
ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಚಿಂದಿ ಆಯುತ್ತಾ ಜೀವನ ನಡೆಸುತ್ತಿದ್ದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಇಬ್ಬರು ಅಪರಾಧಿಗಳಿಗೆ ಮಂಡ್ಯದ ನಾಲ್ಕನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಜ.19ರಂದು ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿದೆ.
ತಾಲ್ಲೂಕಿನ ಪಾಲಹಳ್ಳಿ ಗ್ರಾಮದ ದಿವಂಗತ ಗೋಪಾಲಶೆಟ್ಟಿ ಅವರ ಮಗ ರಾಜೇಶ ಮತ್ತು ಮೈಸೂರು ಜಿಲ್ಲೆ ಟಿ. ನರಸೀಪುರ ತಾಲ್ಲೂಕು ನೆರಗ್ಯಾತನಹಳ್ಳಿ ಗ್ರಾಮದ ಮಹದೇವಯ್ಯ ಅವರ ಮಗ ಶಿವ ಅಲಿಯಾಸ್ ಕಪಿ ಅಲಿಯಾಸ್ ಶಿವಕುಮಾರ್ ಶಿಕ್ಷೆಗೆ ಗುರಿಯಾಗಿದ್ದಾರೆ.
ಪಟ್ಟಣದಲ್ಲಿ ಚಿಂದಿ ಆಯುತ್ತ ಜೀವನ ನಡೆಸುತ್ತಿದ್ದ ಈ ಇಬ್ಬರೂ ವ್ಯಕ್ತಿಗಳು 2020ರ ಮಾರ್ಚ್ 3ರಂದು ಪಟ್ಟಣದಲ್ಲಿ ಹುಣಸೂರು ಮೂಲದ, ಚಿಂದಿ ಆಯುವ ಮಹಿಳೆಯನ್ನು ಪಟ್ಟಣದ ಎಂ.ಕೆ. ಆಗ್ರೋಟೆಕ್ ಕಂಪೆನಿ ಎದುರಿನ ನೀರಿನ ಟ್ಯಾಂಕ್ ಬಳಿಯ ಕಂದಕಕ್ಕೆ ಎಳೆದೊಯ್ದು, ಮದ್ಯ ಕುಡಿಸಿ ಬಲವಂತವಾಗಿ ಅತ್ಯಾಚಾರ ನಡೆಸಿದ್ದರು. ಕೃತ್ಯದ ಕುರಿತು ಮಹಿಳೆ ಪೊಲೀಸರಿಗೆ ತಿಳಿಸುವುದಾಗಿ ಹೇಳಿದ ಕಾರಣಕ್ಕೆ ಆಕೆಯ ತಲೆಯನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿದ್ದರು.
ಪ್ರಕರಣ ಕುರಿತು ಪಟ್ಟಣ ಪೊಲೀಸ್ ಠಾಣೆಯ ಅಂದಿನ ಸಿಪಿಐ ಯೋಗೇಶ್.ಡಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಇಂದಿನ ಸಿಪಿಐ ಬಿ.ಜಿ. ಕುಮಾರ್ ಮತ್ತು ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಅಶ್ವಿನಿ ಎಂ.ಎನ್ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮಂಡ್ಯದ ನಾಲ್ಕನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಯಾದವ ಕೆ. ಅವರು ಅಪರಾಧಿಗಳಾದ ಶಿವ ಅಲಿಯಾಸ್ ಕಪಿ ಮತ್ತು ರಾಜೇಶ್ ಅವರಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ₹25 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕರಾದ ನಾಗರಾಜು ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.