ADVERTISEMENT

ಕಾಂಗ್ರೆಸ್ ಪರ ಪ್ರಚಾರ ಸಾಬೀತು ಪಡಿಸಿ: ಜೆಡಿಎಸ್ ಸದಸ್ಯರ ಸವಾಲು

​ಪ್ರಜಾವಾಣಿ ವಾರ್ತೆ
Published 28 ಮೇ 2023, 14:44 IST
Last Updated 28 ಮೇ 2023, 14:44 IST
ಮಳವಳ್ಳಿ ಪಟ್ಟಣದ ಸುಲ್ತಾನ್ ರಸ್ತೆಯ ತಮ್ಮ ನಿವಾಸದಲ್ಲಿ ಪುರಸಭೆಯ ಜೆಡಿಎಸ್ ಸದಸ್ಯರಾದ ಲಕ್ಷ್ಮಮ್ಮ ಹಾಗೂ ಇಂದ್ರಮ್ಮ ಮಾತನಾಡಿದರು.
ಮಳವಳ್ಳಿ ಪಟ್ಟಣದ ಸುಲ್ತಾನ್ ರಸ್ತೆಯ ತಮ್ಮ ನಿವಾಸದಲ್ಲಿ ಪುರಸಭೆಯ ಜೆಡಿಎಸ್ ಸದಸ್ಯರಾದ ಲಕ್ಷ್ಮಮ್ಮ ಹಾಗೂ ಇಂದ್ರಮ್ಮ ಮಾತನಾಡಿದರು.   

ಮಳವಳ್ಳಿ: ‘ನಾವು ಎಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿಲ್ಲ, ನಮ್ಮ ಮೇಲಿನ ಆರೋಪವನ್ನು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಸಾಬೀತುಪಡಿಸಿದರೆ ಪುರಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಸಿದ್ಧ' ಎಂದು ಪುರಸಭೆಯ ಜೆಡಿಎಸ್ ಸದಸ್ಯರಾದ ಲಕ್ಷ್ಮಮ್ಮ ಹಾಗೂ ಇಂದ್ರಮ್ಮ ಸವಾಲು ಹಾಕಿದರು.


ಪಟ್ಟಣದ ಸುಲ್ತಾನ್ ರಸ್ತೆಯ ಲಕ್ಷ್ಮಮ್ಮ ಅವರ ನಿವಾಸದಲ್ಲಿ ಅವರು ಮಾತನಾಡಿದರು.

‘ಜೆಡಿಎಸ್‌ನಿಂದ ಆಯ್ಕೆಯಾಗಿರುವ 3ನೇ ವಾರ್ಡ್‌ನ ಲಕ್ಷ್ಮಮ್ಮ ಹಾಗೂ 22ನೇ ವಾರ್ಡ್‌ನ ಇಂದ್ರಮ್ಮ ಹಾಗೂ ಅವರ ಕುಟುಂಬಸ್ಥರು ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ವಿರುದ್ಧ ಪ್ರಚಾರ ನಡೆಸಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಪರಾಜಿತ ಅಭ್ಯರ್ಥಿ ಡಾ.ಕೆ.ಅನ್ನದಾನಿ ಇಬ್ಬರೂ ಪುರಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದ್ದರು.

ADVERTISEMENT

ಸದಸ್ಯೆ ಇಂದ್ರಮ್ಮ ಮಾತನಾಡಿ, ನಾವು ಎಲ್ಲಿಯೂ ಪಕ್ಷದ ವಿರುದ್ಧ ಪ್ರಚಾರ ನಡೆಸಿಲ್ಲ, ಅಲ್ಲದೇ ನಮ್ಮನ್ನು ಜೆಡಿಎಸ್ ಪಕ್ಷದ ಯಾವೊಬ್ಬ ಮುಖಂಡರೂ ಪ್ರಚಾರಕ್ಕೆ ಬನ್ನಿ ಎಂದು ಕರೆದಿಲ್ಲ. ಡಾ.ಕೆ.ಅನ್ನದಾನಿ ಅವರಿಗೆ ಶಾಸಕರಾಗಿದ್ದ ವೇಳೆಯಿಂದಲೂ ನಮ್ಮನ್ನು ಕಂಡರೆ ಆಗುತ್ತಿರಲಿಲ್ಲ. ನಾವು ಪುರಸಭೆಗೆ ಆಯ್ಕೆಯಾಗಿರುವುದನ್ನು ಸಹಿಸದ ಅವರ ನಿರ್ಲಕ್ಷ್ಯವೇ ಈ ಬಾರಿಯ ಚುನಾವಣೆಯ ಸೋಲಿಗೆ ಕಾರಣವಾಗಿದೆ’ ಎಂದು ಕಿಡಿ ಕಾರಿದರು.

‘ಮುಂದಿನ ದಿನಗಳಲ್ಲಿ ನಡೆಯುವ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸ್ಥಾಯಿ ಸಮಿತಿ ಸೇರಿದಂತೆ ಬೇರೆ ಯಾವುದೇ ಚುನಾವಣೆಗಳಲ್ಲಿ ಪಕ್ಷ ತೆಗೆದುಕೊಳ್ಳುವ ನಿರ್ಧಾರವನ್ನು ಬೆಂಬಲಿಸುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ ನಾವು ಎಂದಿಗೂ ಜೆಡಿಎಸ್ ನ ಸದಸ್ಯರೇ’ ಎಂದು ಸೃಷ್ಟಪಡಿಸಿದರು.

3ನೇ ವಾರ್ಡ್‌ನ ಸದಸ್ಯೆ ಲಕ್ಷ್ಮಮ್ಮ ಮಾತನಾಡಿ, ‘ನಾವು ಪಕ್ಷದ ಪರ ಕೆಲಸ ಮಾಡಿಕೊಂಡು ಬಂದಿದ್ದು, ನಮ್ಮ ಪತಿ ಯಾವ ಪಕ್ಷಕ್ಕೆ ಬೇಕಾದರೂ ಬೆಂಬಲ ನೀಡಬಹುದು. ಅದು ಅವರಿಗೆ ಸಂಬಂಧಿಸಿದ ವಿಷಯ. ಸುಮ್ಮನೆ ನಮ್ಮ ಮೇಲೆ ಆರೋಪ ಮಾಡುವ ಬದಲು, ಪಕ್ಷದ ಸೋಲಿಗೆ ಕಾರಣ ಏನೂ ಎಂಬುದನ್ನು ಹುಡುಕಿ ಅದಕ್ಕೆ ಪರಿಹಾರ ಕಂಡುಕೊಳ್ಳಲಿ. ನಾವು ನಮ್ಮ ಅವಧಿ ಮುಗಿಯುವರೆಗೂ ಪಕ್ಷದ ತೀರ್ಮಾನಗಳಿಗೆ ಬದ್ಧರಾಗಿರುತ್ತೇವೆ’ ಎಂದು ಸೃಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.