ಪ್ರಶಾಂತ್
byline
ಮೈಸೂರು: ಪುಂಡಾನೆ, ನರಭಕ್ಷಕ ಹುಲಿ ಸೆರೆ ಕಾರ್ಯಾಚರಣೆಯ ‘ಎ.ಕೆ.47’, ಗಜಪಡೆಯ ‘ಕ್ಯಾಪ್ಟನ್’ ಎಂದೇ ಕರೆಸಿಕೊಳ್ಳುವ ‘ಅಭಿಮನ್ಯು’ಗೆ ಈಗ 59 ತುಂಬಿದೆ. 6ನೇ ಬಾರಿ ಯಶಸ್ವಿಯಾಗಿ ಜಂಬೂಸವಾರಿಯ ಜವಾಬ್ದಾರಿ ಸರಾಗವಾಗಿ ನಿಭಾಯಿಸಿದ್ದಾನೆ. ಮುಂದೆ ಅವನ ‘ಭಾರ’ ಹೊರುವ ಉತ್ತರಾಧಿಕಾರಿ ಯಾರು?
ಹೀಗೊಂದು ಪ್ರಶ್ನೆ ಪ್ರತಿ ವರ್ಷವೂ ಜಂಬೂಸವಾರಿ ಮುಗಿದ ನಂತರ ಆನೆಪ್ರಿಯರಷ್ಟೇ ಅಲ್ಲ, ಅರಣ್ಯ ಇಲಾಖೆ ಅಧಿಕಾರಿಗಳ ಮುಂದೆಯೂ ಬರುತ್ತದೆ. ವರ್ಷದಿಂದ ವರ್ಷಕ್ಕೆ ಮಾಗುತ್ತ, ಜವಾಬ್ದಾರಿ ಹೊರಲು ಗಜಪಡೆಯ 6 ಆನೆಗಳು ಸಾಮರ್ಥ್ಯ ಸಾಬೀತು ಮಾಡುತ್ತಿವೆ.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕೇಂದ್ರ ಸರ್ಕಾರ ರೂಪಿಸಿರುವ ಮಾರ್ಗಸೂಚಿ ಪ್ರಕಾರ 60 ವರ್ಷವಾದರೆ ಆನೆಗಳ ಮೇಲೆ ಭಾರ ಹೇರುವಂತಿಲ್ಲ. ಹೀಗಾಗಿ, ಭವಿಷ್ಯದಲ್ಲಿ ಚಿನ್ನದ ಅಂಬಾರಿ ಹೊರುವ ಆನೆಯ ಹುಡುಕಾಟ ನಡೆಸಿರುವ ಇಲಾಖೆಯು ಪ್ರತಿವರ್ಷವೂ ಒಂದೊಂದು ಆನೆಯನ್ನು ಗಜಪಡೆಗೆ ಸೇರಿಸುತ್ತಲೇ ಬಂದಿದೆ.
15 ವರ್ಷದ ದಸರಾ ಅನುಭವಿ 53 ವರ್ಷದ ‘ಪ್ರಶಾಂತ’, 14 ವರ್ಷದಿಂದ ಬರುತ್ತಿರುವ ‘ಗೋಪಿ’, 2018ರಲ್ಲಿ ಸದಸ್ಯನಾದ ‘ಧನಂಜಯ’, 2022ರಲ್ಲಿ ದಸರಾ ಗಜಪಡೆಗೆ ಸೇರ್ಪಡೆಯಾದ ‘ಮಹೇಂದ್ರ’, ‘ಸುಗ್ರೀವ’, 2024ರಿಂದ ಬರುತ್ತಿರುವ ‘ಏಕಲವ್ಯ’ ಭರವಸೆ ಮೂಡಿಸಿವೆ. ಪ್ರಶಾಂತನನ್ನು ಹೊರತುಪಡಿಸಿ ಐದೂ ಆನೆಗಳು 40–45ರ ವಯೋಮಾನದವು.
ಗಜಪಡೆಗೆ ಸೇರ್ಪಡೆಯಾದ ಮೊದಲ ವರ್ಷವೇ ಶ್ರೀರಂಗಪಟ್ಟಣ ದಸರೆಯ ಅಂಬಾರಿ ಹೊತ್ತು ಸೈ ಎನಿಸಿಕೊಂಡು, 4 ಬಾರಿ ಅಲ್ಲಿನ ಅಂಬಾರಿ ಹೊತ್ತಿರುವ ‘ಮಹೇಂದ್ರ’, ಅಭಿಮನ್ಯು ನಂತರ ಹೆಚ್ಚು ದಸರೆಯಲ್ಲಿ ಪಾಲ್ಗೊಂಡಿರುವ ‘ಪ್ರಶಾಂತ’ನ ಮೇಲೆ ನಿರೀಕ್ಷೆಯು ಹೆಚ್ಚಿದೆ.
ಸುಂದರ ಹಾಗೂ ಗಾಂಭೀರ್ಯನಾದ ‘ಧನಂಜಯ’ನಿಗೆ ಅಂಬಾರಿ ಆನೆಯಾಗುವ ಎಲ್ಲ ಲಕ್ಷಣ ಹಾಗೂ ಅನುಭವ ಇವೆ. ಆದರೆ, ಸಿಡಿಮದ್ದಿಗೆ ಕೊಂಚ ಬೆದರುತ್ತಾನೆ. ಈ ವರ್ಷ ಎರಡನೇ ಕುಶಾಲತೋಪು ತಾಲೀಮಿನಲ್ಲಿ ಅದನ್ನು ಸುಧಾರಿಸಿಕೊಂಡಿದ್ದಾನೆ.
ಬಲಾಢ್ಯನಾದ ಭೀಮ:
2017 ಹಾಗೂ 2022ರಿಂದ ನಿರಂತರವಾಗಿ ಪಾಲ್ಗೊಂಡಿರುವ ‘ಭೀಮ’ 6,345 ತೂಕವಿದ್ದು, ಅವನಿಗೀಗ 25 ವರ್ಷ. ಮರಳು ಮೂಟೆ ಹಾಗೂ ಮರದ ಅಂಬಾರಿ ತಾಲೀಮಿನ ಜವಾಬ್ದಾರಿಯನ್ನೂ ಯಶಸ್ವಿಯಾಗಿ ಪೂರೈಸಿದ್ದಾನೆ. ಇವನೊಂದಿಗೆ ಸುಗ್ರೀವ (6,245 ಕೆ.ಜಿ) ಕೂಡ ತಾಲೀಮಿಗೆ ಉತ್ತಮವಾಗಿ ವರ್ತಿಸಿದ್ದಾನೆ.
ಅರ್ಜುನನನ್ನು ನೆನಪಿಸಿಸುವ ಏಕಲವ್ಯ!
‘ಏಕಲವ್ಯ’ ನಡಿಗೆಯು ಅಂಬಾರಿ ಹೊತ್ತು ತಲೆ ಎತ್ತಿ ನಡೆಯುತ್ತಿದ್ದ ‘ಅರ್ಜುನ’ನನ್ನು ನೆನಪಿಸುತ್ತದೆ. ಕತ್ತನ್ನು ಎತ್ತಿ ವೇಗವಾಗಿ ನಡೆಯುತ್ತಿದ್ದ ಶೈಲಿಗೆ ಆನೆಪ್ರಿಯರು ಮನಸೋತಿದ್ದಾರೆ. ಜ್ಯೂನಿಯರ್ ಅರ್ಜುನ ಎಂದೇ ಹೇಳುತ್ತಿದ್ದಾರೆ. 2023ರಿಂದ ಗಜಪಡೆ ಸೇರಿದ ‘ಕಂಜನ್’ಗೆ 26 ವರ್ಷವಾಗಿದ್ದು ಅವನೂ ಭಾರ ಹೆಚ್ಚಿಸಿಕೊಳ್ಳುತ್ತಿದ್ದಾನೆ. ಭವಿಷ್ಯದ ಅಂಬಾರಿ ಆನೆಗಳಾದ ಎರಡು ಮತ್ತು 3ನೇ ಸಾಲಿನ ಆನೆಗಳನ್ನು ಅರಣ್ಯ ಇಲಾಖೆಯು ತಯಾರು ಮಾಡಿದ್ದು ಅವುಗಳಿಗೆ ‘ಅಭಿಮನ್ಯು’ ಅನುಭವ ಸಿಗಲಿದೆ. ಏಕೆಂದರೆ ಈ ಎಲ್ಲ ಆನೆಗಳ ಸೆರೆ ಹಿಡಿಯುವ ಹಾಗೂ ಪಳಗಿಸುವ ಕಾರ್ಯಾಚರಣೆಯಲ್ಲಿ ಇದ್ದದ್ದು ‘ಎ.ಕೆ.47’!
‘ಇಲಾಖೆಯು ನಿರ್ಧರಿಸಲಿದೆ’ ‘ಮುಂದಿನ ವರ್ಷವೂ ಅಭಿಮನ್ಯು ಹೊರುವ ಭರವಸೆ ಇದೆ. ಆಯಾ ವರ್ಷವೇ ಅಂಬಾರಿ ಹೊರುವ ಆನೆಯನ್ನು ಇಲಾಖೆಯು ಪ್ರತಿ ವರ್ಷ ರಚಿಸುವ ಸಮಿತಿಯ ವರದಿ ಮೇಲಿನ ಅಧಿಕಾರಿಗಳು ನಿರ್ಧರಿಸುತ್ತಾರೆ’ ಎಂದು ಡಿಸಿಎಫ್ ಐ.ಬಿ.ಪ್ರಭುಗೌಡ ‘ಪ್ರಜಾವಾಣಿ’ಗೆ ತಿಳಿಸಿದರು. ‘ಪ್ರಶಾಂತ ಮಹೇಂದ್ರ ಧನಂಜಯ ಸುಗ್ರೀವ ಏಕಲವ್ಯ ಸೇರಿದಂತೆ ಸಾಮರ್ಥ್ಯದ ಆನೆಗಳ ಸಾಲೇ ಇದೆ. ಅವುಗಳಿಗೆ ತಾಲೀಮನ್ನು ನೀಡಲಾಗುತ್ತಿದೆ. ಗೋಪಿ ಕಂಜನ್ ಆನೆಗಳಿಗೆ ಹೆಚ್ಚು ಭಾರ ಹೊರುವ ಸಾಮರ್ಥ್ಯ ಕಡಿಮೆ. ವರ್ತನೆ ಚೆನ್ನಾಗಿದೆ’ ಎಂದರು. ‘ಕೇವಲ ಭಾರವಿದ್ದ ಮಾತ್ರಕ್ಕೆ ಅಂಬಾರಿ ಆನೆಯಾಗುವುದಿಲ್ಲ. ಹೊರುವ ಶಕ್ತಿಯ ಜೊತೆಗೆ ಮಾವುತ ಮತ್ತು ಕಾವಾಡಿ ಜೊತೆಗಿನ ಅನುಬಂಧವೂ ಮುಖ್ಯವಾಗುತ್ತದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.