
ಶ್ರೀರಂಗಪಟ್ಟಣ: ‘ಎಚ್ಐವಿ/ ಏಡ್ಸ್ ಬಾಧಿತರನ್ನು ಕಡೆಗಣ್ಣಿನಿಂದ ನೋಡಬಾರದು’ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಮೋಹನಗೌಡ ತಿಳಿಸಿದರು.
ಪಟ್ಟಣದ ಪರಿವರ್ತನಾ ಶಿಕ್ಷಣ ಸಂಸ್ಥೆಯಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ವಿಶ್ವ ಏಡ್ಸ್ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ‘ಕೆಲವರು ತಮ್ಮದಲ್ಲದ ತಪ್ಪಿಗೆ ಏಡ್ಸ್ ಸೋಂಕಿಗೆ ಒಳಗಾಗುತ್ತಾರೆ. ಅಂತಹವರನ್ನು ಅಸ್ಪೃಶ್ಯರಂತೆ ಕಾಣದೆ ಪ್ರೀತಿ, ವಿಶ್ವಾಸದಿಂದ ನೋಡಿಕೊಳ್ಳಬೇಕು. ಏಡ್ಸ್ ರೋಗಿಗಳ ಹಕ್ಕು ಬಾಧ್ಯತೆಗಳನ್ನು ರಕ್ಷಿಸಬೇಕು. ಎಚ್‌ಐವಿ ಸೋಂಕು ಹರಡಲು ಕಾರಣಗಳು ಮತ್ತು ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ವೇಣುಗೋಪಾಲ್ ಮಾತನಾಡಿ, ‘ಎಚ್‌ಐವಿ ಕಾಯಿಲೆ ಬರಲು ಮುಖ್ಯ ಕಾರಣ ಅಸುರಕ್ಷಿತ ಲೈಂಗಿಕತೆ. ಎಚ್‌ಐವಿ ಸೋಂಕಿತ ರೋಗಿಯ ರಕ್ತವನ್ನು ಆರೋಗ್ಯವಂತ ವ್ಯಕ್ತಿಗೆ ನೀಡದಾಗಲೂ ಈ ಕಾಯಿಲೆ ವರ್ಗಾವಣೆಯಾಗುತ್ತದೆ. ಮಾದಕ ವಸ್ತು ವ್ಯಸನಿಗಳು ಈ ಕಾಯಿಲೆಗೆ ಬೇಗ ತುತ್ತಾಗುತ್ತಾರೆ. ಈ ಕಾಯಿಲೆಗೆ ನಿರ್ದಿಷ್ಟ ಔಷಧ ಇಲ್ಲದೇ ಇರುವುದರಿಂದ ಮುನ್ನೆಚ್ಚರಿಕೆ ವಹಿಸುವುದೇ ಸೂಕ್ತ’ ಎಂದು ತಿಳಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ವಿಜಯಲಕ್ಷ್ಮಿ ಸರ್ಕಾರಿ ಆಸ್ಪತ್ರೆಯಲ್ಲಿ ಸಿಗುವ ಐಸಿಟಿಸಿ, ಪಿಪಿಟಿಸಿಟಿ, ಎಆರ್‌ಟಿ ಇತರ ವೈದ್ಯಕೀಯ ಸೇವಾ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ. ಬೆನ್ನೂರ ಪ್ರತಿಜ್ಞಾ ವಿಧಿ ಬೋಧಿಸಿದರು.
ಪರಿವರ್ತನಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಂ. ಪುಟ್ಟೇಗೌಡ ಅಧ್ಯಕ್ಷತೆ ವಹಿಸಿದ್ದರು. ಆಪ್ತ ಸಮಾಲೋಚಕಿ ಮಿಲನಾ, ವಕೀಲರ ಸಂಘದ ಅಧ್ಯಕ್ಷ ಎನ್. ಮರೀಗೌಡ, ಕಾರ್ಯದರ್ಶಿ ಸಿ.ಆರ್. ದಿನೇಶ್, ಪ್ರಾಂಶುಪಾಲ ಚನ್ನಕೇಶವ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ರಾಜು, ಜಿ.ಬಿ. ಹೇಮಣ್ಣ, ಆರೋಗ್ಯ ನಿರೀಕ್ಷಣಾಧಿಕಾರಿಗಳಾ ಎಂ.ಎನ್. ಕೃಷ್ಣೇಗೌಡ, ಎಸ್.ಪಿ. ಫಣೀಂದ್ರ, ಮೇಘನಾ, ಆರೋಗ್ಯ ಸುರಕ್ಷಣಾಧಿಕಾರಿ ಸ್ಮಿತಾ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.