ಸಚಿವ ಚಲುವರಾಯಸ್ವಾಮಿ
ಮಂಡ್ಯ: ‘ನಮ್ಮ ಬ್ರದರ್‌ಗೆ ನಮ್ಮ ಸರ್ಕಾರದ ಸಾಧನೆ ನೋಡಲು ಆಗುತ್ತಿಲ್ಲ. ಸರ್ಕಾರ ರಚನೆಯಾದ ನಂತರ ನಮ್ಮ ಬ್ರದರ್ ಸಂಕಟ ಪಡುತ್ತಿದ್ದಾರೆ. ಅವರಿಗೆ ಯಾರಾದರೂ ಸಮಾಧಾನ ಹೇಳುವವರು ಇದ್ದರೇ ಹೇಳಿ’ ಎಂದು ಸಚಿವ ಚಲುವರಾಯಸ್ವಾಮಿ ಅವರು ಎಚ್.ಡಿ.ಕುಮಾರಸ್ವಾಮಿ ಬಗ್ಗೆ ವ್ಯಂಗ್ಯವಾಡಿದರು.
‘ಸರ್ಕಾರ ಬೀಳುತ್ತೆ, ತೆಗೆಯುತ್ತೇವೆ ಎನ್ನುವುದು ಒಳ್ಳೆಯದಲ್ಲ. ಇನ್ನು ಮೂರೂವರೆ ವರ್ಷ ಸರ್ಕಾರ ಇದೇ ರೀತಿ ಇರುತ್ತದೆ. ನಮ್ಮನ್ನು ನೋಡಿ ಅವರಿಗೆ ಸಂಕಟ ಬರುತ್ತದೆ. ಇದಕ್ಕೆ ನಮ್ಮ ಬಳಿ ಮೆಡಿಸಿನ್ ಇಲ್ಲ’ ಎಂದರು.
‘ಬ್ರದರ್ ವಿರುದ್ಧ ನಾವು ಯಾವತ್ತು ಮಾತನಾಡಿಲ್ಲ. ಅವರು ಇನ್ನೊಬ್ಬರನ್ನು ನೋಡಿ ಅಸೂಯೆ ಪಡಬಾರದು. ನಾನು ಎಂದಿಗೂ ಅವರನ್ನ ನನ್ನ ಸ್ನೇಹಿತ, ಬ್ರದರ್ ಅಂತಾನೇ ಹೇಳುತ್ತೇನೆ’ ಎಂದು ಮರ್ಮಿಕವಾಗಿ ನುಡಿದರು.
‘ರಾಜ್ಯದಲ್ಲಿ ಸಿಎಂ ಆಗಿದ್ದರು. ಈಗ ಕೇಂದ್ರದಲ್ಲಿ ಮಂತ್ರಿ ಆಗಿದ್ದರೂ ಅವರಿಗೆ ಸಮಾಧಾನವಿಲ್ಲ. ಚನ್ನಪಟ್ಟಣ ಉಪಚುನಾವಣೆ ಮಗನ ಪರ ಮತ ಕೇಳಲಿಲ್ಲ. ಬರೀ ರಾಜ್ಯ ಸರ್ಕಾರದ ವಿರುದ್ಧ ಮಾತನಾಡಿದರು. ಈಗಲೂ ಚನ್ನಪಟ್ಟಣದಲ್ಲಿ ಇದನ್ನು ಅವರ ಪಕ್ಷದವರೇ ಆಡಿಕೊಳ್ಳುತ್ತಿದ್ದಾರೆ’ ಎಂದು ಕುಟುಕಿದರು.
ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರನ್ನ ಸಚಿವರಾಗಿ ಮಾಡಲಿ ಎಂಬುದು ಜಿಲ್ಲೆಯ ಆರು ಶಾಸಕರ ಬಯಕೆ. ಆದರೆ ಸಚಿವ ಸ್ಥಾನ ಬದಲಾವಣೆ ಸಿಎಂ ಹಾಗೂ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ಉತ್ತರ ನೀಡಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಮುಂದೆ ತೀರ್ಮಾನ ಮಾಡುವವರೆಗೂ ಮುಂದುವರೆಯಿರಿ ಎಂದು ಹೈಕಮಾಂಡ್ ಹೇಳಿದ್ದು, ಮುಂದೆ ಎಐಸಿಸಿ ಏನು ತೀರ್ಮಾನ ಮಾಡುತ್ತದೆ ಎಂದು ನೋಡಬೇಕಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.