ಹುಣಸೂರು: ಆದಿವಾಸಿ ಗಿರಿಜನರ ಮೂಲಭೂತ ಹಕ್ಕುಗಳಾದ ಸುಸ್ಥಿರ ಅಭಿವೃದ್ಧಿ, ಅರಣ್ಯ ಸಂಪತ್ತಿನ ಮೇಲೆ ಆದಿವಾಸಿಗಳ ಅಧಿಕಾರ, ಆಹಾರ ಸುರಕ್ಷತೆ ಸಾರ್ವಭೌಮತ್ವ ಮತ್ತು ಸ್ಥಳೀಯರ ಸ್ವನಿರ್ಣಯದ ಹಕ್ಕು ಆದಿವಾಸಿ ಸಮುದಾಯದವರಿಗೆ ದಕ್ಕಬೇಕಾಗಿದೆ ಎಂದು ಆದಿವಾಸಿ ಪಾರ್ಲಿಮೆಂಟ್ ಸಮಿತಿ ಅಧ್ಯಕ್ಷ ಹರ್ಷ ಹೇಳಿದರು.
ನಗರದ ಡೀಡ್ ಸಂಸ್ಥೆಯಲ್ಲಿ ಭಾನುವಾರ ನಡೆದ ಅಂತರಾಷ್ಟ್ರೀಯ ಆದಿವಾಸಿ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ರಾಜ್ಯ ಸರ್ಕಾರ ಆದಿವಾಸಿ ಸಮುದಾಯದವರಿಗೆ ಈಗಾಗಲೇ 10 ಭರವಸೆಗಳನ್ನು ನೀಡಿದ್ದು, ಈವರೆಗೂ ಒಂದು ಭರವಸೆಯನ್ನು ಈಡೇರಿಸಿಲ್ಲ. ಬದುಕು ಕಟ್ಟಿಕೊಳ್ಳಲು ಬೇಕಾದ ಜಮೀನು ಭದ್ರತೆ, ಆಹಾರ ಸುರಕ್ಷತೆ ಮತ್ತು ಸಾರ್ವಭೌಮತ್ವಗಳಿಗೆ ಕಡಿವಾಣ ಹಾಕುವ ಮೂಲಕ ಅವರನ್ನು ಅರಣ್ಯದಿಂದ ಹೊರ ಹಾಕಿದ್ದು, ಕಾನೂನಿಗೆ ಶರಣಾಗಿ ಹೊರ ಬಂದ ಆದಿವಾಸಿ ಗಿರಿಜನರಿಗೆ ಈವರೆಗೂ ನೆಲೆಕಟ್ಟಿಕೊಳ್ಳಲು ಯೋಜನೆ ರೂಪಿಸಿ ಮನುಷ್ಯರಂತೆ ಬದುಕುವ ಅವಕಾಶ ನೀಡದೆ ವಂಚಿಸಿದೆ’ ಎಂದು ಆರೋಪಿಸಿದರು.
‘ಆದಿವಾಸಿ ಹಕ್ಕುಗಳಿಗಾಗಿ ಮುಖ್ಯಮಂತ್ರಿ ಸೇರಿದಂತೆ ಅಧಿಕಾರಿ ವರ್ಗದವರ ಗಮನ ಸೆಳೆದಿದ್ದರೂ ಈವರೆಗೂ ಈಡೇರಿಸಿಲ್ಲ. ಪ್ರೊ. ಅಸಾದಿ ವರದಿಯನ್ನು ಜಾರಿಗೊಳಿಸಿ ಅರಣ್ಯದಿಂದ ಹೊರ ಬಂದ ಗಿರಿಜನರಿಗೆ ಪುನರ್ವಸತಿ ಕಲ್ಪಿಸುವಂತೆ ಹೈಕೋರ್ಟ್ ಆದೇಶಿಸಿದ್ದರೂ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ’ ಎಂದರು.
ಆದಿವಾಸಿ ಮುಖಂಡ ಜಯಪ್ಪ ಮಾತನಾಡಿ, ‘ಸರ್ಕಾರ ಮೊದಲಿಗೆ ಆದಿವಾಸಿ ಸಮುದಾಯದ ಮೂಲ ಬೇಡಿಕೆಯನ್ನು ಈಡೇರಿಸಿ ನಂತರದಲ್ಲಿ ಆದಿವಾಸಿ ದಿನ ಆಚರಿಸಲು ಮುಂದಾಗಲಿ. ದೊಡ್ಡ ವೇದಿಕೆಯಲ್ಲಿ ಆದಿವಾಸಿಗಳ ಕೊಡುಗೆ ಗುಣಗಾನ ಮಾಡಿ ನಂತರದಲ್ಲಿ ಸಮುದಾಯದ ಬೇಡಿಕೆಗೆ ಸ್ಪಂದಿಸದಿರುವುದರಲ್ಲಿ ಅರ್ಥವಿಲ್ಲ’ ಎಂದರು.
ಸಭೆಯಲ್ಲಿ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ, ಡೀಡ್ ಸಂಸ್ಥೆಯ ನಿರ್ದೇಶಕ ಶ್ರೀಕಾಂತ್, ಆದಿವಾಸಿ ಮುಖಂಡರಾದ ಶಿವಣ್ಣ, ಮಾಸ್ತಮ್ಮ, ಲಕ್ಷ್ಮಿ, ವಿಠ್ಠಲ್ ನಾಣಚ್ಚಿ, ಶೀಲಾ ಮತ್ತು ಇತರರಿದ್ದರು.
ಅಂತರಾಷ್ಟ್ರೀಯ ಆದಿವಾಸಿ ದಿನವನ್ನು ಡೀಡ್ ಸಂಸ್ಥೆಯಲ್ಲಿ ಆ.9ರಂದು ಆಚರಿಸುತ್ತಿದ್ದು ಆ ದಿನ ಆದಿವಾಸಿಗಳ ಸ್ವನಿರ್ಣಯದ ಹಕ್ಕು ಆಹಾರ ಸುರಕ್ಷತೆ ಮತ್ತು ಸಾರ್ವಭೌಮತ್ವ ಹಕ್ಕು ಕುರಿತು ಚರ್ಚೆ ನಡೆಸಿ ಸರ್ಕಾರದ ಗಮನಕ್ಕೆ ತರಲು ಭಿನ್ನ ರೂಪದ ಹೋರಾಟಕ್ಕೆ ಒತ್ತು ನೀಡಲಾಗುವುದುಶ್ರೀಕಾಂತ್ ಡೀಡ್ ಸಂಸ್ಥೆಯ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.