ADVERTISEMENT

ನಾಗಮಂಗಲ | ಕಣ್ಮನ ಸೆಳೆದ 28ನೇ ವರ್ಷದ ಲಕ್ಷದೀಪೋತ್ಸವ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 5:04 IST
Last Updated 17 ಫೆಬ್ರುವರಿ 2026, 5:04 IST
ನಾಗಮಂಗಲ ಪಟ್ಟಣದ ಸೌಮ್ಯಕೇಶವಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಹಾಶಿವರಾತ್ರಿ ಪ್ರಯುಕ್ತ 28ನೇ ವರ್ಷದ ವೈಭವದ ಲಕ್ಷ ದೀಪೋತ್ಸವ ಕಾರ್ಯಕ್ರಮವು ಭಾನುವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು 
ನಾಗಮಂಗಲ ಪಟ್ಟಣದ ಸೌಮ್ಯಕೇಶವಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಹಾಶಿವರಾತ್ರಿ ಪ್ರಯುಕ್ತ 28ನೇ ವರ್ಷದ ವೈಭವದ ಲಕ್ಷ ದೀಪೋತ್ಸವ ಕಾರ್ಯಕ್ರಮವು ಭಾನುವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು    

ನಾಗಮಂಗಲ: ತಾಲ್ಲೂಕಿನಾದ್ಯಂತ ಮಹಾಶಿವರಾತ್ರಿ ಪ್ರಯುಕ್ತ ಭಾನುವಾರ ಶಿವನ ದೇವಾಲಯಗಳಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ವಿಶೇಷ ಪೂಜೆ ಹೋಮ ಹವನಗಳು ಜರುಗಿದವು.

ಪಟ್ಟಣದ ಇತಿಹಾಸ ಪ್ರಸಿದ್ಧ ಸೌಮ್ಯಕೇಶವಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ 28ನೇ ವರ್ಷದ ವೈಭವದ ಲಕ್ಷ ದೀಪೋತ್ಸವ ವಿಜೃಂಭಣೆಯಿಂದ ನೆರವೇರಿತು. ದೇವಸ್ಥಾನದ ಮುಂಭಾಗದಲ್ಲಿನ 48 ಅಡಿ ಎತ್ತರದ ಗರುಡ ಕಂಭದ ಮೇಲೆ ಸರಪಳಿಯ ಸಹಾಯದಿಂದ ದೀಪ ಹಚ್ಚುವ ಮೂಲಕ ಕಾಂಗ್ರೆಸ್ ಮುಖಂಡ ಸುನಿಲ್ ಲಕ್ಷ್ಮೀಕಾಂತ್ ಹಾಗೂ ಕೋರಮಂಗಲ ವಾಣಿಜ್ಯ ತೆರಿಗೆ ಆಯುಕ್ತ ಎಂ.ಮಲ್ಲೇಶ್ ಲಕ್ಷದೀಪೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ತೀರ್ಥ ಪ್ರಸಾದ ವಿನಿಯೋಗ ನಡೆಯಿತು.

ಪಟ್ಟಣದ ಭುವನೇಶ್ವರ ದೇವಸ್ಥಾನ, ವೀರಭದ್ರೇಶ್ವರಸ್ವಾಮಿ ದೇವಸ್ಥಾನ, ನಗರೇಶ್ವರಸ್ವಾಮಿ ದೇಗುಲ, ಶನೇಶ್ವರ ಮತ್ತು ಮುನೇಶ್ವರ ದೇವಸ್ಥಾನಗಳಲ್ಲಿ ಭಾನುವಾರ ಬೆಳಗಿನಿಂದಲೇ ಹೋಮ ಹವನಾದಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.

ADVERTISEMENT

ಪಡುವಲಟ್ಟಣ ಗ್ರಾಮದ ಕಾನನ ಬ್ರಹ್ಮಲಿಂಗೇಶ್ವರ, ದೊಡ್ಡಜಕ್ಕನಹಳ್ಳಿಯ ವೆಂಕಟರಮಣಸ್ವಾಮಿ ದೇವಸ್ಥಾನ, ಕಲ್ಲಿನಾಥಪುರ ಗ್ರಾಮದ ಕಲ್ಲೇಶ್ವರಸ್ವಾಮಿ, ದಂ ಜಕ್ಕನಹಳ್ಳಿ ಗ್ರಾಮದ ಮಹಾಗುರು ಶನೇಶ್ವರ, ಅರಕೆರೆ ಗ್ರಾಮದ ಶನೇಶ್ವರ, ವಜ್ರಮುನೇಶ್ವರ, ಲಕ್ಷ್ಮೀದೇವಿ ದೇವಸ್ಥಾನ, ದಾಸಗೋಳಪುರ ಗ್ರಾಮದ ಶನಿದೇವರ ದೇವಸ್ಥಾನ ಮತ್ತು ಬೀರೇಶ್ವರಪುರ ಗ್ರಾಮದ ದೊಡ್ಡಯ್ಯಸ್ವಾಮಿ, ಹುಲ್ಲೇಕೆರೆ, ತೊಳಲಿ, ಬೆಟ್ಟದಮಲ್ಲೇನಹಳ್ಳಿ, ತಟ್ಟಹಳ್ಳಿ, ದೇವಲಾಪುರ, ಬಿಂಡಿಗನವಿಲೆ, ಬೆಳ್ಳೂರು ಮತ್ತು ಬೋಗಾದಿಯ ಈಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮತ್ತು ಭಜನಾ ಕಾರ್ಯಕ್ರಮ ನಡೆದವು.

ಅಖಂಡ ಭಜನಾ ಮೇಳ: ತಾಲ್ಲೂಕಿನ ಪುರಾಣ ಪ್ರಸಿದ್ಧ ಆದಿಚುಂಚನಗಿರಿಯ ಕಾಲಭೈರವೇಶ್ವರ ದೇವಾಲಯದಲ್ಲಿ ಬೆಳಗಿನಿಂದ ವಿಶೇಷ ಪೂಜೆ ಅಲಂಕಾರ ಹೋಮ ನಡೆದವು. ಭಾನುವಾರ ಬೆಳಗಿನ ಜಾವದಿಂದ ಸೋಮವಾರ ಬೆಳಗಿನ ಜಾವದ ವರೆಗೆ ಅಖಂಡ ಭಜನಾಮೇಳ ಜರುಗಿತು. ಭಜನಾ ಮೇಳದ ನಂತರ ಮಠದ ಪರಂಪರೆಯಂತೆ ಅನ್ನಪೂರ್ಣೇಶ್ವರಿ ಸಮುದಾಯ ಭವನದಲ್ಲಿ ರಾಶಿಪೂಜೆ ನೆರವೇರಿಸಿ ನಂತರ ಭಕ್ತರಿಗೆ ಪ್ರಸಾದ ವಿನಿಯೋಗ ನೆರವೇರಿಸಲಾಯಿತು.

ನಾಗಮಂಗಲ ಪಟ್ಟಣದ ಶ್ರೀ ಸೌಮ್ಯಕೇಶವಸ್ವಾಮಿ ದೇವಸ್ಥಾನದ ಮುಂಭಾಗ ಮಹಾಶಿವರಾತ್ರಿ ಪ್ರಯುಕ್ತ ೨೮ನೇ ವರ್ಷದ ವೈಭವದ ಲಕ್ಷ ದೀಪೋತ್ಸವದಲ್ಲಿ ಕಲಾವಿದರ ಕೈ ಚಳಕದಿಂದ ಅರಳಿದ ಶಿವನ ಭಾವಚಿತ್ರ
ಮಹಾಶಿವರಾತ್ರಿ ಪ್ರಯುಕ್ತ ಭಾನುವಾರ ಸಂಜೆ ಶ್ರೀಕ್ಷೇತ್ರ ಆದಿಚುಂಚನಗಿರಿ ಮಠದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಸರ್ವಾಂಲಕೃತ ಸಿದ್ಧಸಿಂಹಾಸನದ ಮೇಲೆ ಆಸೀನರಾಗಿ ಭಕ್ತರಿಗೆ ದರ್ಶನ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.