
ಮದ್ದೂರು: ಸ್ವಚ್ಛತೆಯ ಧ್ಯೇಯದೊಂದಿಗೆ 2014ರಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತಂದ ‘ಸ್ವಚ್ಛ ಭಾರತ್’ ಅಭಿಯಾನವು ಸಂಪೂರ್ಣ ಸಾಕಾರಗೊಳ್ಳದೇ ತಾಲ್ಲೂಕಿನಲ್ಲಿರುವ ಬಹುತೇಕ ಸ್ವಚ್ಛ ಸಂಕೀರ್ಣಗಳಿಗೆ ಗ್ರಹಣ ಹಿಡಿದಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಪ್ರತಿ ಗ್ರಾ.ಪಂ. ವ್ಯಾಪ್ತಿಗಳಲ್ಲಿ ನಿರ್ಮಾಣವಾಗಿರುವ ‘ಸ್ವಚ್ಛ ಸಂಕೀರ್ಣ’ಗಳು ಬಹುತೇಕ ಕಡೆಗಳಲ್ಲಿ ಕಾರ್ಯಾರಂಭವನ್ನೇ ಮಾಡದೇ ಅಕ್ಷರಶಃ ಪಾಳು ಬಿದ್ದಿವೆ. ಸಂಕೀರ್ಣಗಳು ಹೊರವಲಯದಲ್ಲಿರುವ ಕಾರಣ ಅನೈತಿಕ ಚುಟುವಟಿಕೆಗಳಿಗೆ ಆಶ್ರಯ ತಾಣವಾಗುವ ಸಂಭವವಿದೆ.
15ನೇ ಹಣಕಾಸು ಯೋಜನೆಯಡಿ ಪ್ರತಿ ಗ್ರಾ.ಪಂ.ಗಳಲ್ಲಿನ ಗ್ರಾಮಗಳ ಮನೆಗಳಿಗೆ ಹಸಿ ಕಸ, ಒಣ ಕಸವನ್ನು ವಿಂಗಡಣೆ ಮಾಡಲು 2 ಡಬ್ಬಿಗಳನ್ನು ನೀಡಲಾಗಿದ್ದು, ಅಷ್ಟೇ ಅಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿಯೂ 2 ದೊಡ್ಡ ಕಸ ಸಂಗ್ರಹಿಸುವ ಡಬ್ಬಿಗಳನ್ನು ಅಳವಡಿಸಲಾಗಿದೆ. ಆದರೆ ಅವುಗಳೂ ಕೆಲವೆಡೆ ಸದ್ಬಳಕೆಯಾಗುತ್ತಿಲ್ಲ. ಅಷ್ಟೇ ಅಲ್ಲದೇ ಕಸ ವಿಲೇವಾರಿ ಮಾಡಲು ಪ್ರತಿ ಗ್ರಾ.ಪಂ.ಗೆ ಒಂದು ವಾಹನವನ್ನೂ ನೀಡಲಾಗಿದೆ.
ಮದ್ದೂರು ಪುರಸಭೆಯು, (ಈಗ ನಗರಸಭೆಯಾಗಿ ಮೇಲ್ದರ್ಜೇಗೇರಿದೆ) ಪಟ್ಟಣದಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಹೂತಗೆರೆ ಗ್ರಾಮದ ಬಳಿ ತ್ಯಾಜ್ಯ ವಿಲೇವಾರಿ ಘಟಕವನ್ನು ಹೊಂದಿದ್ದು, ಪಟ್ಟಣದಿಂದ ಸಂಗ್ರಹವಾದ ಕಸವನ್ನು ಅಲ್ಲಿಗೆ ವಾಹನಗಳಲ್ಲಿ ಸಾಗಿಸಿ ವಿಲೇವಾರಿ ಮಾಡಲಾಗುತ್ತಿದೆ.
ಇನ್ನುಳಿದಂತೆ ತಾಲ್ಲೂಕಿನ ಒಟ್ಟು 42 ಗ್ರಾ.ಪಂ.ಗಳ ಪೈಕಿ ಬೆರಳೆಣಿಕೆ ಸ್ವಚ್ಛ ಸಂಕೀರ್ಣಗಳು ಮಾತ್ರ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಮಾಡುತ್ತಿವೆ ಎಂಬ ಮಾಹಿತಿಯಿದೆ.
ತಾಲ್ಲೂಕಿನ ಕೆ. ಹೊನ್ನಲಗೆರೆ, ಕೆಸ್ತೂರು, ಗೆಜ್ಜಲಗೆರೆ, ಹೂತಗೆರೆ, ಕೌಡ್ಲೆ, ಬೆಸಗರಹಳ್ಳಿ, ನಗರ ಕೆರೆ, ಹೊಸಗಾವಿ, ಆತಗೂರು, ಮೆಣಸಗೆರೆ, ಬಿದರಹಳ್ಳಿ, ಕಾಡು ಕೊತ್ತನಹಳ್ಳಿ ಸೇರಿದಂತೆ ಹಲವೆಡೆ ಸ್ವಚ್ಛ ಭಾರತ್ ಅಭಿಯಾನ ಹಳ್ಳ ಹಿಡಿದಿದ್ದು ಕಟ್ಟಡ ನಿರ್ಮಾಣವಾಗಿ ವರ್ಷವೇ ಕಳೆದಿದ್ದರೂ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಹೀಗಾಗಿ ಲಕ್ಷಾಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣ ವ್ಯರ್ಥವಾಗುತ್ತಿದೆ.
ಕೊಪ್ಪ, ಕೊಕ್ಕರೆ ಬೆಳ್ಳೂರು ಹಾಗೂ ಕೂಳಗೆರೆ ಗ್ರಾ.ಪಂ.ಗಳಲ್ಲಿ ‘ಸ್ವಚ್ಛ ಸಂಕೀರ್ಣ’ದ ಕಟ್ಟಡ ನಿರ್ಮಾಣವೇ ಆಗಿಲ್ಲ ಎಂಬುದು ಗಮನಾರ್ಹ. ಗೊರವನಹಳ್ಳಿ ಗ್ರಾ.ಪಂ.ಯ ಸ್ವಚ್ಛ ಸಂಕೀರ್ಣ ಘಟಕಕ್ಕೆ ಸುಮಾರು ಒಂದು ವರ್ಷದ ಹಿಂದೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ಕಟ್ಟಡಕ್ಕೆ ಹಾನಿಯಾಗಿದ್ದು, ಅದರ ರಿಪೇರಿ ಕೆಲಸಗಳು ಇಂದಿಗೂ ಮುಗಿದಿಲ್ಲ.
ಕಸ ವಿಲೇವಾರಿಯಿಂದ ಸ್ವಸಹಾಯ ಸಂಘಗಳಿಗೆ ನಷ್ಟವಾಗುತ್ತಿದೆ ಎನ್ನುವ ಕಾರಣಕ್ಕೆ ಹಿಂದೇಟು ಹಾಕುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದ್ದು, ಕೆಲವೆಡೆ ಕಸ ಸಾಗಿಸುವ ವಾಹನಗಳಿಗೆ ಚಾಲಕರು ಸೇರಿದಂತೆ ಪೌರಕಾರ್ಮಿಕರ ಕೊರತೆಯು ಎದುರಾಗುತ್ತಿದೆ ಎನ್ನಲಾಗಿದೆ.
ತಾಲ್ಲೂಕಿನ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಅಭಿಯಾನದಡಿ ನಿರ್ಮಾಣವಾಗಿರುವ ‘ಸ್ವಚ್ಛ ಸಂಕೀರ್ಣ’ ಕಾರ್ಯರಂಭ ಮಾಡದೇ ಇರುವುದರ ಬಗ್ಗೆ ಮಾಹಿತಿ ಪಡೆದು ಸಂಬಂಧಪಟ್ಟ ಗ್ರಾಮ ಪಂಚಾಯಿತಿಯ ಪಿಡಿಒಗಳಿಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗುವುದು.
ರಾಮಲಿಂಗಯ್ಯ, ಕಾರ್ಯನಿರ್ವಹಣಾಧಿಕಾರಿ, ತಾಲ್ಲೂಕು ಪಂಚಾಯಿತಿ, ಮದ್ದೂರು.
ಮನೆ–ಮನೆಯಿಂದ ಕಸ ಸಂಗ್ರಹಿಸುವ ವೇಳೆ ಸಾರ್ವಜನಿಕರು ಒಣ ಕಸ ಮತ್ತು ಹಸಿ ಕಸವನ್ನು ಪ್ರತ್ಯೇಕಿಸಿ ಕೊಡದ ಕಾರಣ, ಕಸ ವಿಂಗಡಣೆಯೇ ದೊಡ್ಡ ಸವಾಲಾಗಿದೆ. ಇದರಿಂದ ಸಂಕೀರ್ಣದ ಮುಂದೆ ಕಸದ ರಾಶಿ ಸೃಷ್ಟಿಯಾಗಿದೆ. ಈ ಬಗ್ಗೆ ಕ್ರಮ ವಹಿಸಲಾಗುವುದು.
ಎನ್.ಸುಧಾ, ಪಿಡಿಒ, ಭಾರತೀನಗರ
ಭಾರತೀನಗರ ಗ್ರಾ.ಪಂ.ನಿಂದ ಕಳೆದ ಕೆಲವು ತಿಂಗಳಿನಿಂದ ಕಸ ಸಂಗ್ರಹಣೆ ಮಾಡಲು ಬರುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದ್ದು ಎಲ್ಲ ರೀತಿಯ ತ್ಯಾಜ್ಯಗಳನ್ನು ಸಿಕ್ಕ ಸಿಕ್ಕ ಕಡೆಗಳಲ್ಲಿ ಬಿಸಾಡುತ್ತಿದ್ದಾರೆ. ಶೀಘ್ರವಾಗಿ ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ಪುನರಾರಂಭಿಸಿ ಮನೆಗಳಿಂದ ತ್ಯಾಜ್ಯ ಸಂಗ್ರಹಣೆ ಮಾಡಬೇಕು
ಶೇಖರ, ಸ್ಥಳೀಯ ಗ್ರಾಮಸ್ಥ, ಭಾರತೀನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.