ADVERTISEMENT

ಕೇಂದ್ರದಿಂದ ಬಂಡವಾಳಶಾಹಿಗಳಿಗೆ ಉಣ ಬಡಿಸುವ ಹಬ್ಬ: ದೇವನೂರ ಮಹಾದೇವ ಟೀಕೆ

ಕೇಂದ್ರ ಸರ್ಕಾರದ ವಿರುದ್ಧ ದೇವನೂರ ಮಹಾದೇವ ಟೀಕೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2020, 11:29 IST
Last Updated 6 ಡಿಸೆಂಬರ್ 2020, 11:29 IST
 ದೇವನೂರ ಮಹಾದೇವ
 ದೇವನೂರ ಮಹಾದೇವ   

ಮೈಸೂರು: ಸರ್ಕಾರವೇ ಜನಸಮುದಾಯವನ್ನು ಸದೆಬಡಿದು ಬಂಡವಾಳಶಾಹಿಗಳಿಗೆ ಉಣ ಬಡಿಸುವ ಹಬ್ಬ ದೇಶದಲ್ಲಿ ನಡೆಯುತ್ತಿದೆ ಎಂದು ಸಾಹಿತಿ ದೇವನೂರ ಮಹಾದೇವ ಬೇಸರ ವ್ಯಕ್ತಪ‍ಡಿಸಿದರು.

ದಲಿತ ಸಂಘರ್ಷ ಸಮಿತಿ ಒಕ್ಕೂಟದ ವತಿಯಿಂದ ಇಲ್ಲಿ ಭಾನುವಾರ ನಡೆದ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಪರಿನಿರ್ವಾಣ ದಿನಾಚರಣೆಯಲ್ಲಿ ಅವರು ಆರ್‌ಎಸ್‌ಎಸ್‌– ಬಿಜೆಪಿಯ ದುರಾಡಳಿತದ ವಿರುದ್ಧ ಜನಜಾಗೃತಿ ಅಭಿಯಾನದ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದರು.

ದೆಹಲಿಯಲ್ಲಿ ಒಂದು ವಾರದಿಂದ ಕೊರೆಯುವ ಚಳಿಯಲ್ಲಿ, ಹಗಲು ರಾತ್ರಿ ಎನ್ನದೇ ರೈತಾಪಿ ಸಮುದಾಯ ಚಳವಳಿ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಮಾತುಕತೆಯಲ್ಲಿ ವಂಚಿಸುತ್ತಿರುವುದನ್ನು ನೋಡಿದರೆ ಅದಕ್ಕೆ ಕಣ್ಣಿಲ್ಲ, ಹೃದಯದಲ್ಲಿ ಕಲ್ಲಿದೆ. ಮನಸ್ಸಿನಲ್ಲಿ ಮನುಷ್ಯತ್ವ ಇಲ್ಲ ಎನಿಸುತ್ತದೆ. ನಿಜಕ್ಕೂ ಸರ್ಕಾರದ್ದು ಪೈಶಾಚಿಕ ನಡೆ ಎಂದು ಟೀಕಿಸಿದರು.

ADVERTISEMENT

ಸಂವಿಧಾನ ಒಪ್ಪದ ಕೇಂದ್ರವು ತನ್ನದೇಯಾದ ಸಂವಿಧಾನವನ್ನು ಒಳಗಿಟ್ಟುಕೊಂಡು ಆಳ್ವಿಕೆ ಮಾಡುತ್ತಿದೆ. ಸಂವಿಧಾನ ಇಲ್ಲವಾಗಿಸಲು ಸಾಧ್ಯವಾಗದೇ ಇದ್ದಾಗ ಸಿಎಎ, ಎನ್‌ಆರ್‌ಸಿ ಮೂಲಕ ಅದರ ಶೀಲ ಕೆಡಿಸಿದೆ. ಆರ್ಥಿಕವಾಗಿ ದುರ್ಬಲರು ಎಂಬ ಹೆಸರಿನಲ್ಲಿ ಮೀಸಲಾತಿ ಕೊಟ್ಟು, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಪರಿಕಲ್ಪನೆಯನ್ನೇ ನೆಲ ಕಚ್ಚಿಸಿಬಿಟ್ಟರು. ಸಾಮಾಜಿಕ ನ್ಯಾಯವನ್ನು ಅಂಗಾತ ಮಲಗಿಸಿ ಬಿಟ್ಟರು ಎಂದು ಕಿಡಿಕಾರಿದರು.

ಜಿಎಸ್‌ಟಿ ಮೂಲಕ ರಾಜ್ಯಗಳನ್ನು ಭಿಕ್ಷೆ ಕೇಳುವ ಸ್ಥಿತಿಗೆ ದೂಡಿಬಿಟ್ಟಿದೆ. ಇಂದು ನಿಜಕ್ಕೂ ರಾಜ್ಯಗಳಿಗೆ ಅಸ್ತಿತ್ವ ಇದೆಯಾ, ಒಕ್ಕೂಟ ಸ್ಪರೂಪ ದೇಶದಲ್ಲಿದೆಯೇ ಎಂಬುದನ್ನು ಅವಲೋಕಿಸಬೇಕಿದೆ. ರಾಜ್ಯಗಳು ಪಕ್ಷಾತೀತವಾಗಿ ಎಚ್ಚರಗೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.

ಕೇಂದ್ರ ಸರ್ಕಾರ ಸ್ವಾಯತ್ತ ಸಂಸ್ಥೆಗಳ ಕುತ್ತಿಗೆಯಲ್ಲಿನ ನರ ಕತ್ತರಿಸಿದೆ. ಈಗ ಅವುಗಳ ಕುತ್ತಿಗೆಗಳು ನೇತಾಡುತ್ತಿವೆ. ಭಾರತವು ಭಾರತವಾಗಿ ಉಳಿಯುತ್ತದೆ ಎಂದು ಹೇಳುವುದೇ ಕಷ್ಟಕರವಾಗಿರುವ ಪರಿಸ್ಥಿತಿಯಲ್ಲಿ ನಾಲ್ಕಾರು ದಲಿತ ಬಣಗಳು ಒಂದುಗೂಡಿರುವುದು ಆಶಾಕಿರಣವಾಗಿದೆ. ದಲಿತರು, ರೈತರು, ಕಾರ್ಮಿಕರು ಒಂದಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಮಹಿಳೆಯರು ನಾಯಕತ್ವ ವಹಿಸದಿದ್ದರೆ ಇದೂ ಅಪೂರ್ಣವಾಗುತ್ತದೆ ಎಂದು ಹೇಳಿದರು.

‘ರಾಜಕೀಯ ಪಕ್ಷಗಳು ಜಾತಿ ಮತ ಪಂಗಡಗಳನ್ನು ದೇಶಕ್ಕಿಂತ ಮುಖ್ಯ ಎಂದು ಭಾವಿಸಿದರೆ ಸ್ವಾತಂತ್ರ್ಯಕ್ಕೆ ಗಂಡಾಂತರ ಬರುತ್ತದೆ’ ಎಂಬ ಅಂಬೇಡ್ಕರ್ ಹೇಳಿಕೆಯನ್ನು ಪ್ರಸ್ತಾಪಿಸಿ, ಈ ಮಾತು ಪ್ರಸ್ತುತಕ್ಕೆ ಹೆಚ್ಚು ಅನ್ವಯಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

‘ಸಂಘಟನೆಗಳು ಸಮುದಾಯದೊಳಗೆ ಕರಗಿ ಹೋಗಬೇಕು. ಅಲ್ಲಿ ಸಹನೆ, ಪ್ರೀತಿ, ಸಮಾನತೆ ಬಿತ್ತಬೇಕು. ಆಗ ಕರ್ನಾಟಕ ನಿಮ್ಮದು, ಅದು ನನ್ನದೂ ಕೂಡ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.