನಿಯ ಸುಮಾರು 7.10 ಎಕರೆ ವಾಣಿಜ್ಯ ಭೂಮಿ ಹಾಗೂ ಸುಮಾರು 20.29 ಎಕರೆ ವ್ಯವಸಾಯ ಭೂಮಿಯಲ್ಲಿ ಕೆಲವು ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಅನುಭವದಲ್ಲಿರುವುದನ್ನು ಪತ್ತೆ ಹಚ್ಚಲಾಗಿದೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮೈಷುಗರ್ ವ್ಯಾಪ್ತಿಯಲ್ಲಿ ಅಕ್ರಮವಾಗಿ ಅನುಭವದಲ್ಲಿರುವ ಭೂಮಿ ಪತ್ತೆಗೆ ತಹಶೀಲ್ದಾರ್ ಜೊತೆಗೂಡಿ ಕಂಪನಿಯ ಆಡಳಿತ ಮಂಡಳಿಯು ಇದೇ ಮೇ 12 ಮತ್ತು ಜೂನ್ 30ರಂದು ಗ್ರಾಮ ಲೆಕ್ಕಾಧಿಕಾರಿ ಮತ್ತು ಕಂದಾಯ ನಿರೀಕ್ಷಕರೊಂದಿಗೆ ಚರ್ಚಿಸಿ ಮಾಹಿತಿ ಕಲೆ ಹಾಕಲಾಗಿದೆ ಎಂದು ಹೇಳಿದರು.
ಹನಕೆರೆ ಗ್ರಾಮದ ಸರ್ವೆ ನಂ. 261ರಲ್ಲಿ ಮಹೇಶ್ ಎಂಬುವವರು 3.33 ಎಕರೆ, ಕಾಳಿಕಾಂಬ ಟ್ರಸ್ಟ್‌ನವರು 20 ಗುಂಟೆ, ಹೊನ್ನಯ್ಯ ಬಡಾವಣೆಯ ಸ್ಲಂನವರು ವಿವಿಧ ಸರ್ವೆ ನಂಬರ್‌ಗಳಲ್ಲಿ ಕ್ರಮವಾಗಿ 17, 12, 09, 02 ಗುಂಟೆ ಮತ್ತು 1.37 ಎಕರೆ ವಾಣಿಜ್ಯ ಭೂಮಿ, ತಗ್ಗಹಳ್ಳಿಯ ಜಯರಾಂ ಅವರು 2 ಎಕರೆ, ಹೊಳಲು ಗ್ರಾಮದ ಕುಚೇಲ ಇತರರು 3.04 ಎಕರೆ, ಶಿವಳ್ಳಿ ಕೃಷ್ಣ ಇತರರು ವಿವಿಧ ಸರ್ವೆ ನಂಬರ್‌ಗಳಲ್ಲಿ 38 ಗುಂಟೆ, 2.16 ಎಕರೆ, 4.03 ಎಕರೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ದೂರಿದರು.
ಭೀಮನಹಳ್ಳಿಯ ಚನ್ನಮ್ಮ ಕೋಂ ಲೇಟ್ ಕರಿಯ ಇತರರು 6 ಎಕರೆ, ರಾಜಿ ಮರಿಯಯ್ಯ ಅವರು 1.10 ಎಕರೆ, ಸಂಪಹಳ್ಳಿಯ ಕುಮಾರ ಬಿನ್ ಪುಟ್ಟೇಗೌಡ ಅವರು 0.15 ಗುಂಟೆ, ಹೊಳಲು ಗ್ರಾಮದ ನಿಂಗಾಜಮ್ಮ ಅವರು 10 ಗುಂಟೆ, ಚಿಕ್ಕಮಂಡ್ಯದ ಚಿಕ್ಕತಾಯಮ್ಮ 13 ಗುಂಟೆಯ ವ್ಯವಸಾಯ ಭೂಮಿಯನ್ನು ಅಕ್ರಮವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಪಟ್ಟಿ ಬಿಡುಗಡೆ ಮಾಡಿದರು.
‘ಮೈಷುಗರ್ ಮಾಜಿ ಅಧ್ಯಕ್ಷ ನಾಗರಾಜಪ್ಪ ಪ್ರಕರಣ (₹120 ಕೋಟಿ ಅವ್ಯವಹಾರ) ಸಂಬಂಧ ಲೋಕಾಯುಕ್ತ ತನಿಖೆ ಅಂತಿಮ ಹಂತಕ್ಕೆ ಬಂದಿದ್ದು, ಆಗಸ್ಟ್ 19ರಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದೆ. ಮೈಷುಗರ್ ಪರವಾದ ತೀರ್ಪನ್ನು ಶೀಘ್ರದಲ್ಲೇ ನಿರೀಕ್ಷಿಸಬಹುದಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮೈಷುಗರ್ ಕಂಪನಿಯಲ್ಲಿ 40 ಸಾವಿರ ಕ್ವಿಂಟಲ್ ಸಕ್ಕರೆ ದಾಸ್ತಾನಿದ್ದು, ಅದರಲ್ಲಿ 25 ಸಾವಿರ ಟನ್ ಸಕ್ಕರೆ ಮಾರಾಟಕ್ಕೆ ಕೇಂದ್ರ ಸಕ್ಕರೆ ನಿರ್ದೇಶಕರು ಅನುಮತಿ ನೀಡಿದ್ದಾರೆ. ಸಕ್ಕರೆ ಮಾರಾಟ ಮಾಡಿ ಒಂದೇ ಕಂತಿನಲ್ಲಿ ರೈತರಿಗೆ ಕಬ್ಬಿನ ಹಣವನ್ನು ಸೆಪ್ಟೆಂಬರ್ 10ರಂದು ಪಾವತಿ ಮಾಡಲಾಗುವುದು ಎಂದು ಹೇಳಿದರು.
ಕಂಪನಿಯ ಕೆಲವು ಅಮಾನತುಗೊಂಡ ನೌಕರರು ತಮ್ಮ ಬಾಕಿ ಹಣಕ್ಕಾಗಿ ಆತ್ಮಹತ್ಯೆ ಬೆದರಿಕೆ ಒಡ್ಡಿದ್ದಾರೆ. ಅವರು ಕಾನೂನು ಹೋರಾಟ ಮಾಡಿ, ನ್ಯಾಯಾಲಯದ ಆದೇಶ ತಂದಲ್ಲಿ ಪರಿಶೀಲಿಸುತ್ತೇವೆ ಎಂದರು.
ಗೋಷ್ಠಿಯಲ್ಲಿ ರಾಮಕೃಷ್ಣ, ಬೋರೇಗೌಡ, ಎಚ್.ವಿ. ನಾಗರಾಜು, ಉದಯ್‌ಕುಮಾರ್, ದ್ಯಾವಣ್ಣ, ವಿಜಯಕುಮಾರ್ ಚಂದಗಾಲು ಇದ್ದರು.
ಒತ್ತುವರಿ ತೆರವುಗೊಳಿಸದಂತೆ ಕೆಲವರಿಂದ ಒತ್ತಡ ಬಂದಿತ್ತು. ಆದರೆ ಯಾವುದೇ ಪ್ರಭಾವಕ್ಕೆ ಒಳಗಾಗದೆ ಮೈಷುಗರ್ ಆಸ್ತಿಯನ್ನು ಸುಪರ್ದಿಗೆ ತೆಗೆದುಕೊಳ್ಳಲು ಕಟಿಬದ್ಧರಾಗಿದ್ದೇವೆ– ಸಿ.ಡಿ.ಗಂಗಾಧರ್ ಮೈಷುಗರ್ ಅಧ್ಯಕ್ಷ
ಮೈಷುಗರ್ ಆಸ್ತಿಯನ್ನು ಅಕ್ರಮವಾಗಿ ಬಳಕೆ ಮಾಡಿಕೊಳ್ಳುತ್ತಿರುವವರು ಈ ಆಸ್ತಿಗಳ ಸಂಬಂಧ ಸೂಕ್ತ ದಾಖಲೆಗಳಿದ್ದರೆ ಮೈಷುಗರ್ ಕಂಪನಿಗೆ ಒದಗಿಸಬೇಕು. ಇಲ್ಲವಾದಲ್ಲಿ ತೆರವುಗೊಳಿಸಿ ಮೈಷುಗರ್ ಕಂಪನಿ ಸುಪರ್ದಿಗೆ ನೀಡಬೇಕು. ಅನುಭವದಲ್ಲಿರುವವರಿಗೆ ಬೇರಾವುದೇ ಜೀವನಾಧಾರ ಇಲ್ಲವಾದಲ್ಲಿ ವಾಣಿಜ್ಯ ಭೂಮಿಗೆ ‘ಮಾಸಿಕ ಬಾಡಿಗೆ’ ಹಾಗೂ ವ್ಯವಸಾಯ ಭೂಮಿಗೆ ‘ವಾರ್ಷಿಕ ಗೇಣಿ’ಯನ್ನು ಮೈಷುಗರ್ ಕಂಪನಿಗೆ ಪಾವತಿಸಬೇಕು ಎಂದು ತಿಳಿಸಿದರು. ಈ ಸಂಬಂಧ ಅನುಭವದಲ್ಲಿರುವವರಿಗೆ ಯಾವುದೇ ರೀತಿಯ ನೋಟಿಸ್ ನೀಡಲಾಗುವುದಿಲ್ಲ. ಈಗಾಗಲೇ ಮೌಖಿಕವಾಗಿ ತಿಳಿಸಿದ್ದೇವೆ. ಸದರಿ ಆಸ್ತಿಯು ಸಂಪೂರ್ಣವಾಗಿ ಮೈಷುಗರ್ ಕಂಪನಿಯ ಒಡೆತನದಲ್ಲಿದ್ದು ತೆರವುಗೊಳಿಸಬೇಕು. ಇಲ್ಲವಾದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.