ಮೈಸೂರು: ಇಲ್ಲಿನ ರಂಗಾಯಣವು ಜ.14ರಿಂದ 19ರವರೆಗೆ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ’ ಆಯೋಜಿಸಿದ್ದು, ವಿವಿಧ ಭಾಷೆಗಳ ನಾಟಕ ಪ್ರದರ್ಶನ ನಡೆಯಲಿದೆ.
‘ಬಿಡುಗಡೆ: ಸಾಮಾಜಿಕ ನ್ಯಾಯ– ಚಳವಳಿಗಳು ಮತ್ತು ರಂಗಭೂಮಿ’ ಎಂಬ ಪರಿಕಲ್ಪನೆಯಲ್ಲಿ ಉತ್ಸವ ರೂಪಿಸಲಾಗಿದ್ದು, ಚಲನಚಿತ್ರ ನಟ, ರಂಗಕರ್ಮಿ ಅತುಲ್ ಕುಲಕರ್ಣಿ ಜ.14ರಂದು ಸಂಜೆ 5.30ಕ್ಕೆ ವನರಂಗದಲ್ಲಿ ಉದ್ಘಾಟಿಸುವರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಪಾಲ್ಗೊಳ್ಳುವರು’ ಎಂದು ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘6 ರಾಜ್ಯಗಳ 7 ಬಹುಭಾಷೆ ನಾಟಕ, 13 ಕನ್ನಡ, 2 ಇಂಗ್ಲಿಷ್ ಭಾಷೆಯದ್ದು ಸೇರಿದಂತೆ ಒಟ್ಟು 22 ನಾಟಕಗಳು ಭೂಮಿಗೀತ, ವನರಂಗ, ಕಿರುರಂಗಮಂದಿರ ಹಾಗೂ ಕಲಾಮಂದಿರದಲ್ಲಿ ಪ್ರದರ್ಶನಗೊಳ್ಳಲಿವೆ. ಇದೇ ಮೊದಲ ಬಾರಿ ‘ಮಕ್ಕಳ ಬಹುರೂಪಿ’ ಆಯೋಜಿಸಲಾಗಿದ್ದು, ಕಲಾಮಂದಿರದಲ್ಲಿ 15ರಂದು ಸಂಜೆ 6ಕ್ಕೆ ಚಲನಚಿತ್ರ ನಟ ಪ್ರಕಾಶ್ ರಾಜ್ ಉದ್ಘಾಟಿಸುವರು’ ಎಂದು ತಿಳಿಸಿದರು.
‘13ರಿಂದ ಕಿಂದರಿಜೋಗಿ ಆವರಣದಲ್ಲಿ ಜಾನಪದೋತ್ಸವ, 14ರಿಂದ ಶ್ರೀರಂಗದಲ್ಲಿ ಚಲನಚಿತ್ರೋತ್ಸವ, 18ರಿಂದ ರಾಷ್ಟ್ರೀಯ ವಿಚಾರ ಸಂಕಿರಣ ಆರಂಭವಾಗಲಿದೆ. ನಾಟಕದ ಟಿಕೆಟ್ ಬೆಲೆ ₹100 ಆಗಿದ್ದು, ‘ಮಕ್ಕಳ ಬಹುರೂಪಿ’ಯಲ್ಲಿ ಮಕ್ಕಳಿಗೆ ಟಿಕೆಟ್ ₹50 ಇರಲಿದೆ’ ಎಂದರು.
ಕನ್ನಡ ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.