
ಮೈಸೂರು: ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರದ ಮಾಸಿಕ ನಿಶ್ಚಿತ ಗೌರವಧನ ₹ 5 ಸಾವಿರದ ಜೊತೆಗೆ ಕೇಂದ್ರ ಸರ್ಕಾರದ ಭಾಗಶಃ ಪ್ರೋತ್ಸಾಹ ಧನಗಳನ್ನು ಸೇರಿಸಿ ಮಾಸಿಕ ₹ 10ಸಾವಿರ ಗೌರವಧನವನ್ನು ದೊರಕಿಸುವ ಭರವಸೆ ಇನ್ನೂ ಈಡೇರಿಲ್ಲ.
‘ಕಳೆದ ಜನವರಿಯಲ್ಲಿ ನಡೆದಿದ್ದ ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ ವೇಳೆ ಸಭೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಭರವಸೆ ನೀಡಿದ್ದರು. 11 ತಿಂಗಳಾದರೂ ಈ ಕುರಿತು ಸರ್ಕಾರ ಆದೇಶ ಹೊರಡಿಸಿಲ್ಲ’ ಎಂದು ಆಶಾ ಕಾರ್ಯಕರ್ತೆಯರ ಸಂಘ ಆರೋಪಿಸಿದೆ. ‘ಕೂಡಲೇ ಆದೇಶ ಹೊರಡಿಸಬೇಕು’ ಎಂದು ಆಗ್ರಹಿಸಿ ಬೆಳಗಾವಿ ಸುವರ್ಣ ಸೌಧದ ಮುಂದೆ ಡಿಸೆಂಬರ್ 10ರಂದು ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
17 ವರ್ಷಗಳಿಂದ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರ ಸಂಖ್ಯೆ ಈಗ 42 ಸಾವಿರಕ್ಕೂ ಹೆಚ್ಚಿದೆ.
‘ಕೇಂದ್ರ ಸರ್ಕಾರದ ಪ್ರೋತ್ಸಾಹಧನ ಮತ್ತು ರಾಜ್ಯ ಸರ್ಕಾರ ನೀಡುವ ಮಾಸಿಕ ನಿಶ್ಚಿತ ಗೌರವಧವನ್ನು ಒಟ್ಟಿಗೆ ಸೇರಿಸಿ ನಿಶ್ಚಿತ ರೂಪದಲ್ಲೇ ಕೊಡಿ’ ಎಂಬುದು ಅವರ ಪ್ರಮುಖ ಬೇಡಿಕೆ.
‘ಹಲವು ವರ್ಷಗಳಿಂದ ಈ ಬಗ್ಗೆ ಮನವಿಪತ್ರಗಳನ್ನು ಸಲ್ಲಿಸುತ್ತಿದ್ದರೂ ಸರ್ಕಾರಗಳು ಸ್ಪಂದಿಸಿಲ್ಲ’ ಎಂಬುದು ಅವರ ಆರೋಪ.
‘ಪ್ರೋತ್ಸಾಹಧನ ನೀಡುವುದಾಗಿ ನೇಮಿಸಿಕೊಂಡ ಕೇಂದ್ರ–ರಾಜ್ಯ ಸರ್ಕಾರಗಳು ತಾವಾಗಿಯೇ ಏನನ್ನೂ ಕೊಡಲಿಲ್ಲ. ಕಾರ್ಯಕರ್ತೆಯರು ಪ್ರತಿ ವರ್ಷವೂ ಸರ್ಕಾರಗಳೊಂದಿಗೆ ಸಂಘರ್ಷಕ್ಕೆ ಇಳಿದು ಇಲಾಖೆ ಮೇಲೆ ಒತ್ತಡ ಹೇರಿ ಪ್ರೋತ್ಸಾಹ ಧನ, ಗೌರವ ಧನಗಳೂ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಡೆದಿದ್ದಾರೆ. ಈಗಲೂ ಹೋರಾಟ ಅನಿವಾರ್ಯ’ ಎಂದು ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿಯ ಜಿಲ್ಲಾ ಗೌರವಾಧ್ಯಕ್ಷೆ ಸಂಧ್ಯಾ ಪಿ.ಎಸ್.ಅಸಮಾಧಾನ ವ್ಯಕ್ತಪಡಿಸಿದರು.
ಅಹೋರಾತ್ರಿ ಹೋರಾಟ: ‘ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಜನವರಿ 7ರಿಂದ ನಾಲ್ಕು ದಿನಗಳ ಕಾಲ ಕಾರ್ಯಕರ್ತೆಯರು ಅಹೋರಾತ್ರಿ ಹೋರಾಟ ನಡೆಸಿದ್ದರು. ನಾಲ್ಕನೇ ದಿನ ಆಶಾ ಸಂಘದ ಪದಾಧಿಕಾರಿಗಳ ಜೊತೆಯಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ₹ 15 ಸಾವಿರ ಗೌರವಧನ ಕೊಡಲು ಆಗದು ಎಂದಿದ್ದರು. ಆದರೆ, ರಾಜ್ಯ ಸರ್ಕಾರದ ಮಾಸಿಕ ನಿಶ್ಚಿತ ಗೌರವ ಧನ ₹ 5 ಸಾವಿರದ ಜೊತೆಗೆ ಕೇಂದ್ರ ಸರ್ಕಾರದ ಭಾಗಶಃ ಪ್ರೋತ್ಸಾಹಧನ ಸೇರಿಸಿ, ಅಗತ್ಯ ಬಿದ್ದರೆ ರಾಜ್ಯ ಸರ್ಕಾರದಿಂದ ಇನ್ನಷ್ಟು ಹಣ ನೀಡಿ ಮಾಸಿಕ ₹ 10 ಸಾವಿರ ಲಭಿಸುವಂತೆ ಮಾಡಲಾಗು ವುದು ಎಂದು ಭರವಸೆ ನೀಡಿದ್ದರು. ಆದರೆ ಅದು ಇನ್ನೂ ಈಡೇರಿಲ್ಲ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.
lಕೇಂದ್ರದ ಪ್ರೋತ್ಸಾಹ ಧನ, ರಾಜ್ಯ ಸರ್ಕಾರದ ಗೌರವ ಧನ ಸೇರಿ ಮಾಸಿಕ ₹ 15 ಸಾವಿರ ಗೌರವ ಧನ ಕೊಡಿ.
lರಾಜ್ಯ ಸರ್ಕಾರ ಮಾತು ಕೊಟ್ಟಂತೆ, ಏಪ್ರಿಲ್‌ನಿಂದೇ ಅನ್ವಯವಾಗುವಂತೆ ಮಾಸಿಕ ₹ 10 ಸಾವಿರ ಗೌರವಧನ ಕೊಡಬೇಕು.
lಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ಹೆಚ್ಚಿಸಿರುವಂತೆ ಆಶಾ ಕಾರ್ಯಕರ್ತೆಯರಿಗೂ ₹ 1ಸಾವಿರ ವನ್ನು ಏಪ್ರಿಲ್‌ನಿಂದಲೇ ಅನ್ವಯಿಸಿ ಆದೇಶ ಮಾಡಬೇಕು
lಕೇಂದ್ರ ಸರ್ಕಾರ ಹೆಚ್ಚಿಸಿರುವ ₹1.5 ಸಾವಿರ ಪ್ರೋತ್ಸಾಹ ಧನವನ್ನು ಕೂಡಲೇ ಬಿಡುಗಡೆ ಮಾಡಬೇಕು.
lಆಶಾ ಸುಗಮಕಾರರನ್ನು ಸೂಕ್ತ ವೇತನದೊಂದಿಗೆ ಮುಂದುವರೆಸಬೇಕು. ಕಳೆದ ವರ್ಷ ಹೆಚ್ಚಳವಾದ ಗೌರವಧನದ ಒಂದು ವರ್ಷದ ಬಾಕಿಯನ್ನೂ ಕೊಡಬೇಕು.
lನಿವೃತ್ತ ಆಶಾಗಳಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಇಡುಗಂಟು ನೀಡಬೇಕು.
ದೀರ್ಘ ಕಾಲದಿಂದ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆ ಯರಿಗೆ ಮಾಸಿಕ ₹ 10 ಸಾವಿರ ನೀಡುವುದು ಸರ್ಕಾರದ ಕನಿಷ್ಟ ಪರಿಹಾರ ಕ್ರಮ. ಈ ಕುರಿತು ಕೂಡಲೇ ಆದೇಶ ಮಾಡಬೇಕುಸಂಧ್ಯಾ ಪಿ.ಎಸ್., ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಮೈಸೂರು ಜಿಲ್ಲಾ ಸಮಿತಿಯ ಗೌರವಾಧ್ಯಕ್ಷೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.