ADVERTISEMENT

ಮಾರ್ಚ್‌ 3ರಂದು ಮೈಸೂರು ವಿವಿಯ 104ನೇ ಘಟಿಕೋತ್ಸವ: ವಿದ್ಯಾರ್ಥಿನಿಯರದ್ದೇ ಮೇಲುಗೈ

32,249 ಅಭ್ಯರ್ಥಿಗಳಿಗೆ ವಿವಿಧ ಪದವಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2024, 7:56 IST
Last Updated 1 ಮಾರ್ಚ್ 2024, 7:56 IST
<div class="paragraphs"><p>ಮೈಸೂರು ವಿಶ್ವವಿದ್ಯಾಲಯದ ಕಾರ್ಯಸೌಧ</p></div>

ಮೈಸೂರು ವಿಶ್ವವಿದ್ಯಾಲಯದ ಕಾರ್ಯಸೌಧ

   

ಮೈಸೂರು: ‘ಮೈಸೂರು ವಿಶ್ವವಿದ್ಯಾಲಯದ 104ನೇ ಘಟಿಕೋತ್ಸವವನ್ನು ಮಾರ್ಚ್‌ 3ರಂದು ಬೆಳಿಗ್ಗೆ 10ಕ್ಕೆ ಕ್ರಾಫರ್ಡ್‌ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದು, 19,992 ಮಹಿಳೆಯರು (ಶೇ 61.99) ಹಾಗೂ 12,257 ಪುರುಷರು (ಶೇ 38) ಸೇರಿದಂತೆ ಒಟ್ಟು 32,249 ಅಭ್ಯರ್ಥಿಗಳಿಗೆ ವಿವಿಧ ಪದವಿ ಪ್ರದಾನ ಮಾಡಲಾಗುವುದು’ ಎಂದು ಕುಲಪತಿ ಪ್ರೊ.ಎನ್.ಕೆ. ಲೋಕನಾಥ್‌ ತಿಳಿಸಿದರು.

‘45 ಮಹಿಳೆಯರು ಮತ್ತು 55 ಪುರುಷರು ಸೇರಿದಂತೆ ಒಟ್ಟು 100 ಮಂದಿಗೆ ವಿವಿಧ ವಿಷಯಗಳಲ್ಲಿ ಪಿಎಚ್‌.ಡಿ ಪ್ರದಾನ ಮಾಡಲಾಗುವುದು. ಒಟ್ಟು 436 ಪದಕಗಳು ಮತ್ತು 266 ನಗದು ಬಹುಮಾನಗಳನ್ನು 252 ಅಭ್ಯರ್ಥಿಗಳು ಪಡೆದುಕೊಂಡಿದ್ದಾರೆ. ಅವರಲ್ಲಿ 174 ಮಹಿಳೆಯರೇ ಆಗಿದ್ದಾರೆ. ಎಲ್ಲ ವಿಭಾಗದಲ್ಲೂ ಮಹಿಳೆಯರೇ ಮೇಲುಗೈ ಸಾಧಿಸಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾಹಿತಿ ನೀಡಿದರು.

ADVERTISEMENT

‘4,039 ಮಹಿಳೆಯರು (ಶೇ 65.73) ಸೇರಿದಂತೆ 6,144 ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಗೆ ಹಾಗೂ 15,910 ಮಹಿಳೆಯರು (ಶೇ 61.17) ಸೇರಿದಂತೆ 26,009 ಅಭ್ಯರ್ಥಿಗಳು ಸ್ನಾತಕ ಪದವಿಗೆ ಅರ್ಹವಾಗಿದ್ದಾರೆ’ ಎಂದು ತಿಳಿಸಿದರು.

ಹುದ್ದೆ ಭರ್ತಿಯಾಗದೇ ತೊಂದರೆ: ‘ಮೈಸೂರು ವಿಶ್ವವಿದ್ಯಾಲಯದ ವಿಭಜನೆಯಾಗಿದ್ದರೂ ಈ ಬಾರಿಯ ಘಟಿಕೋತ್ಸವದಲ್ಲಿ ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಗಳ ವಿದ್ಯಾರ್ಥಿಗಳು ಪದವಿ ಪಡೆದುಕೊಳ್ಳಲಿದ್ದಾರೆ’ ಎಂದರು.

‘ವಿಭಜನೆಗೆ ಮುನ್ನ ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ 236 ಕಾಲೇಜುಗಳು ಇದ್ದವು. ಈಗ, 111 ಇವೆ. ಮೈಸೂರು ಜಿಲ್ಲೆಯ ವ್ಯಾಪ್ತಿಯಷ್ಟೆ ಈಗ ಹೊಂದಲಾಗಿದೆ. ಇದರಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದೆ. ನಿರ್ವಹಣೆಯೂ ಸವಾಲಾಗಿ ಪರಿಣಮಿಸಿದೆ’ ಎಂದು ಪ್ರತಿಕ್ರಿಯಿಸಿದರು.

‘2007ರ ನಂತರ ವಿಶ್ವವಿದ್ಯಾಲಯದಲ್ಲಿ ಕಾಯಂ ಬೋಧಕ–ಬೋಧಕೇತರ ಸಿಬ್ಬಂದಿಯ ನೇಮಕಾತಿ ನಡೆದಿಲ್ಲ. ಅತಿಥಿ ಉಪನ್ಯಾಸಕರು ಹಾಗೂ ಹೊರಗುತ್ತಿಗೆ ನೌಕರರನ್ನು ನೇಮಿಸಿಕೊಂಡು ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲಾಗುತ್ತಿದೆ. ಶೇ 43ರಷ್ಟು ಹುದ್ದೆಗಳು ಖಾಲಿ ಇವೆ. ಭರ್ತಿ ಮಾಡಿಕೊಡುವಂತೆ ಸರ್ಕಾರಕ್ಕೆ ಹಲವು ಬಾರಿ ಪತ್ರ ಬರೆಯಲಾಗಿದೆ’ ಎಂದು ಹೇಳಿದರು.

‘664 ಬೋಧಕರ ಹುದ್ದೆಗಳು (ಕಾಯಂ) ಮಂಜೂರಾಗಿದ್ದು, ಈಗ ಇರುವುದು 290 ಮಾತ್ರ. ನಿವೃತ್ತಿಯಾದವರ ಸ್ಥಾನಕ್ಕೂ ಭರ್ತಿ ಮಾಡಿಕೊಳ್ಳಲಾಗುತ್ತಿಲ್ಲ. 1,349 ಬೋಧಕೇತರ ಹುದ್ದೆಗಳು ಮಂಜೂರಾಗಿದ್ದು ಈ ಪೈಕಿ 500ಕ್ಕೂ ಕಡಿಮೆ ಸಿಬ್ಬಂದಿ ಇದ್ದಾರೆ. 850 ಮಂದಿ ಅತಿಥಿ ಉಪನ್ಯಾಸಕರನ್ನು ಬಳಸಿಕೊಳ್ಳಲಾಗುತ್ತಿದೆ’ ಎಂದು ಕುಲಸಚಿವೆ ವಿ.ಆರ್.ಶೈಲಜಾ ಮಾಹಿತಿ ನೀಡಿದರು.

ಮೇಘನಾ ‘ಚಿನ್ನದ ಹುಡುಗಿ’

ಎಂ.ಎಸ್ಸಿ. ಕೆಮಿಸ್ಟ್ರಿ ವಿಷಯದಲ್ಲಿ 15 ಚಿನ್ನದ ಪದಕ ಹಾಗೂ 5 ಬಹುಮಾನಗಳನ್ನು ಪಡೆದಿರುವ ಮೇಘನಾ ಎಚ್‌.ಎಸ್. ‘ಚಿನ್ನದ ಹುಡುಗಿ’ಯಾಗಿ ಹೊರಹೊಮ್ಮಿದ್ದಾರೆ. ಎಂ.ಎ. ಕನ್ನಡ ವಿಷಯದಲ್ಲಿ ವಿ.ತೇಜಸ್ವಿನಿ 10 ಚಿನ್ನದ ಪದಕ ಮತ್ತು 4 ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಎಂ.ಎಸ್ಸಿ. ಗಣಿತದಲ್ಲಿ ಡಿ. ದರ್ಶನ್‌ 5 ಚಿನ್ನದ ಪದಕ, 3 ಬಹುಮಾನ, ಬಿಎ ವಿಭಾಗದಲ್ಲಿ ಎಂ.ಸುಮಾ 5 ಚಿನ್ನದ ಪದಕ, 3 ಬಹುಮಾನ, ಬಿ.ನಂದೀಶ 4 ಚಿನ್ನ ಹಾಗೂ 10 ಬಹುಮಾನ, ಬಿ.ಕಾಂ.ನಲ್ಲಿ ವೈ.ವೈ. ಸಿಂಧು ಒಂದು ಚಿನ್ನದ ಪದಕ ಹಾಗೂ 2 ಬಹುಮಾನ ಪಡೆದಿದ್ದಾರೆ.

ಬಿ.ಇಡಿ.ಯಲ್ಲಿ ಎಂ.ಮಾನಸಾ ಹಾಗೂ ಕೆ.ರಂಜಿತಾ ತಲಾ 2 ಚಿನ್ನದ ಪದಕ, 2 ನಗದು ಬಹುಮಾನ, ಎಂಬಿಎ– ಅಗ್ರಿ ಬ್ಯುಸಿನೆಸ್‌ನಲ್ಲಿ ಲಿಖಿತಾ ಎಸ್. 5 ಚಿನ್ನದ ಪದಕ, ಎಂ.ಕಾಂ.ನಲ್ಲಿ ಪಿ.ಬಿ. ಭಾಗ್ಯಶ್ರೀ ಭಟ್‌ 4 ಚಿನ್ನ, 2 ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ.

ಎಂ.ಇಡಿ.ಯಲ್ಲಿ 5 ಚಿನ್ನದ ಪದಕ ಹಾಗೂ ಒಂದು ನಗದು ಬಹುಮಾನ ಗಳಿಸಿದ್ದಾರೆ. ಎಲ್‌ಎಲ್‌ಎಂನಲ್ಲಿ ನವ್ಯಶ್ರೀ ಎಚ್‌.ಎಲ್. 4 ಚಿನ್ನದ ಪದಕ, 3 ಬಹುಮಾನ, ಬಿ.ಎಸ್ಸಿ.ಯಲ್ಲಿ ವಿ.ಪಿ. ರೋಶಿನಿ 5 ಚಿನ್ನದ ಪದಕ ಹಾಗೂ 2 ನಗದು ಬಹುಮಾನ, ದೀಪಿಕಾಗೌಡ ಎಂ.ಎಸ್. 4 ಚಿನ್ನದ ಪದಕ ಹಾಗೂ 7 ನಗದು ಬಹುಮಾನಕ್ಕೆ ಭಾಜನವಾಗಿದ್ದಾರೆ ಎಂದು ಕುಲಪತಿ ಲೋಕನಾಥ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.