ADVERTISEMENT

ಪಿರಿಯಾಪಟ್ಟಣ: ₹439.88 ಕೋಟಿ ಅನುದಾನದಲ್ಲಿ ವಿವಿಧ ಕಾಮಗಾರಿ ಉದ್ಘಾಟನೆ

ಯಂತ್ರೋಪಕರಣ ಖರೀದಿ: ರೈತರಿಗೆ ಸಹಾಯಧನ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2025, 15:52 IST
Last Updated 26 ಏಪ್ರಿಲ್ 2025, 15:52 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಪಿರಿಯಾಪಟ್ಟಣ (ಮೈಸೂರು ಜಿಲ್ಲೆ): ‘ನಾನು ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದಾಗ, ರೈತರು ಯಂತ್ರೋಪಕರಣ ಬಳಸುವಂತೆ ಉತ್ತೇಜಿಸಲು ‘ಕೃಷಿ ಯಂತ್ರಧಾರೆ’ ಯೋಜನೆ ಮೂಲಕ ಬಾಡಿಗೆಗೆ ದೊರೆಯುವಂತೆ ಮಾಡಿದ್ದೆವು. ಈಗ ಸಹಾಯಧನ ನೀಡಿ ಅವರೇ ಖರೀದಿಸಲು ಶಕ್ತಿ ತುಂಬುತ್ತಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿಯಿಂದ ಇಲ್ಲಿನ ಕ್ರೀಡಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ₹439.88 ಕೋಟಿ ಅನುದಾನದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ, ಡಾ.ಬಿ.ಆರ್.ಅಂಬೇಡ್ಕರ್‌ ಮತ್ತು ಜಗಜೀವನರಾಂ ಜಯಂತಿ ಆಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ADVERTISEMENT

‘ಕೃಷಿಕರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ನಮ್ಮ ಉದ್ದೇಶ. ಪಿರಿಯಾಪಟ್ಟಣ ಕೃಷಿ ಪ್ರಧಾನ ಕ್ಷೇತ್ರ. ಹೀಗಾಗಿ 300ಕ್ಕೂ ಹೆಚ್ಚು ರೈತರಿಗೆ ₹100 ಕೋಟಿಗೂ ಅಧಿಕ ಮೊತ್ತದ ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಗಿದೆ. ಕೃಷಿ ಕಾರ್ಮಿಕರು ನಗರಗಳಿಗೆ ವಲಸೆ ಹೋಗಿದ್ದರಿಂದ ಗ್ರಾಮೀಣ ರೈತರು ಯಂತ್ರಗಳ ಮೇಲೆ ಅವಲಂಬಿತರಾಗಬೇಕಾಗಿದೆ’ ಎಂದರು.

ಉತ್ತಮ ಮುಂಗಾರು:

‘ಹೋದ ವರ್ಷ ಉತ್ತಮ ಮಳೆಯಾಗಿ ಜಲಾಶಯಗಳೆಲ್ಲವೂ ತುಂಬಿದ್ದವು. ಈ ವರ್ಷವೂ ಆಶಾದಾಯಕ ಮುಂಗಾರಿನ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಉತ್ತಮ ಬೆಳೆಯಾಗುವ ನಿರೀಕ್ಷೆ ಇದೆ. ಇದರಿಂದ, ರೈತರ ಮೊಗದಲ್ಲಿ ಮಂದಹಾಸ ಕಾಣಲು ಸಾಧ್ಯವಾಗಲಿದೆ. ನಮ್ಮ ಗ್ಯಾರಂಟಿ ಯೋಜನೆಗಳಿಂದ ಜನರ ಬಳಿ ಹಣ ಓಡಾಡುತ್ತಿದೆ. ಅವರು ಖುಷಿಯಾಗಿದ್ದಾರೆ. ಇದನ್ನು ನೋಡಿ ಬಿಜೆಪಿಯವರು ಹೊಟ್ಟೆಉರಿಪಟ್ಟುಕೊಳ್ಳುತ್ತಿದ್ದಾರೆ’ ಎಂಟು ಟೀಕಿಸಿದರು.

‘ಬಿಜೆಪಿಯವರು ಕೇವಲ ಸುಳ್ಳು ಹೇಳಿಕೊಂಡು, ದೇವರು– ಧರ್ಮದ ಹೆಸರಲ್ಲಿ ರಾಜಕೀಯ ಮಾಡಿದರು. ವೈಫಲ್ಯಗಳನ್ನು ಮುಚ್ಚಿಕೊಂಡು ಜನರ ದಿಕ್ಕು ತಪ್ಪಿಸಿ ಕಾಲ‌ ಕಳೆದರು. ಲೂಟಿ ಮಾಡಿಕೊಂಡು ಮನೆಗೆ ಹೋದರು’ ಎಂದು ಆರೋಪಿಸಿದರು.

‘ನಾವು ನುಡಿದಂತೆ ನಡೆಯುತ್ತಿದ್ದೇವೆ. ಆಸ್ತಿ ಸೃಷ್ಟಿಸಲು (ಕ್ಯಾಪಿಟಲ್‌ ಎಕ್ಸ್‌ಪ್ಯಾಂಡಿಚರ್‌) ನಮ್ಮ ಬಳಿ ಹಣವಿದೆ. ₹ 83ಸಾವಿರ ಕೋಟಿ ಕೊಡುತ್ತಿದ್ದೇವೆ. ಗ್ಯಾರಂಟಿ ಯೋಜನೆಗಳಿಗೂ ಹಣ ನೀಡುತ್ತಿದ್ದೇವೆ. ಅಭಿವೃದ್ಧಿಯೂ ನಡೆಯುತ್ತಿದೆ’ ಎಂದು ತಿಳಿಸಿದರು.

ಇದು ಅಭಿವೃದ್ಧಿಯಲ್ಲವೇ?:

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತನಾಡಿ, ‘ಬಿಜೆಪಿ ಹಾಗೂ ಜೆಡಿಎಸ್‌ನವರು ಮಾತೆತ್ತಿದರೆ ಅಭಿವೃದ್ಧಿ ಇಲ್ಲ ಎನ್ನುತ್ತಿದ್ದಾರೆ. ನಮ್ಮ ಸರ್ಕಾರ ಪಿರಿಯಾಪಟ್ಟಣ ಕ್ಷೇತ್ರವೊಂದಕ್ಕೇ ₹500 ಕೋಟಿ ಮೊತ್ತದ ಯೋಜನೆಗಳನ್ನು ನೀಡಿದೆ. ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಭಾಗದ ಜಿಲ್ಲೆಗಳಿಗೆ ₹3,467 ಕೋಟಿ ಮೊತ್ತದ ಯೋಜನೆಗಳಿಗೆ ಅನುಮೊದನೆ ನೀಡಲಾಗಿದೆ. ಇದು ಅಭಿವೃದ್ಧಿಯಲ್ಲವೇ? ಬಡ ಕುಟುಂಬಗಳಿಗೆ ಪ್ರತಿ ತಿಂಗಳು ₹ 4ಸಾವಿರದಿಂದ-₹5 ಸಾವಿರ ಉಳಿತಾಯ ಆಗುವಂತೆ ಮಾಡುತ್ತಿರುವುದು ಅಭಿವೃದ್ಧಿಯಲ್ಲವೇ? ಜನರು ಶಕ್ತಿಯುತವಾದರೆ ರಾಜ್ಯ ಹಾಗೂ ಸರ್ಕಾರ ಶಕ್ತವಾಗುತ್ತದೆ. ಇದು ಕಾಂಗ್ರೆಸ್ ಸರ್ಕಾರದ ಚಿಂತನೆ’ ಎಂದರು.

‘ಗ್ಯಾರಂಟಿಗಳನ್ನು ವಿರೋಧಿಸಿದ್ದ ಬಿಜೆಪಿಯವರು ಬೇರೆ ಹೆಸರುಗಳನ್ನು ಇಟ್ಟುಕೊಂಡು ಕಾಪಿ ಮಾಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ರೇಷ್ಮೆಗೆ ಒಳ್ಳೆಯ ಬೆಲೆ ಸಿಗುತ್ತಿದೆ. ಇಲ್ಲೂ ಉತ್ತಮ ರೇಷ್ಮೆ ಬೆಳೆಯಬಹುದು. ರೈತರು ಈ ನಿಟ್ಟಿನಲ್ಲಿ ಯೋಚಿಸಬೇಕು’ ಎಂದು ಸಲಹೆ ನೀಡಿದರು.

ಅಭಿವೃದ್ಧಿಯ ಮಹಾಪೂರ:

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಮಾತನಾಡಿ, ‘ಪಿರಿಯಾಪಟ್ಟಣದಲ್ಲಿ ಅಭಿವೃದ್ಧಿಯ ಮಹಾಪೂರವನ್ನೇ ಈಗ ಹರಿಸಲಾಗಿದೆ. ಜನರ ಒತ್ತಾಯದಂತೆ ಅಂಬೇಡ್ಕರ್ ಭವನ ಪೂರ್ಣಗೊಳಿಸಲು, ಪ್ರತಿಮೆ ಸ್ಥಾಪನೆಗೆ ಹಾಗೂ ಬುದ್ಧವಿಹಾರ ನಿರ್ಮಾಣಕ್ಕೆ ನಮ್ಮ ಸರ್ಕಾರ ಹಣ ಕೊಡಲಿದೆ. ನಮ್ಮೆಲ್ಲರನ್ನೂ ರಕ್ಷಿಸುತ್ತಿರುವ ಸಂವಿಧಾನ ನೀಡಿದ ಅಂಬೇಡ್ಕರ್‌ ವಿಷಯದಲ್ಲಿ ₹ 20 ಕೋಟಿ ಕೊಡಲಾಗುವುದಿಲ್ಲವೇ’ ಎಂದು ಕೇಳಿದರು.

‘ಪಿರಿಯಾಪಟ್ಟಣದಲ್ಲಿ ಇನ್ನೂ ಏನೇನು ಅಭಿವೃದ್ಧಿ ಮಾಡಬೇಕಿದೆ ಹೇಳಿ ಎಂದು ಸಚಿವ ವೆಂಕಟೇಶ್‌ ಜನರನ್ನು ಕೇಳಿದ್ದಾರೆ. ಅವರಿಗೆ ಎಷ್ಟು ಗಟ್ಸ್ ಇರಬೇಕು? ಚೆನ್ನಾಗಿ ಕೆಲಸ ಮಾಡಿದ್ದರಷ್ಟೆ ಹಾಗೆ ಕೇಳಬಹುದು’ ಎಂದು ಶ್ಲಾಘಿಸಿದರು.

‘ನಾವು ರೈತರಿಗೆ ಅನುಕೂಲ ಆಗಲೆಂದು ಹಾಲಿನ ದರವನ್ನು ₹ 4 ಏರಿಕೆ ಮಾಡಿದ್ದೇವೆ. ಹಾಲಿನ ಉತ್ಪಾದನೆ ಜಾಸ್ತಿಯಾಗಿದೆ. ಮಾರ್ಚ್ ಕೊನೆಯವರೆಗೂ ಸಹಾಯಧನ ಹಣ ಬಿಡುಗಡೆ ಮಾಡಲಾಗಿದೆ. ಬಿಜೆಪಿಯವರು ₹ 700 ಕೋಟಿ ಬಾಕಿ ಉಳಿಸಿದ್ದರಿಂದ, ಅದನ್ನೆಲ್ಲಾ ತೀರಿಸಬೇಕಾದ್ದರಿಂದ ತಡವಾಯಿತು. ಇನ್ಮುಂದೆ ಆಯಾ ತಿಂಗಳೇ ದೊರೆಯಲಿದೆ’ ಎಂದು ಹೇಳಿದರು.

ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಲಾಯಿತು.

ಸಚಿವರಾದ ಬಿ.ಎಸ್. ಸುರೇಶ್, ಎಂ.ಸಿ. ಸುಧಾಕರ್, ಶಾಸಕ ಡಿ.ರವಿಶಂಕರ್‌, ವಿಧಾನಪರಿಷತ್‌ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಡಾ.ಯತೀಂದ್ರ ಸಿದ್ದರಾಮಯ್ಯ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್‌ಖಾನ್, ಪುರಸಭೆ ಅಧ್ಯಕ್ಷ ಪ್ರಕಾಶ್, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ, ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್‌, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್‌ಕುಮಾರ್‌ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.