ADVERTISEMENT

ಮಂಡ್ಯ | ಪಶು ರೋಗ ತನಿಖಾ ಪ್ರಯೋಗಾಲಯಕ್ಕೆ ‘ಗ್ರಹಣ’: ರೈತರ ಪರದಾಟ

ಸಿದ್ದು ಆರ್.ಜಿ.ಹಳ್ಳಿ
Published 31 ಆಗಸ್ಟ್ 2025, 3:54 IST
Last Updated 31 ಆಗಸ್ಟ್ 2025, 3:54 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ಮಂಡ್ಯ: ಪಶುಗಳಿಗೆ ಬರುವ ರೋಗಗಳನ್ನು ಪತ್ತೆ ಹಚ್ಚಿ, ಸಕಾಲದಲ್ಲಿ ಚಿಕಿತ್ಸೆ ನೀಡಲು ಅನುಕೂಲ ಕಲ್ಪಿಸುವ ‘ಪಶುರೋಗ ತನಿಖಾ ಪ್ರಯೋಗಾಲಯ ಮತ್ತು ಮಾಹಿತಿ ಕೇಂದ್ರ’ ಸ್ಥಾಪನೆ ಜಿಲ್ಲೆಯಲ್ಲಿ 3 ವರ್ಷಗಳಿಂದ ನನೆಗುದಿಗೆ ಬಿದ್ದಿದೆ.

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ವತಿಯಿಂದ 2022–23ನೇ ಸಾಲಿನ ‘ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿ’ (ಆರ್‌.ಐ.ಡಿ.ಎಫ್‌) ಯೋಜನೆಯಡಿ ಮಂಡ್ಯ ಜಿಲ್ಲೆ ಸೇರಿದಂತೆ ರಾಜ್ಯದ 13 ಜಿಲ್ಲೆಗಳಲ್ಲಿ ಪಶುರೋಗ ತನಿಖಾ ಪ್ರಯೋಗಾಲಯ ಸ್ಥಾಪನೆಗೆ ಸಂಬಂಧಿಸಿದಂತೆ ನೂತನ ಕಟ್ಟಡ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. 

ಕರ್ನಾಟಕ ಸ್ಟೇಟ್‌ ಹ್ಯಾಬಿಟೇಟ್‌ ಸೆಂಟರ್‌ ಬೆಂಗಳೂರು ಸಂಸ್ಥೆಗೆ ಕಟ್ಟಡ ನಿರ್ಮಾಣದ ಹೊಣೆಯನ್ನು ನೀಡಲಾಗಿದೆ. ಎಲ್ಲ ಕಾಮಗಾರಿಗಳ ಒಟ್ಟು ಯೋಜನಾ ವೆಚ್ಚ ₹23.62 ಕೋಟಿ (ನಬಾರ್ಡ್‌ನ ಸಾಲವಾಗಿ ₹22.44 ಕೋಟಿ ಮತ್ತು ರಾಜ್ಯ ಸರ್ಕಾರದ ವಂತಿಕೆಯಾಗಿ ₹1.18 ಕೋಟಿ) ನಿಗದಿಪಡಿಸಿ ಸರ್ಕಾರ 2023ರ ಫೆಬ್ರುವರಿಯಲ್ಲಿ ಆಡಳಿತಾತ್ಮಕ ಮಂಜೂರಾತಿ ನೀಡಿತ್ತು. 

ADVERTISEMENT

ಬಿಡುಗಡೆಯಾಗದ ಅನುದಾನ: 

ಮಂಡ್ಯ ಜಿಲ್ಲೆಯಲ್ಲಿ ಪಶುರೋಗ ತನಿಖಾ ಪ್ರಯೋಗಾಲಯ ಸ್ಥಾಪನೆಗೆ ₹1.81 ಕೋಟಿ ಅನುದಾನವನ್ನು ನಿಗದಿಪಡಿಸಲಾಗಿತ್ತು. 3 ವರ್ಷಗಳಿಂದ ಅನುದಾನ ಬಿಡುಗಡೆಯಾಗದ ಕಾರಣ, ಕಟ್ಟಡ ಕಾಮಗಾರಿ ಇದುವರೆಗೆ ಆರಂಭವಾಗಿಲ್ಲ. ಹೀಗಾಗಿ ಪ್ರಯೋಗಾಲಯದ ಪ್ರಯೋಜನ ಜಿಲ್ಲೆಯ ರೈತರಿಗೆ ಸಿಗದಂತಾಗಿದೆ. 

ಕೃಷಿ ಪ್ರಧಾನವಾದ ಮಂಡ್ಯ ಜಿಲ್ಲೆಯಲ್ಲಿ ರೈತರು ವ್ಯವಸಾಯ ಮತ್ತು ಪಶುಸಂಗೋಪನೆ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ದನ–ಕರು, ಕುರಿ, ಮೇಕೆ, ಎಮ್ಮೆ ಮುಂತಾದ ಪ್ರಾಣಿಗಳಿಗೆ ತಗಲುವ ರೋಗಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ಕೊಡಿಸಲು ಪ್ರಯೋಗಾಲಯವೇ ಇಲ್ಲದಂತಾಗಿದೆ ಎಂದು ಜಿಲ್ಲೆಯ ರೈತರು ಬೇಸರ ವ್ಯಕ್ತಪಡಿಸಿದ್ದಾರೆ. 

ವರದಿ ವಿಳಂಬ: ರೈತರ ಪರದಾಟ 

‘ದನಕರುಗಳಲ್ಲಿ ಚರ್ಮಗಂಟು ರೋಗ, ಕಾಲುಬಾಯಿ ಜ್ವರ, ಗಂಟಲು ಬೇನೆ, ಚಪ್ಪೆರೋಗ ಮತ್ತು ಕುರಿಗಳ್ಲಲಿ ಪಿಪಿಆರ್‌, ಇ.ಟಿ. (ರಕ್ತಭೇದಿ) ಸೇರಿದಂತೆ ಹಲವಾರು ರೋಗಗಳು ಕಾಣಿಸಿಕೊಳ್ಳುತ್ತವೆ. ರೋಗಗಳನ್ನು ಪತ್ತೆ ಹಚ್ಚಿ, ನಿಖರ ಚಿಕಿತ್ಸೆ ನೀಡಲು ರಕ್ತ ಮತ್ತು ಅಂಗಾಂಶಗಳನ್ನು ಪರೀಕ್ಷೆಗಾಗಿ ಮೈಸೂರು ನಗರದಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುತ್ತಿದೆ. ಮಂಡ್ಯ, ಕೊಡಗು, ಚಾಮರಾಜನಗರ, ಹಾಸನ ಜಿಲ್ಲೆಗಳು ಮೈಸೂರು ಲ್ಯಾಬ್‌ ಮೇಲೆ ಅವಲಂಬಿತವಾಗಿರುವ ಕಾರಣ, ವರದಿಗಳಿಗಾಗಿ 15–20 ದಿನ ಕಾಯುವ ಪರಿಸ್ಥಿತಿ ಇದೆ. ಮಂಡ್ಯ ಜಿಲ್ಲೆಯಲ್ಲೇ ಪ್ರಯೋಗಾಲಯ ಸ್ಥಾಪನೆಯಾದರೆ 2ರಿಂದ 3 ದಿನಗಳಲ್ಲಿ ವರದಿ ಕೈಸೇರಲಿದೆ’ ಎನ್ನುತ್ತಾರೆ ಕನ್ನಲಿ ಗ್ರಾಮದ ರೈತ ಮನು.

‘ಜಾನುವಾರು ಸಾವಿನ ಸಂಖ್ಯೆ ತಡೆಗಟ್ಟಲು ಸಕಾಲದಲ್ಲಿ ಪರಿಣಾಮಕಾರಿ ಚಿಕಿತ್ಸೆ ನೀಡುವುದು ಅತ್ಯಗತ್ಯ. ಪ್ರಯೋಗಾಲಯದ ವರದಿ ಕೈಸೇರುವುದು ವಿಳಂಬವಾಗುತ್ತಿರುವ ಕಾರಣ ಪಶು ವೈದ್ಯರು ಚಿಕಿತ್ಸೆ ನೀಡುವುದು ತಡವಾಗುತ್ತಿದೆ. ಇದರಿಂದ ಎಷ್ಟೋ ಜಾನುವಾರು ಸಾವಿಗೀಡಾಗುತ್ತಿವೆ. ಮಂಡ್ಯ ಜಿಲ್ಲೆಯಲ್ಲಿ ಪಶುರೋಗ ತನಿಖಾ ಪ್ರಯೋಗಾಲಯ ಸ್ಥಾಪನೆಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕೂಡಲೇ ಕ್ರಮವಹಿಸಬೇಕು’ ಎಂದು ದೊಡ್ಡಬಾಣಸವಾಡಿಯ ಹರೀಶ್‌ ಒತ್ತಾಯಿಸಿದ್ದಾರೆ. 

ಡಾ.ಶಿವಲಿಂಗಯ್ಯ 
ನಿವೇಶನ ಹಸ್ತಾಂತರ  ಮಂಡ್ಯ ನಗರದ ಕಾಳಿಕಾಂಬ ದೇವಸ್ಥಾನದ ಮುಂಭಾಗದ ಪಶು ಆಸ್ಪತ್ರೆ ಆವರಣದಲ್ಲಿ ಪಶುರೋಗ ತನಿಖಾ ಪ್ರಯೋಗಾಲಯ ಮತ್ತು ಮಾಹಿತಿ ಕೇಂದ್ರ ಸ್ಥಾಪಿಸಲು 40X60 ಚ.ಅಡಿ ಅಳತೆಯ ಖಾಲಿ ನಿವೇಶನವನ್ನು ಗುರುತಿಸಿ ಕರ್ನಾಟಕ ರಾಜ್ಯ ಹ್ಯಾಬಿಟೇಟ್‌ ಸೆಂಟರ್‌ನ ಯೋಜನಾ ನಿರ್ದೇಶಕರಿಗೆ ಹಸ್ತಾಂತರಿಸಲಾಗಿದೆ. ಅನುಮೋದಿತ ನಕ್ಷೆಯ ಪ್ರಕಾರ ಕಟ್ಟಡ ಕಾಮಗಾರಿ ಕೈಗೊಳ್ಳುವಂತೆ ಕೋರಿದ್ದೇವೆ
– ಡಾ.ಶಿವಲಿಂಗಯ್ಯ ಉಪನಿರ್ದೇಶಕ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಮಂಡ್ಯ
ಡಾ.ಸಿದ್ದರಾಮು ಎನ್‌.ಎಂ.
ಸಮಗ್ರ ಪರೀಕ್ಷೆಗೆ ಅನುಕೂಲ ಪ್ರಸ್ತುತ ಇರುವ ಪಾಲಿ ಕ್ಲಿನಿಕ್‌ನಲ್ಲಿ ಎಕ್ಸ್‌ರೇ ಅಲ್ಟ್ರಾಸೌಂಡ್‌ ಹಾಗೂ ರಕ್ತ ಪರೀಕ್ಷೆ ಮಾಡುತ್ತಿದ್ದೇವೆ. ಪಶುರೋಗ ತನಿಖಾ ಪ್ರಯೋಗಾಲಯ ಆರಂಭವಾದರೆ ಪಶುಗಳಿಗೆ ತಗಲುವ ಎಲ್ಲ ರೋಗಗಳನ್ನು ತ್ವರಿತಗತಿಯಲ್ಲಿ ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ. 
– ಡಾ.ಸಿದ್ದರಾಮು ಎನ್‌.ಎಂ. ಉಪನಿರ್ದೇಶಕ ಪಾಲಿ ಕ್ಲಿನಿಕ್‌ ಮಂಡ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.