ADVERTISEMENT

ಸುತ್ತೂರು ಕೆವಿಕೆಯಿಂದ ತಂತ್ರಜ್ಞಾನ ಪರಿಚಯ: ಬೇರು ಸುಂಡೆಬದನೆ, ಗಿಡ ಟೊಮೆಟೊ!

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 2:43 IST
Last Updated 13 ಜನವರಿ 2026, 2:43 IST
ಸುಂಡೆಬದನೆ ಜೊತೆ ಟೊಮೆಟೊ ಕಸಿ ಮಾಡಿರುವುದು ಸಸಿ ಕಾಯಿ ಬಿಟ್ಟಿರುವುದು
ಸುಂಡೆಬದನೆ ಜೊತೆ ಟೊಮೆಟೊ ಕಸಿ ಮಾಡಿರುವುದು ಸಸಿ ಕಾಯಿ ಬಿಟ್ಟಿರುವುದು   

ಸುತ್ತೂರು : ಬೇರಿನಲ್ಲಿ ಸುಂಡೆಬದನೆ ಇದ್ದರೆ, ಬೆಳೆಯುವ ಗಿಡ ಟೊಮೆಟೊ. ಅಚ್ಚರಿಯಾದರೂ ನಿಜ. ಇದು ‘ಕಸಿ’ಯ ‘ಫಲ’.

ಟೊಮೆಟೊ ಸಾಮಾನ್ಯವಾಗಿ 3ರಿಂದ 4 ತಿಂಗಳು ಫಲ ಕೊಡುತ್ತದೆ. ಆದರೆ, ಸುಂಡೆಬದನೆಯೊಂದಿಗೆ ಕಸಿ ಮಾಡುವುದರಿಂದ ಸರಾಸರಿ ಒಂದೂವರೆ ವರ್ಷದಿಂದ ಎರಡು ವರ್ಷದವರೆಗೆ ಫಸಲು ತೆಗೆಯಬಹುದು. ಇದರಿಂದ, ರೈತರಿಗೆ ಆದಾಯ ಮುಂದುವರಿಯುತ್ತದೆ. 

ಇಂಥದೊಂದು ಹೊಸ ಕೃಷಿ ತಂತ್ರಜ್ಞಾನವನ್ನು ಇಲ್ಲಿನ ಜೆಎಸ್‌ಎಸ್‌ ಕೃಷಿ ವಿಜ್ಞಾನ ಕೇಂದ್ರದಿಂದ ಪರಿಚಯಿಸಲಾಗಿದೆ. ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಕೃಷಿ ಮೇಳದಲ್ಲಿ ರೈತರು ಪ್ರಾತ್ಯಕ್ಷಿಕೆಯ ಮೂಲಕ ಈ ತಂತ್ರಜ್ಞಾನವನ್ನು ತಿಳಿದುಕೊಳ್ಳಬಹುದಾಗಿದೆ. ಜಮೀನಿನಲ್ಲಿ ಅಳವಡಿಕೆಗೆ ಬೇಕಾಗುವ ತಾಂತ್ರಿಕ ಮಾಹಿತಿ ಮತ್ತು ಮಾರ್ಗದರ್ಶನವನ್ನು ಬೇಸಾಯ ವಿಷಯ ತಜ್ಞರು ನೀಡಲಿದ್ದಾರೆ. 

ADVERTISEMENT

ತಾಕೊಂದರಲ್ಲಿ ಈ ಕಸಿ ತಂತ್ರಜ್ಞಾನವನ್ನು ಬಳಸಿ ಟೊಮೆಟೊ ಬೆಳೆಯ ಪ್ರಾತ್ಯಕ್ಷಿಕೆ ಮಾಡಿರುವುದು ಗಮನಸೆಳೆಯುತ್ತಿದೆ. ವಿವಿಧ ಬಳ್ಳಿಗಳ ಲೋಕವನ್ನೇ ಮೇಳದಲ್ಲಿ ಪರಿಚಯಿಸಲಾಗಿದೆ.

ಕಸಿ ಹೇಗೆ?: 

‘ಕಾಡುಬದನೆ (ಸುಂಡೆ, ಮುಳ್ಳುಬದನೆ) ಕಾಂಡಕ್ಕೆ ಕಸಿ ಮಾಡಿ ಟೊಮೆಟೊ ಬೆಳೆಯ ಪ್ರಾತ್ಯಕ್ಷಿಕೆ ತಾಕು ಸಿದ್ಧಪಡಿಸಲಾಗಿದೆ. ಟ್ರೇನಲ್ಲಿ 25 ದಿನಗಳವರೆಗೆ ಬೆಳೆಸಿ ನಂತರ ನಾಟಿ ಮಾಡಲಾಗುತ್ತದೆ. ಸುಂಡೆಬದನೆಯು ಮಣ್ಣಿನಿಂದ ಬರುವ ರೋಗಗಳನ್ನು ತಡೆಯುವ ಸಾಮರ್ಥ್ಯ ಹೊಂದಿರುವುದರಿಂದಾಗಿ ಟೊಮೆಟೊಗೆ ಅನುಕೂಲವಾಗುತ್ತದೆ. ಎರಡು ವರ್ಷ ಬೆಳೆ ತೆಗೆಯಬಹುದು. ಸಾಂಪ್ರದಾಯಿಕ ಕೃಷಿಯ ಬದಲಿಗೆ ಇಂತಹ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ವರಮಾನ ಹೆಚ್ಚಿಸಿಕೊಳ್ಳುವುದಕ್ಕೆ ಪೂರಕವಾಗಿ ಮಾರ್ಗದರ್ಶನ ನೀಡುವ ಉದ್ದೇಶದಿಂದ ಈ ಪ್ರಯೋಗ ಮಾಡಲಾಗಿದೆ’ ಎಂದು ಜೆಎಸ್‌ಎಸ್‌–ಕೆವಿಕೆಯ ಮುಖ್ಯಸ್ಥ ಬಿ.ಎನ್‌. ಜ್ಞಾನೇಶ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಇದೇ ರೀತಿ ಸುಂಡೆಬದನೆ ಜೊತೆಗೆ ಬಿಳಿಬದನೆ (ಉದ್ದದ್ದು) ಹಾಗೂ ಗುಂಡುಬದನೆಯನ್ನೂ ಕಸಿ ಮಾಡಲಾಗಿದೆ. ಅದನ್ನು ಮೂರು ವರ್ಷದವರೆಗೆ ಬೆಳೆಯಬಹುದು ಎಂಬುದನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿಕೊಡಲಾಗಿದೆ. ಗಿಡಗಳಿಗೆ ಗೊಬ್ಬರ ಹಾಕುವುದರಿಂದ ವ್ಯರ್ಥವಾಗುವುದೇ ಹೆಚ್ಚು. ಇದನ್ನು ತಪ್ಪಿಸಲು ಗೊಬ್ಬರವನ್ನು ಕ್ಯಾಪ್ಶೂಲ್ ವಿಧಾನದಲ್ಲಿ (ಮಾತ್ರೆ) ನೀಡುವ ಪ್ರಾತ್ಯಕ್ಷಿಕೆಯೂ ಕೃಷಿ ಮೇಳದಲ್ಲಿದೆ.

ಸುಧಾರಿತ ಭತ್ತ, ರಾಗಿ, ಮುಸುಕಿನಜೋಳ, ಸಿರಿಧಾನ್ಯಗಳ ಸುಧಾರಿತ ತಳಿಗಳನ್ನು ಪರಿಚಯಿಸಲಾಗಿದೆ. ಪೌಷ್ಟಿಕ ಕೈತೋಟವನ್ನೂ ನೋಡಬಹುದು.

ವಸ್ತುಪ್ರದರ್ಶನದಲ್ಲಿ 320 ಮಳಿಗೆ ಇರಲಿವೆ. ಈ ಬಾರಿ ವಿಶೇಷವಾಗಿ, ಮೂತ್ರಪಿಂಡಗಳ ಬಗ್ಗೆ ಮಾಹಿತಿ ನೀಡುವುದು ವಿಶೇಷ ಎನಿಸಲಿದೆ.

7 ತಳಿಯ ಬಾಳೆ ಪ್ರಾತ್ಯಕ್ಷಿಕೆ

‘ಪ್ರಾತ್ಯಕ್ಷಿಕೆಗಾಗಿ ಏಳು ರೀತಿಯ ಬಾಳೆ ಹಾಕಲಾಗಿದೆ. ಕಬ್ಬು ಬೆಳೆಯೊಂದಿಗೆ ಅವರೆ ಅಲಸಂದೆ ಹುರುಳಿ ಸೋಯಾಬೀನ್ ಉದ್ದು ಹೆಸರು ಮೊದಲಾದ ಮೂರು ತಿಂಗಳವರೆಗೆ ಬರಬಹುದಾದ ಅಂತರಬೆಳೆ ಪದ್ಧತಿಯ ಪ್ರಾತ್ಯಕ್ಷಿಕೆ ಇದೆ. ಇದರಿಂದ ರೈತರಿಗೆ ಹೆಚ್ಚುವರಿ ಆದಾಯ ಬರುತ್ತದೆ. ಈ ದ್ವಿದಳಧಾನ್ಯಗಳ ಎಲೆ ಉದುರುವುದರಿಂದ ಮುಖ್ಯ ಬೆಳೆಗೆ ಬಹಳ ಅನುಕೂಲ ಆಗುತ್ತದೆ. ಕಬ್ಬಿನಲ್ಲಿ ನಾವು 4 ಅಡಿ ಅಂತರದಲ್ಲಿ ಇತರ ಬೆಳೆ ಹಾಕಿ ಪ್ರಾತ್ಯಕ್ಷಿಕೆ ಸಿದ್ಧಪಡಿಸಿದ್ದೇವೆ. ಮುಸುಕಿನಜೋಳದ ನಡುವೆ ಎರಡು ಸಾಲುಗಳ ನಡುವೆ ತೊಗರಿ ಹಾಕಲಾಗಿದೆ’ ಎಂದು ಬೇಸಾಯ ವಿಷಯ ತಜ್ಞ ಶ್ಯಾಮರಾಜ್ ತಿಳಿಸಿದರು. ಭೌಗೋಳಿಕ ಸೂಚ್ಯಂಕದ (ಜಿಐ) ಬೆಳೆಗಳಾದ ಮೈಸೂರು ಮಲ್ಲಿಗೆ ನಂಜನಗೂಡು ರಸಬಾಳೆ ಮೈಸೂರು ವೀಳ್ಯದೆಲೆ ಪ್ರಾತ್ಯಕ್ಷಿಕೆ ಮೂಲಕ ಪ್ರಚಾರಕ್ಕೆ ಒತ್ತು ನೀಡಲಾಗಿದೆ. ಜೊತೆಗೆ ಈರನಗೆರೆ ಬದನೆಕಾಯಿಯ ಕುರಿತೂ ತಿಳಿಸಿಕೊಡಲಾಗುವುದು. ರಫ್ತು ಮಾಡುವುದಕ್ಕೆ ಇರುವ ಅವಕಾಶಗಳನ್ನು ತಿಳಿಸಿಕೊಡಲಾಗುವುದು ಎಂದು ಜ್ಞಾನೇಶ್ ಮಾಹಿತಿ ನೀಡಿದರು.

ಭತ್ತದ ಹೊಸ ತಳಿ ಪರಿಚಯ

ಒಂದು ಎಕರೆಯಲ್ಲಿ ಕೃಷಿ ಬ್ರಹ್ಮಾಂಡ ಭತ್ತ ಮೊದಲಾದ ಹೊಸ ತಳಿಗಳ ಪರಿಚಯವನ್ನೂ ಮಾಡಲಾಗಿದೆ. ಕಬ್ಬಿನ ಜೊತೆ ವಿವಿಧ ಅಂತರ ಬೆಳೆ ಬೆಳೆಯುವ ಪ್ರಯೋಗವನ್ನೂ ಇಲ್ಲಿ ತೋರಿಸಲಾಗಿದೆ. ಇವೆಲ್ಲವನ್ನೂ ನವೋದ್ಯಮವಾಗಿ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಿಕೊಡಲಾಗುವುದು. ಜೆಎಸ್‌ಎಸ್ ಸ್ಟೆಪ್ ಮೂಲಕ ಅತ್ಯಾಧುನಿಕ ತಂತ್ರಜ್ಞಾನ ಬಳಕೆಯ ಬಗ್ಗೆ ಮಾರ್ಗದರ್ಶನವಿದೆ. 21 ದೇಸಿ ಹಸುಗಳ ತಳಿಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಜೊತೆಗೆ ಮೇವು ಬೆಳೆ ಸಲಾಡ್ ಬೆಳೆಗಳನನ್ನೂ ಹಾಕಲಾಗಿದೆ. ರೈತರ ಮಹಿಳಾ ವರ್ಷದ ಅಂಗವಾಗಿ ಆರೋಗ್ಯವಂತ ಮಹಿಳೆ ಘೋಷವಾಕ್ಯದಲ್ಲಿ ವಿವಿಧ ಸೊಪ್ಪುಗಳ ಬೆಳೆಯ ತಾಕುಗಳನ್ನು ಸಜ್ಜುಗೊಳಿಸಲಾಗಿದೆ. 20ಕ್ಕೂ ಹೆಚ್ಚು ತಳಿಗಳ ಪುಷ್ಪ ಪ್ರದರ್ಶನವನ್ನು ಇದೇ ಮೊದಲಿಗೆ (ಹತ್ತು ಗುಂಟೆಯಲ್ಲಿ ಪುಷ್ಪ ಕೃಷಿಯ ತಾಕುಗಳಿವೆ) ಸಿದ್ಧಪಡಿಸಲಾಗಿದೆ. ನೈಸರ್ಗಿಕ ಕೃಷಿ ಬಗ್ಗೆಯೂ ಪ್ರಾತ್ಯಕ್ಷಿಕೆ ಇದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.