
ಶ್ರೀರಂಗಪಟ್ಟಣ: ಮಹಾತ್ಮ ಗಾಂಧಿ ವಿಚಾರ ಪ್ರಣೀತ ಸರ್ವೋದಯ ಮೇಳ ಪಟ್ಟಣದಲ್ಲಿ ಫೆ.10ರಿಂದ ಮೂರು ದಿನಗಳ ಕಾಲ ನಡೆಯಲಿದೆ.
ಇಲ್ಲಿನ ಪಶ್ಚಿಮವಾಹಿನಿ ಬಳಿ ಕಾವೇರಿ ನದಿಯಲ್ಲಿ 1948ರ ಫೆ.12ರಂದು ಗಾಂಧೀಜಿ ಚಿತಾಭಸ್ಮವನ್ನು ವಿಸರ್ಜಿಸಿದ್ದು, ಆ ನಿಮಿತ್ತ ಪ್ರತಿ ವರ್ಷ ಫೆ.10ರಿಂದ ಮೂರು ದಿನಗಳ ಕಾಲ ಸರ್ವೋದಯ ಮೇಳ ನಡೆಯುತ್ತದೆ. ಮೈಸೂರು ರಾಜ್ಯದ ಅಂದಿನ ಮುಖ್ಯಮಂತ್ರಿ ಕೆ.ಸಿ. ರೆಡ್ಡಿ ಗಾಂಧೀಜಿ ಚಿತಾಭಸ್ಮವನ್ನು ಇಲ್ಲಿ ವಿಸರ್ಜಿಸಿದ ಕುರುಹಾಗಿ ಪಶ್ಚಿಮವಾಹಿನಿ ಬಳಿ ಸ್ಮಾರಕ ಸ್ಥಾಪಿಸಲಾಗಿದೆ.
ಹಂಪನಾ ಆಯ್ಕೆ: ಇಲ್ಲಿನ ಸುಬ್ರಹ್ಮಣ್ಯೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯುವ ಈ ಬಾರಿಯ ಸರ್ವೋದಯ ಮೇಳದ ಆಚಾರ್ಯರಾಗಿ ನಾಡೋಜ ಪ್ರೊ.ಹಂ.ಪ. ನಾಗರಾಜಯ್ಯ ಆಯ್ಕೆಯಾಗಿದ್ದಾರೆ. ಫೆ.10ರಂದು ಸಂಜೆ 6 ಗಂಟೆಗೆ ಶಿಕ್ಷಣ ತಜ್ಞ ಎಚ್.ಎನ್. ಮುರಳೀಧರ ಅಧ್ಯಕ್ಷತೆಯಲ್ಲಿ ಗಾಂಧೀಜಿ ಅವರಿಗೆ ‘ಕಾವ್ಯ ನಮನ ಸಲ್ಲಿಸಲಾಗುತ್ತದೆ. ರಾತ್ರಿ 8 ಗಂಟೆಗೆ ಆಶ್ರಮ ಪ್ರಾರ್ಥನೆ ನಡೆಯಲಿದೆ.
ಫೆ.11ರಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ವಿಚಾರಗೋಷ್ಠಿಯಲ್ಲಿ ಅಂಕಣಕಾರ ಅರವಿಂದ ಚೊಕ್ಕಾಡಿ ‘ಗಾಂಧೀಜಿ ಅವರ ತತ್ವಗಳಲ್ಲಿ ಸರ್ವೋದಯ ಸಾಧ್ಯತೆಗಳು’ ವಿಷಯ ಮಂಡಿಸಲಿದ್ದಾರೆ. ಫೆ.12ರಂದು ಬೆಳಿಗ್ಗೆ 10 ಗಂಟೆಗೆ ‘ಅಸ್ಪೃಶ್ಯತೆ ವಿನಾಶ: ಗಾಂಧಿ ಮಾರ್ಗ’ ಕುರಿತು ಚಿಂತಕ ಎಸ್. ತುಕಾರಾಮ್ ಮಾತನಾಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಮುಖ್ಯ ಪ್ರಾರ್ಥನಾ ಸಭೆ ನಡೆಯಲಿದೆ.
ರೂವಾರಿ: ಸ್ವಾತಂತ್ರ್ಯ ಹೋರಾಟಗಾರ ಹಾಗೂ ವೈದ್ಯ ದಿವಂಗತ ಡಾ.ಸಿ. ಬಂದೀಗೌಡ ಅವರ ಸಾರಥ್ಯದಲ್ಲಿ 1948ರಲ್ಲಿ ಆರಂಭವಾದ ಸರ್ವೋದಯ ಮೇಳ ಗಾಂಧೀಜಿ ವಿಚಾರಗಳನ್ನು ಬಿತ್ತುವ ಮುಖ್ಯ ವೇದಿಕೆಯಾಗಿದೆ. ಪಶ್ಚಿಮವಾಹಿನಿಯಲ್ಲಿ ನಡೆಯುತ್ತಿದ್ದ ಈ ಮೇಳ ಕಳೆದ 13 ವರ್ಷಗಳಿಂದ ಪಟ್ಟಣದ ‘ಸುಬ್ರಹ್ಮಣ್ಯೇಶ್ವರ’ ಕಲ್ಯಾಣ ಮಂಟಪದಲ್ಲಿ ಜರುಗುತ್ತಿದೆ. ಸ್ವಾತಂತ್ರ್ಯ ಚಳವಳಿಯ ಘಟನಾವಳಿಗಳ ಜತೆಗೆ ಪ್ರಚಲಿತ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮಸ್ಯೆಗಳಿಗೆ ಗಾಂಧಿ ಮಾರ್ಗದಲ್ಲಿ ಪರಿಹಾರ ಹುಡುಕುವ ದಿಸೆಯಲ್ಲಿ ಮಂಥನ ನಡೆಯುತ್ತದೆ.
ಮೇಳದ ಆಚಾರ್ಯರು: ಸರ್ವೋದಯ ಮೇಳದಲ್ಲಿ, ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಸುಚೇತ ಕೃಪಲಾನಿ, ಸರ್ವೋದಯ ಮಂಡಲದ ಅಧ್ಯಕ್ಷರಾಗಿದ್ದ ದಿವಂಗತ ಸತ್ಯವ್ರತ, ಗಾಂಧೀಜಿ ಅವರ ಸಮೀಪವರ್ತಿ ದಾದಾ ಧರ್ಮಾಧಿಕಾರಿ, ಸ್ವಾತಂತ್ರ್ಯ ಹೋರಾಟಗಾರರಾದ ಸೀತಾರಾಮ ಅಯ್ಯಂಗಾರ್, ಎಂ.ಎನ್. ಜೋಯಿಸ್, ಎಚ್.ಎಸ್. ದೊರೆಸ್ವಾಮಿ, ನೀಲತ್ತಹಳ್ಳಿ ನ. ಭದ್ರಯ್ಯ, ಸುರೇಂದ್ರ ಕೌಲಗಿ, ವೆಂಕೋಬರಾವ್, ಕೋ. ಚನ್ನಬಸಪ್ಪ ಇತರ ಪ್ರಮುಖರು ಆಚಾರ್ಯರಾಗಿ ಮೇಳವನ್ನು ನಡೆಸಿಕೊಟ್ಟಿದ್ದಾರೆ. ಕಾಸರಗೋಡಿನ ಸದಾಶಿವ ಶೆಣೈ, ಅ. ಶ್ರೀಧರ್, ನಾರಾಯಣರೆಡ್ಡಿ, ಡಾ.ಎಚ್.ಎಸ್. ಅನುಪಮಾ, ಕೆ.ಪಿ. ಸುರೇಶ್, ಜಿ.ಎಸ್. ಜಯದೇವ್, ಸವಿತಾ ನಾಗಭೂಷಣ್ ಅವರಂತಹ ಪ್ರಾಜ್ಞರು ವಿಚಾರ ಮಂಡಿಸಿದ್ದಾರೆ.
‘ಆರಂಭದ ವರ್ಷಗಳಲ್ಲಿ ಐದು ದಿನಗಳ ಕಾಲ ಸರ್ವೋದಯ ಮೇಳ ನಡೆಯುತ್ತಿತ್ತು. 90ರ ದಶಕದ ನಂತರ ಮೂರು ದಿನಗಳಿಗೆ ಸೀಮಿತವಾಗಿದೆ. ಪ್ರಜಾಪ್ರಭುತ್ವ, ಚುನಾವಣೆ, ಸಾಮಾಜಿಕ ಸಮಸ್ಯೆಗಳು, ಶಿಕ್ಷಣ ನೀತಿ, ಮಹಿಳಾ ಸ್ವಾತಂತ್ರ್ಯ, ನಿರುದ್ಯೋಗ ಸಮಸ್ಯೆ ಕುರಿತು ಗಂಭೀರ ಚರ್ಚೆ ನಡೆಯುತ್ತದೆ’ ಎಂದು ಸರ್ವೋದಯ ಮೇಳದ ಸಂಚಾಲಕ ಡಾ.ಬಿ. ಸುಜಯಕುಮಾರ್ ಹೇಳುತ್ತಾರೆ. ಮಾಹಿತಿಗೆ ಮೊ: 98806 42275.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.