
ಪಾಂಡವಪುರ: ಪ್ರತಿಭಾವಂತರಾಗಿರುವ ಗ್ರಾಮೀಣ ಮಕ್ಕಳಿಗೆ ಪ್ರೋತ್ಸಾಹ ನೀಡಿದರೆ ಏನನ್ನಾದರೂ ಸಾಧಿಸುತ್ತಾರೆ ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ಪಟ್ಟಣದ ಆದಿಚುಂಚನಗಿರಿ ಟ್ರಸ್ಟ್ ನ ಬಿಜಿಎಸ್ ಶಾಲೆಯಲ್ಲಿ ಬಾಲಗಂಗಾಧರನಾಥ ಸ್ವಾಮಿಗಳ 82ನೇ ಜಯಂತ್ಯುತ್ಸವ ಹಾಗೂ 13ನೇ ಪುಣ್ಯ ಸಂಸ್ಮರಣೋತ್ಸವ ಮತ್ತು ಬಿಜಿಎಸ್ ಶಾಲಾ ಕಾಲೇಜುಗಳ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಮಕ್ಕಳ ಆಸಕ್ತಿಕ್ಕನುಗುಣವಾಗಿ ಕಲಿಕೆಯನ್ನು ಪ್ರೋತ್ಸಾಹಿಸಿ ಬೆಳೆಸಬೇಕಿದೆ. ಮಕ್ಕಳಿಗೆ ಯಾವುದೇ ಒತ್ತಡ ಹೇರಬೇಡಿ’ ಎಂದರು.
ಶಾಲೆಯ ಜ್ಞಾನಸಿರಿ ಸಂಚಿಕೆ ಬಿಡುಗಡೆಗೊಳಿಸಿದ ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಭರಣ ಮಾತನಾಡಿ, ‘ಮನುಷ್ಯನ ಭಾವನಾತ್ಮಕ ಸಂಬಂಧಗಳು ಕೆಟ್ಟು ಹೋಗುತ್ತಿವೆ. ಈ ಸಂಬಂಧಗಳನ್ನು ಮೊಬೈಲ್ ಫೋನ್ ಕಿತ್ತು ಹಾಕುತ್ತಿದೆ. ದೊಡ್ಡವರ ಹಾದಿ ಹಿಡಿದಿರುವ ಮಕ್ಕಳು ಕೂಡ ಮೊಬೈಲ್ ಫೋನಿಗೆ ಬಲಿಯಾಗುತ್ತಿದ್ದಾರೆ. ಪುಸ್ತಕ ಓದುವುದನ್ನು ಬಿಟ್ಟು ಮೊಬೈಲ್ ಫೋನ್ ಹಿಡಿದು ಓದುವ ಸಂಸ್ಕೃತಿಗೆ ದಾಸರಾಗುತ್ತಿರುವುದು ಬೇಸರದ ಸಂಗತಿ’ ಎಂದರು.
ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಶಿರಹಟ್ಟಿಯ ಭಾವೈಕ್ಯತಾ ಮಹಾಪೀಠದ ಉತ್ತರಾಧಿಕಾರಿ ಫಕೀರದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ‘ಇಂದಿನ ಮಕ್ಕಳನ್ನು ಓದಿನ ಕಡೆಗೆ ತೊಡಗಿಸಲು ಪೋಷಕರು ಮತ್ತು ಶಿಕ್ಷಕರು ಶ್ರಮವಹಿಸಬೇಕಿದೆ’ ಎಂದರು.
ಬಿಜಿಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜೆ.ಎನ್.ರಾಮಕೃಷ್ಣೇಗೌಡ, ಚಲನಚಿತ್ರ ನಟರಾದ ಭವ್ಯ, ಶರಣ್, ಚಲನಚಿತ್ರ ಸಾಹಿತಿ ವಿ.ನಾಗೇಂದ್ರಪ್ರಸಾದ್, ಖ್ಯಾತ ಮಿಮಿಕ್ರಿ ಕಲಾವಿದ ಜೂನಿಯರ್ ಅಂಬರೀಶ್, ಪ್ರಾಂಶುಪಾಲ ರಘುಕುಮಾರ್ ಇದ್ದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.