ADVERTISEMENT

ಮೈಸೂರು ವಿವಿಯಲ್ಲಿ ವಿವಿಧ ಯೋಜನೆ, ಸೌಲಭ್ಯಗಳಿಗೆ ಸಚಿವ ಅಶ್ವತ್ಥನಾರಾಯಣ ಚಾಲನೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2021, 12:25 IST
Last Updated 20 ಆಗಸ್ಟ್ 2021, 12:25 IST
ಮೈಸೂರು ವಿಶ್ವವಿದ್ಯಾಲಯದಲ್ಲಿ ವಿವಿಧ ಸೌಲಭ್ಯಗಳಿಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಚಾಲನೆ.
ಮೈಸೂರು ವಿಶ್ವವಿದ್ಯಾಲಯದಲ್ಲಿ ವಿವಿಧ ಸೌಲಭ್ಯಗಳಿಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಚಾಲನೆ.   

ಮೈಸೂರು:ಮೈಸೂರು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆರಂಭಿಸಿರುವ ವಿವಿಧ ಸೌಲಭ್ಯಗಳಿಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಶುಕ್ರವಾರ ಚಾಲನೆ ನೀಡಿದರು.

ಕೇಂದ್ರ ರೂಸಾ ಯೋಜನೆಯಡಿ ರೂ‍‍ಪಿಸಿರುವ ಕೆರಿಯರ್‌ ಹಬ್‌, ಸಂಶೋಧನಾ ವಿದ್ಯಾರ್ಥಿಗಳ ನೂತನ ಹಾಸ್ಟೆಲ್‌, ಕಂಪ್ಯೂಟರ್‌ ಸೈನ್ಸ್‌ ವಿಭಾಗದ 2ನೇ ಮಹಡಿಯಲ್ಲಿ ಉತ್ಕೃಷ್ಟ ಕೇಂದ್ರ, ಹಾಸನ ಸ್ನಾತಕೋತ್ತರ ಕೇಂದ್ರದ ನೂತನ ಶೈಕ್ಷಣಿಕ ಭವನ, ಕನ್ನಡ ಅಧ್ಯಯನ ಸಂಸ್ಥೆಯ ಕಟ್ಟಡದ ಮೊದಲ ಮಹಡಿ, ಯುವರಾಜ ಕಾಲೇಜಿನ ರೂಸಾ ಅನುದಾನದಲ್ಲಿ ನೂತನ ಕಟ್ಟಡ, ನೂತನ ಘಟಕ ಕಾಲೇಜು (ಹೆತ್ತೂರು, ತೆರಕಣಾಂಬಿ, ಹಳ್ಳಿ ಮೈಸೂರು) ಮತ್ತು ಕಮ್ಯೂನಿಟಿ ರೇಡಿಯೊ ಸ್ಟೇಷನ್‌ ‘ರೆಡಿಯೊ ಮಾನಸ’ವನ್ನು ಉದ್ಘಾಟಿಸಿದರು.

ಸಂಸದ ಪ್ರತಾಪ ಸಿಂಹ, ಶಾಸಕ ಎಲ್. ನಾಗೇಂದ್ರ, ಕುಲಪತಿ ಪ್ರೊ.ಜಿ.ಹೇಮಂತಕುಮಾರ್‌, ಕುಲಸಚಿವ ಪ್ರೊ.ಆರ್‌.ಶಿವಪ್ಪ, ವಿ.ವಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಪಾಲ್ಗೊಂಡರು.

ADVERTISEMENT

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಕೆರಿಯರ್‌ ಹಬ್‌ನಿಂದ ಪ್ರತೀ ವರ್ಷ ಸುಮಾರು ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಲಭ್ಯವಾಗಲಿದೆ ಎಂದರು.

ಸದ್ಯಕ್ಕೆ ದೇಶದ ವಿವಿಧ ಕ್ಷೇತ್ರಗಳಿಗೆ ನುರಿತ, ನೈಪುಣ್ಯತೆಯುಳ್ಳ ಮಾನವ ಸಂಪನ್ಮೂಲದ ಅಗತ್ಯವಿದೆ. ಆ ದಿಕ್ಕಿನಲ್ಲಿ ಕೆರಿಯರ್‌ ಹಬ್‌ ಸ್ಥಾಪನೆ ದೃಢವಾದ ಹೆಜ್ಜೆ ಎಂದ ಅವರು, ಮುಂದಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನೆ, ಕಲಿಕೆ ಜತೆಗೆ ಆವಿಷ್ಕಾರಕ್ಕೂ ಹೆಚ್ಚು ಮಹತ್ವ ಇರುತ್ತದೆ ಎಂದು ತಿಳಿಸಿದರು.

ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಸತಿ ನಿಲಯವನ್ನು ಸ್ಥಾಪನೆ ಮಾಡಿರುವುದು ಅತ್ಯುತ್ತಮ ಕೆಲಸ. ಮುಂದಿನ ದಿನಗಳಲ್ಲಿ ಪ್ರತಿ ವಿಶ್ವ ವಿದ್ಯಾಲಯದಲ್ಲೂ ವಿಜ್ಞಾನದ ಜತೆಗೆ ಬೇರೆ ಬೇರೆ ಕ್ಷೇತ್ರಗಳ ಬಗ್ಗೆ ಅಧ್ಯಯನಕ್ಕೆ ಒತ್ತು ನೀಡಲಾಗುವುದು ಹೇಳಿದರು.

ಸಂಸದ ಪ್ರತಾಪ ಸಿಂಹ, ಶಾಸಕ ಎಲ್.‌ನಾಗೇಂದ್ರ, ವಿವಿ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್‌, ಕುಲ ಸಚಿವ ಪ್ರೊ.ಆರ್.‌ಶಿವಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.