ADVERTISEMENT

ಶ್ರೀರಂಗಪಟ್ಟಣ | ಹಣಕ್ಕೆ ಓಟು ಮಾರಿಕೊಳ್ಳುವವರು ಭಿಕ್ಷುಕರು: ಸಚಿವ ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 4:17 IST
Last Updated 4 ಆಗಸ್ಟ್ 2025, 4:17 IST
ಶ್ರೀರಂಗಪಟ್ಟಣದಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನಾ ಕಾರ್ಯಕ್ರಮದ ಸಮಾರಂಭವನ್ನು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಭಾನುವಾರ ಉದ್ಘಾಟಿಸಿದರು. ಶಾಸಕ ರಮೇಶ ಬಂಡಿಸಿದ್ದೇಗೌಡ, ಜ್ಞಾನ ಪ್ರಕಾಶ ಸ್ವಾಮೀಜಿ ಇದ್ದಾರೆ
ಶ್ರೀರಂಗಪಟ್ಟಣದಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನಾ ಕಾರ್ಯಕ್ರಮದ ಸಮಾರಂಭವನ್ನು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಭಾನುವಾರ ಉದ್ಘಾಟಿಸಿದರು. ಶಾಸಕ ರಮೇಶ ಬಂಡಿಸಿದ್ದೇಗೌಡ, ಜ್ಞಾನ ಪ್ರಕಾಶ ಸ್ವಾಮೀಜಿ ಇದ್ದಾರೆ   

ಶ್ರೀರಂಗಪಟ್ಟಣ: ‘ಹಣಕ್ಕೆ ಓಟು ಮಾರಿಕೊಳ್ಳುವವರು ದೊಡ್ಡ ಭಿಕ್ಷುಕರು’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.

ಪಟ್ಟಣದಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣ ಕಾಮಗಾರಿಗೆ ಭಾನುವಾರ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ರಾಜ ಮೊದಲು ಅರಮನೆಯಲ್ಲಿ ಹುಟ್ಟುತ್ತಿದ್ದ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜ ಜನರಿಂದ ಆಯ್ಕೆಯಾಗುತ್ತಾನೆ. ಅಂಬೇಡ್ಕರ್‌ ಅವರು ಬರೆದ ಸಂವಿಧಾನಕ್ಕೆ ಸಾಮಾನ್ಯ ವ್ಯಕ್ತಿಯನ್ನು ರಾಜನ ಸ್ಥಾನಕ್ಕೆ ಕೂರಿಸುವ ಶಕ್ತಿ ಇದೆ. ಪ್ರತಿ ಪ್ರಜೆಯೂ ಸಾರ್ವಭೌಮ. ಚುನಾವಣೆ ಸಂದರ್ಭದಲ್ಲಿ ಹಣದ ಆಮಿಷ ಒಡ್ಡುವವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು’ ಎಂದು ತಿಳಿಸಿದರು.

ADVERTISEMENT

‘ಮೌಢ್ಯಾಚರಣೆ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದುದು. ಹೋಮ, ಹವನಗಳನ್ನು ಬಿಟ್ಟು ವೈಜ್ಞಾನಿಕವಾಗಿ ಯೋಚಿಸಬೇಕು. ಅಯ್ಯಪ್ಪಸ್ವಾಮಿ ಮಾಲೆ ಧರಿಸಿದರೆ ಹೊಟ್ಟೆ ತುಂಬುವುದಿಲ್ಲ. ಹಸಿವು ಮುಕ್ತ ಸಮಾಜ ನಿರ್ಮಾಣದ ಉದ್ದೇಶದಿಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರತಿ ಕುಟುಂಬಕ್ಕೆ ತಿಂಗಳಿಗೆ ₹4 ಸಾವಿರದಿಂದ ₹5 ಸಾವಿರ ಸಿಗುತ್ತಿದೆ’ ಎಂದರು.

ಭವನಕ್ಕೆ ₹6 ಕೋಟಿ: ‘ಪಟ್ಟಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಂಬೇಡ್ಕರ್‌ ಭವನಕ್ಕೆ ₹6 ಕೋಟಿ ಅನುದಾನಕ್ಕೆ ಬೇಡಿಕೆ ಸಲ್ಲಿಸಿದ್ದಾರೆ. ಸರ್ಕಾರ ₹2 ಕೋಟಿ ಬಿಡುಗಡೆಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ’ ಎಂದು ಸಚಿವರು ತಿಳಿಸಿದರು.

‘ಮಂಡ್ಯ ಜಿಲ್ಲೆಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಾವಿರಾರು ಕೋಟಿ ಅನುದಾನ ನೀಡಿದೆ. ಅಧಿಕಾರದಲ್ಲಿದ್ದಾಗ ಏನೂ ಮಾಡದ ವಿರೋಧ ಪಕ್ಷಗಳು ಅಪಪ್ರಚಾರ ಮಾಡುತ್ತಿವೆ’ ಎಂದು ಟೀಕಿಸಿದರು.

ಮತ ಕಳವು ಸಂಬಂಧ ಆ.5ರಂದು ಬೆಂಗಳೂರಿನಲ್ಲಿ, ರಾಹುಲ್‌ಗಾಂಧಿ ಅವರ ನೇತೃತ್ವದಲ್ಲಿ ಬಹತ್‌ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.  

ಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿ, ‘ಒಳ ಮೀಸಲಾತಿ ಜಾರಿ ವಿಷಯದಲ್ಲಿ ಯಾರೂ ಆತಂಕಪಡಬಾರದು. ಸರ್ಕಾರ ಯಾರಿಗೂ ಅನ್ಯಾಯ ಮಾಡುವುದಿಲ್ಲ ಎಂಬ ವಿಶ್ವಾಸವಿದೆ. ಅಂಬೇಡ್ಕರ್‌ ಭವನ ಜ್ಞಾನ ದಾಸೋಹದ ಕೇಂದ್ರವಾಗಬೇಕು. ಸಂಸತ್‌ ವ್ಯವಸ್ಥೆಯ ಧ್ರುವತಾರೆ ಅಂಬೇಡ್ಕರ್‌ ಅವರ ಆಶಯದಂತೆ ಶೋಷಿತರು ಸ್ವಾಭಿಮಾನದ ಜೀವನ ನಡೆಸಬೇಕು’ ಎಂದು ಹೇಳಿದರು.

ಸಮಾಜ ಕಲ್ಯಾಣ ಅಧಿಕಾರಿ ಪ್ರತೀತಿ ಚಿಕ್ಕಸಿದ್ದಯ್ಯ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ಚಾಮರಾಜನಗರದ ಬೋಧಿದತ್ತ ತೇರ ಮೈತ್ರಿ ಮಾತಾ, ಜಿಲ್ಲಾಧಿಕಾರಿ ಕುಮಾರ, ಜಿ.ಪಂ. ಸಿಇಒ ಕೆ.ಆರ್‌. ನಂದಿನಿ, ಪುರಸಭೆ ಅಧ್ಯಕ್ಷ ಎಂ.ಎಲ್‌. ದಿನೇಶ್, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಹಿರಿಯ ವಕೀಲ ಎಂ. ಪುಟ್ಟೇಗೌಡ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎನ್‌. ಪ್ರಕಾಶ್, ಉಪ ವಿಭಾಗಾಧಿಕಾರಿ ಕೆ.ಆರ್‌. ಶ್ರೀನಿವಾಸ್, ತಹಶೀಲ್ದಾರ್‌ ಚೇತನಾ ಯಾದವ್‌, ಜಿ.ಪಂ. ಮಾಜಿ ಅಧ್ಯಕ್ಷ ಸುರೇಶ್ ಕಂಠಿ ಹಾಗೂ ದಲಿತ ಸಂಘರ್ಷ ಸಮಿತಿಯ ಮುಖಂಡರು ಭಾಗವಹಿಸಿದ್ದರು.

ವರ್ಷದಲ್ಲಿ ಭವನ ಉದ್ಘಾಟನೆ:

ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿ ‘ಅಂಬೇಡ್ಕರ್‌ ಭವನ ನಿರ್ಮಾಣ ಕಾಮಗಾರಿಗೆ ₹6 ಕೋಟಿ ಅಂದಾಜು ವೆಚ್ಚದ ಯೋಜನೆ ರೂಪಿಸಲಾಗಿದೆ. ಸದ್ಯ ₹50 ಲಕ್ಷ ಬಿಡುಗಡೆಯಾಗಿದೆ. ಸಕಾಲಕ್ಕೆ ಅನುದಾನ ಕೊಡಿಸಿದರೆ ಒಂದು ವರ್ಷದಲ್ಲಿ ಭವನ ಉದ್ಘಾಟನೆಯಾಗಲಿದೆ. ಪಟ್ಟಣದ ಬಾಬು ಜಗಜೀವನರಾಂ ಭವನದ ಮುಂದುವರಿದ ಕಾಮಗಾರಿಗೆ ಇನ್ನೂ ₹2 ಕೋಟಿ ಅನುದಾನದ ಅಗತ್ಯವಿದ್ದು ಬಿಡುಗಡೆ ಮಾಡಬೇಕು’ ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.