ADVERTISEMENT

ಮೇಲುಕೋಟೆ | ಎಲ್ಲಕ್ಕಿಂತ ರಂಗ ಚಳವಳಿ ಶಕ್ತಿಯುತ: ನಾಗತಿಹಳ್ಳಿ ಚಂದ್ರಶೇಖರ್ ಅಭಿಮತ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 6:16 IST
Last Updated 23 ಡಿಸೆಂಬರ್ 2025, 6:16 IST
ಪಾಂಡವಪುರ ತಾಲ್ಲೂಕಿನ ಮೇಲುಕೋಟೆ ಪು.ತಿ.ನ.ಕಲಾಮಂದಿರದಲ್ಲಿ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ರಂಗನಮನ–ಹೊಂಬಾಳೆ ನಾಟಕೋತ್ಸವವನ್ನು ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ಉದ್ಫಾಟಿಸಿದರು. ಸುನೀತಾ ಪುಟ್ಟಣ್ಣಯ್ಯ, ಸಂತೋಷ್ ಕೌಲಗಿ, ಹರವು ದೇವೇಗೌಡ, ಕೆ.ಎನ್.ವಿಜಯಕುಮಾ‌ರ್, ಜ್ಞಾನೇಶ್ ನರಹಳ್ಳಿ ಪಾಲ್ಗೊಂಡಿದ್ದರು
ಪಾಂಡವಪುರ ತಾಲ್ಲೂಕಿನ ಮೇಲುಕೋಟೆ ಪು.ತಿ.ನ.ಕಲಾಮಂದಿರದಲ್ಲಿ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ರಂಗನಮನ–ಹೊಂಬಾಳೆ ನಾಟಕೋತ್ಸವವನ್ನು ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ಉದ್ಫಾಟಿಸಿದರು. ಸುನೀತಾ ಪುಟ್ಟಣ್ಣಯ್ಯ, ಸಂತೋಷ್ ಕೌಲಗಿ, ಹರವು ದೇವೇಗೌಡ, ಕೆ.ಎನ್.ವಿಜಯಕುಮಾ‌ರ್, ಜ್ಞಾನೇಶ್ ನರಹಳ್ಳಿ ಪಾಲ್ಗೊಂಡಿದ್ದರು   

ಮೇಲುಕೋಟೆ (ಪಾಂಡವಪುರ): ‘ಎಲ್ಲ ಚಳವಳಿಗಿಂತ ರಂಗ ಚಳವಳಿ ಶಕ್ತಿಯುತವಾದುದು. ನಾಟಕ ಹೊಸ ಚಿಂತನೆ ಮತ್ತು ಬದಲಾವಣೆಯನ್ನು ಸದ್ದಿಲ್ಲದೆ ಮಾಡುತ್ತದೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ನಾಟಕಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ. ಆದರೆ, ಯುವಕರು ಸಾಮಾಜಿಕ ಜಾಲತಾಣ ಮತ್ತು ದೃಶ್ಯ ಮಾಧ್ಯಮಗಳ ಕಡೆ ಗಮನಹರಿಸುತ್ತಿರುವುದರಿಂದ ನಿರೀಕ್ಷಿತ ಮಟ್ಟದಲ್ಲಿಲ್ಲದಿರುವುದು ವಿಷಾದನೀಯ’ ಎಂದು ಸಾಹಿತಿ, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.

ಮೇಲುಕೋಟೆಯ ಪು.ತಿ.ನ.ಕಲಾಮಂದಿರದಲ್ಲಿ ದೃಶ್ಯ ಟ್ರಸ್ಟ್‌, ಹಸಿರು ಭೂಮಿ ಟ್ರಸ್ಟ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪು.ತಿ.ನ.ಟ್ರಸ್ಟ್ ಸಹಕಾರದಲ್ಲಿ ರೈತ ನಾಯಕ ದಿ.ಕೆ.ಎಸ್.ಪುಟ್ಟಣ್ಣಯ್ಯ ಅವರಿಗೆ ‘ರಂಗನಮನ–ಹೊಂಬಾಳೆ ನಾಟಕೋತ್ಸವ–2025’ವನ್ನು  ಭಾನುವಾರ ರಾತ್ರಿ ಉದ್ಫಾಟಿಸಿ ಅವರು ಮಾತನಾಡಿದರು.

‘ರಂಗಭೂಮಿ ಸಾಂಸ್ಕೃತಿಕ ಲೋಕದ ತಾಯಿ ಇದ್ದಂತೆ. ವೃತ್ತಿ ರಂಗಭೂಮಿಯಲ್ಲಿ ಬೆಳೆದು ಬಂದು ರಾಜ್ ಕುಮಾರ್ ಚಲನಚಿತ್ರದಲ್ಲಿ ಹೆಸರು ಮಾಡಿದರು. ಗುಬ್ಬಿ ವೀರಣ್ಣ ಅವರಂತಹವರು ದೊಡ್ಡ ಮಟ್ಟದಲ್ಲಿ ಬೆಳೆದರು. ಅದೆಷ್ಟೋ ಗ್ರಾಮೀಣ ಸಾಂಸ್ಕೃತಿಕ ಪ್ರತಿಭೆಗಳಿಗೆ ಅವಕಾಶ ದೊರೆಯದೆ ಕಮರಿಹೋಗುತ್ತಿದ್ದಾರೆ. ಅದರಲ್ಲೂ ಹೆಣ್ಣು ಪ್ರತಿಭೆಗಳನ್ನು ಶೋಧಿಸಿ ಪ್ರೋತ್ಸಾಹ ತುಂಬುವ ಕೆಲಸವಾಗಬೇಕಿದೆ’ ಎಂದು ಹೇಳಿದರು.

ADVERTISEMENT

ಇಲ್ಲಿನ ನಾಟಕೋತ್ಸವದಲ್ಲಿ ‘ನನ್ನ ತೇಜಸ್ವಿ’ ನಾಟಕ ಪ್ರದರ್ಶನಗೊಳ್ಳುತ್ತಿರುವುದು ಅರ್ಥಪೂರ್ಣವಾಗಿದೆ. ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ನಗರ ತೊರೆದು ಕಾಡಿಗೆ ಹೋಗಿ ಕನ್ನಡ ಸಾಹಿತಿ, ಸಾಂಸ್ಕೃತಿಕ ಲೋಕಕ್ಕೆ ಕರ್ವಾಲೋ ಕಾದಂಬರಿ ನೀಡಿದರು. ಪೂರ್ಣಚಂದ್ರ ತೇಜಸ್ವಿ ಮತ್ತು ಕಡಿದಾಳು ಶಾಮಣ್ಣ ರೈತ ಚಳವಳಿಗೆ ಸಾಂಸ್ಕತಿಕ, ವೈಚಾರಿಕ ಶಕ್ತಿ ತುಂಬಿದರು ಎಂದು ನೆನಪಿಸಿಕೊಂಡರು.

ಕೆ.ಎ.ಎಸ್. ನಿವೃತ್ತ ಅಧಿಕಾರಿ ಎಂ.ಕೆ.ಕೆಂಪೇಗೌಡ ಅವರಿಗೆ ಹಸಿರು ಪುರಸ್ಕಾರ ನೀಡಿ ಗೌರವಿಸಲಾಯಿತು.
ರೈತ ಸಂಘದ ವರಿಷ್ಠೆ ಸುನೀತಾ ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸಿದ್ದರು. ಜನಪದ ಸೇವಾ ಟ್ರಸ್ಟ್‌ನ ಸಂತೋಷ್ ಕೌಲಗಿ, ಪತ್ರಕರ್ತ ಹರವು ದೇವೇಗೌಡ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್.ವಿಜಯ್‌ ಕುಮಾರ್, ಹಸಿರು ಭೂಮಿ ಟ್ರಸ್ಟ್‌ನ ಜ್ಞಾನೇಶ್ ನರಹಳ್ಳಿ, ದೃಶ್ಯ ಟ್ರಸ್ಟ್‌ನ ಗಿರೀಶ್ ಮೇಲುಕೋಟೆ ಇದ್ದರು.

ಸಾಂಸ್ಕೃತಿಕ ಚಳವಳಿಯಾಗಿರುವ ರಂಗಭೂಮಿ ಪ್ರಶ್ನಿಸುವ ಶಕ್ತಿಯಾಗಿದ್ದು ರೈತ ನಾಯಕರಾದ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಮತ್ತು ಕೆ.ಎಸ್.ಪುಟ್ಟಣ್ಣಯ್ಯ ಅವರು ಪ್ರಶ್ನಿಸುವ ಹಾಗೂ ಪ್ರತಿಭಟಿಸುವ ಪ್ರಜಾಪ್ರಭುತ್ವದ ದೊಡ್ಡ ಶಕ್ತಿಯಾಗಿದ್ದರು
ನಾಗತಿಹಳ್ಳಿ ಚಂದ್ರಶೇಖರ್ ಸಾಹಿತಿ ಚಲನಚಿತ್ರ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.