ಶ್ರೀರಂಗಪಟ್ಟಣ: ತಾಲ್ಲೂಕಿನ ಕೊಡಿಯಾಲ ಗ್ರಾಮದಲ್ಲಿ ಗಣೇಶೋತ್ಸವದ ನಿಮಿತ್ತ ಈ ಬಾರಿ 101 ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದು, ಸುತ್ತಮುತ್ತಲ ಗ್ರಾಮಗಳ ಜನರನ್ನು ಆಕರ್ಷಿಸುತ್ತಿವೆ.
ಗ್ರಾಮದ ಶನೇಶ್ವರಸ್ವಾಮಿ ದೇವಾಲಯದ ಬಳಿ, ಒಂದೇ ಚಪ್ಪರದಡಿ 101 ಗಣೇಶ ಮೂರ್ತಿಗಳನ್ನು ಕೂರಿಸಲಾಗಿದೆ. ಮಧ್ಯ ಭಾಗದಲ್ಲಿ ಮೂರು ಅಡಿ ಎತ್ತರದ ಗಣೇಶ ಮೂರ್ತಿ ಇದೆ. ಎತ್ತಿನ ಮೇಲೆ ಗಣೇಶನು ಕುಳಿತಿರುವ ಭಂಗಿಯಲ್ಲಿ ಈ ಮೂರ್ತಿ ಇದ್ದು ನೋಡುಗರಲ್ಲಿ ಭಕ್ತಿ, ಭಾವ ಮೂಡಿಸುತ್ತದೆ. ಅದರ ಬಲ ಭಾಗದಲ್ಲಿ ಗೌರಿ ಮೂರ್ತಿಯನ್ನು ಇಡಲಾಗಿದೆ. ದೊಡ್ಡ ಗಣೇಶನ ಮೂರ್ತಿಯ ಎಡ ಮತ್ತು ಬಲದಲ್ಲಿ, ಒಂದೂವರೆ ಅಡಿ ಎತ್ತರದ ಎರಡು ಗಣೇಶನ ಮೂರ್ತಿಗಳಿವೆ. ಉಳಿದಂತೆ ಒಂದು ಅಡಿ ಎತ್ತರದ 98 ಗಣೇಶ ಮೂರ್ತಿಗಳನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ.
ಕೊಡಿಯಾಲ ಗ್ರಾಮದ ಕೊಡಿಯಾಲ ಲೆಜೆಂಡ್ಸ್ ಯುವಕರ ತಂಡ 101 ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಒಂದು ಲಕ್ಷ ರೂಪಾಯಿಗೂ ಹೆಚ್ಚು ಹಣ ಖರ್ಚು ಮಾಡಿದೆ. ತಂಡದ ಸ್ವರೂಪ್, ಹೇಮಂತ್, ದರ್ಶನ್, ಚಿದಂಬರ್, ಮನಮೋಹನ್, ವಿವೇಕ್, ಸಿದ್ದರಾಜು, ಗೋವಿಂದೇಗೌಡ ಇತರರು ಹಣ ಹಾಕಿ ಗಣೇಶ ಮೂರ್ತಿಗಳನ್ನು ಕೂರಿಸಿದ್ದಾರೆ.
‘ಗಣೇಶ ಮೂರ್ತಿಗಳಿಗೆ ಬೆಳಿಗ್ಗೆ ಮತ್ತು ಸಂಜೆ ಪೂಜೆ ಹಾಗೂ ಪ್ರಸಾದ ವಿತರಣೆ ನಡೆಯುತ್ತಿದೆ. ಪಕ್ಕದ ಆಲಗೂಡು, ತಡಗವಾಡಿ, ಹುಣಸನಹಳ್ಳಿ, ಚೊಟ್ಟನಹಳ್ಳಿ, ಪೀಹಳ್ಳಿ, ದೊಡ್ಡಹಾರೋಹಳ್ಳಿ, ಚಿಕ್ಕಹಾರೋಹಳ್ಳಿ ಇತರ ಗ್ರಾಮಗಳ ಜನರೂ ಗಣೇಶ ಮೂರ್ತಿಗಳ ದರ್ಶನ ಪಡೆಯುತ್ತಿದ್ದಾರೆ. ಒಂಭತ್ತನೇ ದಿನ ಗ್ರಾಮದ ಪಕ್ಕದಲ್ಲಿರುವ ವಿಶ್ವೇಶ್ವರಯ್ಯ ಸಂಪರ್ಕ ನಾಲೆಯಲ್ಲಿ ಈ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗುವುದು’ ಎಂದು ಮುಖಂಡ ಮೋಹನ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.