ADVERTISEMENT

ಮಳವಳ್ಳಿ| ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚುವರಿ ಸೇವೆ: ಗುಣಮಟ್ಟದ ಚಿಕಿತ್ಸೆ

ಟಿ.ಕೆ.ಲಿಂಗರಾಜು
Published 26 ಅಕ್ಟೋಬರ್ 2025, 3:57 IST
Last Updated 26 ಅಕ್ಟೋಬರ್ 2025, 3:57 IST
<div class="paragraphs"><p>ಮಳವಳ್ಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಐಸಿಯು</p></div>

ಮಳವಳ್ಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಐಸಿಯು

   

ಮಳವಳ್ಳಿ: ಗುಣಮಟ್ಟದ ಚಿಕಿತ್ಸೆಯಿಂದಾಗಿ ಮಳವಳ್ಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಿನದಿಂದ ದಿನಕ್ಕೆ ಚಿಕಿತ್ಸೆ ಪಡೆಯುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಸರ್ಕಾರಿ ಆಸ್ಪತ್ರೆ ಜನಸ್ನೇಹಿಯಾಗಿದೆ.

2023ರವರೆಗೆ ಹೆರಿಗೆ, ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಮಾತ್ರ ಸೀಮಿತವಾಗಿದ್ದ ಆಸ್ಪತ್ರೆಯಲ್ಲಿ ಈಗ 5 ಶಸ್ತ್ರಚಿಕಿತ್ಸೆ ಕೊಠಡಿ (ಆಪರೇಷನ್‌ ಥಿಯೇಟರ್‌)ಗಳಿವೆ. ಕಿವಿ, ಗಂಟಲು, ಮೂಳೆ, ಕಣ್ಣಿನ ಶಸ್ತ್ರಚಿಕಿತ್ಸೆ ಸೇರಿದಂತೆ ಹಲವಾರು ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳು ಇಲ್ಲಿ ನಡೆಯುತ್ತಿವೆ.

ADVERTISEMENT

2023ರಲ್ಲಿ 465, 2024ರಲ್ಲಿ 540, 2025ರಲ್ಲಿ 560 ಶಸ್ತ್ರಚಿಕಿತ್ಸೆಗಳು ನಡೆದಿವೆ. ಒಳರೋಗಿಗಳ ದಾಖಲಾತಿ ಸಂಖ್ಯೆ ಶೇ 23-26ರಿಂದ ಶೇ 60-65ಕ್ಕೆ ಏರಿಕೆಯಾಗಿದೆ.

ರೋಗಿಗಳಿಗೆ ಉತ್ತಮ ತಿಂಡಿ-ಊಟದ ಸೌಲಭ್ಯ ಕಲ್ಪಿಸಲಾಗಿದೆ.

ಆಸ್ಪತ್ರೆಯಲ್ಲಿ ಔಷಧ ಲಭ್ಯ: ಹೊರಗೆ ಔಷಧ ಚೀಟಿ ಬರೆದುಕೊಡುವ ಪ್ರವೃತ್ತಿಗೆ ಕಡಿವಾಣ ಹಾಕಲು ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಔಷಧ ಸರಬರಾಜಿಗೆ ವಾರ್ಷಿಕ ಗುತ್ತಿಗೆ ನೀಡಲಾಗಿದೆ. ಇದರಿಂದ ಶೇ 95ರಷ್ಟು ಔಷಧ ಆಸ್ಪತ್ರೆಯಲ್ಲಿಯೇ ದೊರೆಯುವಂತಾಗಿದೆ. ಖಾಸಗಿ ಆಸ್ಪತ್ರೆಗಿಂತ ಉತ್ತಮ ಚಿಕಿತ್ಸೆ ನೀಡುವಲ್ಲಿ ಆಡಳಿತ ವೈದ್ಯಾಧಿಕಾರಿ ಡಾ.ಎಂ.ಡಿ.ಸಂಜಯ್ ಹಾಗೂ ವೈದ್ಯರು ಶ್ರಮಿಸುತ್ತಿದ್ದಾರೆ ಎಂಬ ಪ್ರಶಂಸೆ ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿದೆ.

ಡಯಾಲಿಸಿಸ್‌ ಸೌಲಭ್ಯ: ರಾಜ್ಯದ ತಾಲ್ಲೂಕು ಕೇಂದ್ರಗಳಲ್ಲಿ ಇರುವ ಕೆಲವೇ ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳಲ್ಲಿ ಮಳವಳ್ಳಿ ಆಸ್ಪತ್ರೆಯೂ ಒಂದಾಗಿದ್ದು, ಆಸ್ಪತ್ರೆಯ ಶುಚಿತ್ವ ಕಾಪಾಡಲು ಪ್ರತಿ ಶನಿವಾರ ಹಾಗೂ ಪ್ರತಿ ಗುರುವಾರ ನರ್ಸಿಂಗ್ ಅಧಿಕಾರಿಗಳ ಸಭೆ ನಡೆಸಿ ರೋಗಿಗಳ ಶುಶ್ರೂಷೆಯ ಬಗ್ಗೆ ಕಾಳಜಿ ವಹಿಸಲಾಗುತ್ತಿದೆ.  2023ರಲ್ಲಿ 4 ಯಂತ್ರಗಳಿಂದ 23 ಮಂದಿಗೆ ಡಯಾಲಿಸಿಸ್ ಮಾಡಲಾಗುತ್ತಿತ್ತು.

ಪ್ರಸ್ತುತ ಯಂತ್ರಗಳ ಸಂಖ್ಯೆ 10ಕ್ಕೇರಿದೆ.

82 ಮಂದಿ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದರು.

ಒಪಿಡಿ ಚೀಟಿ ಪಡೆಯಲು ಪುರುಷ-ಮಹಿಳೆಯರಿಗೆ ಪ್ರತ್ಯೇಕವಾಗಿ ಕೌಂಟರ್‌ಗಳನ್ನು ತೆರೆದು ದಾಖಲಾತಿಗಾಗಿ ಅಲೆದಾಟ ತಪ್ಪಿಸಲಾಗಿದೆ. 9 ವಿಶೇಷ, 19 ಐಸಿಯು ಸೇರಿದಂತೆ 130 ಬೆಡ್‌ಗಳ ಸಾಮರ್ಥ್ಯವನ್ನು ಹೊಂದಿದೆ. ಈಗ ಪ್ರತಿನಿತ್ಯವೂ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಯುತ್ತಿದೆ.

ಮುಂದಿನ ದಿನಗಳಲ್ಲಿ ರೋಗಿಗಳ ಸಹಾಯಕರಿಗೆ ತಂಗುದಾಣ ನಿರ್ಮಿಸುವುದಾಗಿ ಶಾಸಕರು ಭರವಸೆ ನೀಡಿದ್ದಾರೆ ಎಂದು ಸ್ಥಳೀಯರಾದ ಸತೀಶ್‌ ಹೇಳಿದರು.

ಸದ್ಯದಲ್ಲಿಯೇ ಶೈತ್ಯಾಗಾರ 

ಹಲವಾರು ದಿನಗಳಿಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೂಕ್ತ ಸೌಲಭ್ಯಗಳನ್ನೊಳಗೊಂಡ ಶವಾಗಾರ ಇಲ್ಲವಾಗಿದೆ. ಅಪಘಾತ ಸೇರಿದಂತೆ ಇನ್ನಿತರ ಅವಘಡಗಳು ಸಂಭವಿಸಿದಾಗ ಶವಗಳ ಸಂರಕ್ಷಣೆಗೆ ಮಂಡ್ಯಕ್ಕೆ ತೆಗೆದುಕೊಂಡು ಹೋಗುವ ಸ್ಥಿತಿ ಇತ್ತು. ಇದೀಗ ಶಾಸಕ ಪಿ.ಎಂ. ನರೇಂದ್ರಸ್ವಾಮಿ ವಿಶೇಷ ಕಾಳಜಿಯಿಂದ ₹ 90 ಲಕ್ಷ ವೆಚ್ಚದಲ್ಲಿ ಆಧುನಿಕ ಶವಾಗಾರ ಮತ್ತು ಶೈತ್ಯಾಗಾರ ನಿರ್ಮಾಣ ಕಾಮಗಾರಿಗೆ ಅನುಮೋದನೆ ದೊರೆತಿದೆ. ಶೀಘ್ರವೇ ಕಾಮಗಾರಿ ಆರಂಭವಾಗಲಿದೆ. ಖಾಲಿ ಇರುವ ರೇಡಿಯಾಲಜಿಸ್ಟ್, ಚರ್ಮರೋಗ ವೈದ್ಯರ ಹುದ್ದೆಯೂ ಭರ್ತಿಯಾಗಿದೆ ಎಂದು ಆಡಳಿತ ವೈದ್ಯಾಧಿಕಾರಿ ಡಾ.ಎಂ.ಡಿ.ಸಂಜಯ್ ತಿಳಿಸಿದರು. 

116 ರೀತಿಯ ಪರೀಕ್ಷೆ

‌ಈ ಹಿಂದೆ ಮಳವಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ಮಾದರಿಯಲ್ಲಿ 35 ಇದ್ದ ಪರೀಕ್ಷೆಗಳ ಸಂಖ್ಯೆ ಈಗ 116ಕ್ಕೇರಿಸಲಾಗಿದೆ. ಸಣ್ಣ ಪುಟ್ಟ ಲೋಪದೋಷಗಳಿಂದಾಗಿ ಮೂಲೆಗುಂಪಾಗಿದ್ದ ಯಂತ್ರಗಳನ್ನು ಸರಿಪಡಿಸಿ ಪರೀಕ್ಷಾ ವರದಿಯ ನಿಖರತೆಯನ್ನು ಕೇಂದ್ರ ಸರ್ಕಾರದ ಪ್ರಮಾಣಿತ ಪ್ರಯೋಗಾಲಯದಲ್ಲಿ ಪರೀಕ್ಷಿಸಿ ಖಚಿತ ಪಡಿಸಿಕೊಂಡು ವರದಿ ಸಾಮ್ಯತೆ ಮಾಡಲಾಗುತ್ತಿದೆ. ಆಸ್ಪತ್ರೆಗೆ ಬಂದರೆ ಎಲ್ಲ ರೀತಿಯ ಚಿಕಿತ್ಸೆ ಇಲ್ಲಿಯೇ ಪಡೆಯುವ ಆತ್ಮವಿಶ್ವಾಸ ಮೂಡಿಸಲಾಗಿದೆ ಎಂದು ಆಡಳಿತ ವೈದ್ಯಾಧಿಕಾರಿ ವಿವರಿಸಿದರು.

ಸರ್ಕಾರಿ ಆಸ್ಪತ್ರೆ ವೈದ್ಯರ ತಂಡದ ಸಹಕಾರದಿಂದ ಗ್ರಾಮೀಣ ಪ್ರದೇಶದ ಜನರಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಶ್ರಮಿಸಲಾಗುತ್ತಿದ್ದು, ಜನರು ಸರ್ಕಾರಿ ಆಸ್ಪತ್ರೆ ಬಗೆಗಿನ ಅಸಡ್ಡೆ ಬಿಡಬೇಕು
ಡಾ. ಎಂ.ಡಿ.ಸಂಜಯ್ ಆಡಳಿತ ವೈದ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.