ADVERTISEMENT

Video | ಮಳೆಯಲ್ಲೂ ‘ಭಾರತ್ ಜೋಡೊ’, ಯಾವ ಕಾರಣಕ್ಕೂ ಯಾತ್ರೆ ನಿಲ್ಲದು: ರಾಹುಲ್‌ 

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 15:35 IST
Last Updated 2 ಅಕ್ಟೋಬರ್ 2022, 15:35 IST
ಮಳೆಯಲ್ಲೇ ಭಾಷಣ ಮಾಡಿದ ರಾಹುಲ್‌ ಗಾಂಧಿ
ಮಳೆಯಲ್ಲೇ ಭಾಷಣ ಮಾಡಿದ ರಾಹುಲ್‌ ಗಾಂಧಿ   

ಬಂಡಿಪಾಳ್ಯ (ಮೈಸೂರು ಜಿಲ್ಲೆ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ‘ಭಾರತ್ ಜೋಡೊ’ ಪಾದಯಾತ್ರೆಯು ಭಾನುವಾರ ಇಲ್ಲಿ ಜೋರು ಮಳೆಯಲ್ಲೂ ನಡೆಯಿತು.

ನಂಜನಗೂಡು ತಾಲ್ಲೂಕು ಕಡಕೊಳದ ಕಾಳಿಬೀರಮ್ಮ ದೇವಸ್ಥಾನದ ಬಳಿಯಿಂದ 4.46ಕ್ಕೆ ಹೊರಟ ಪಾದಯಾತ್ರೆಯಲ್ಲಿ 25ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ರಾಹುಲ್ ಜೊತೆ ನಾಯಕರೂ ಹೆಜ್ಜೆ ಹಾಕಿದರು. ಜಾನಪದ ಕಲಾ ತಂಡಗಳು ಮೆರುಗು ನೀಡಿದವು. ಸಂಜೆ 6.40ರ ಸುಮಾರಿಗೆ ಬಂಡೀಪಾಳ್ಯ ಸಮೀಪಿಸುತ್ತಿದ್ದಂತೆಯೇ ಜೋರು ಮಳೆ ಆರಂಭವಾಯಿತು.

ಎಪಿಎಂಸಿ ಸಮೀಪದಲ್ಲಿ ನಡೆದ ‘ಕಾರ್ನರ್ ಮೀಟಿಂಗ್‌’ನಲ್ಲಿ ಮಳೆಯಲ್ಲೇ ಭಾಷಣ ಮಾಡಿದ ರಾಹುಲ್‌, ‘ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನ ವಿರೋಧಿ ಧೋರಣೆ ವಿರುದ್ಧ ಧ್ವನಿ ಎತ್ತುತ್ತಲೇ ಇರುತ್ತೇನೆ. ಯಾವ ಕಾರಣಕ್ಕೂ ಯಾತ್ರೆ ನಿಲ್ಲುವುದಿಲ್ಲ. ಈಗ ಮಳೆ ಬರುತ್ತಿದೆ, ಹಾಗೆಂದು ಪಾದಯಾತ್ರೆ ನಿಲ್ಲಿಸಿದೆವೆಯೇ’ ಎಂದು ಪ್ರಶ್ನಿಸಿದರು.

ADVERTISEMENT

‘ಮಳೆ, ಗಾಳಿ, ಬಿಸಿಲು ಲೆಕ್ಕಿಸದೆ ಯಾತ್ರೆ ನಡೆಯಲಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನದಿಗಳು ಹರಿಯುವಂತೆಯೇ ಮುಂದುವರಿಯುತ್ತದೆ. ಇಲ್ಲಿ, ಯಾವುದೇ ದ್ವೇಷ–ಅಸೂಯೆ ಕಾಣುವುದಿಲ್ಲ. ಕೇವಲ ಪ್ರೀತಿ–ಸಹನೆಯ ಸಂದೇಶವನ್ನಷ್ಟೆ ನೀಡಲಾಗುತ್ತಿದೆ. ಇದೇ ನಮ್ಮ ದೇಶದ ಸಂಸ್ಕೃತಿಯಾಗಿದೆ’ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ ಅವರು, ‘ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗಿದೆ. ಶೇ.40ರಷ್ಟು ಕಮಿಷನ್ ಕೊಡಲಾಗದೆ ಆ ಪಕ್ಷದ ಮುಖಂಡರೊಬ್ಬರು ಆತ್ಮಹತ್ಯೆ ಮಾಡಿಕೊಂಡರು. ಇದು ಭ್ರಷ್ಟಾಚಾರಕ್ಕೆ ಉದಾಹರಣೆಯಾಗಿದೆ’ ಎಂದು ಟೀಕಿಸಿದರು.

‘ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ದ್ವೇಷ ಹರಡಿಸುತ್ತಿದ್ದಾರೆ’ ಎಂದು ದೂರಿದ ಅವರು, ‘ಒಂದೆಡೆ ನಿರುದ್ಯೋಗ ಹೆಚ್ಚುತ್ತಿದೆ. ಇನ್ನೊಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಬಡ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅವರ ಧ್ವನಿಯಾಗಿ ಯಾತ್ರೆ ನಡೆಸುತ್ತಿದ್ದೇವೆ. ಭಾರತವನ್ನು ಜೋಡಿಸುವ ಕೆಲಸವನ್ನು ಮಾಡಿಯೇ ತೀರುತ್ತೇವೆ’ ಎಂದು ಹೇಳಿದರು.

ಬಳಿಕ ದಿನದ ಯಾತ್ರೆಯು ಬಂಡಿಪಾಳ್ಯದ ಬಳಿ ಅಂತ್ಯಗೊಂಡಿತು. ಅ.3(ಸೋಮವಾರ) ಬೆಳಿಗ್ಗೆ ಇಲ್ಲಿನ ಜಯಚಾಮರಾಜೇಂದ್ರ ವೃತ್ತದಿಂದ ಮೈಸೂರು–ಬೆಂಗಳೂರು ಹೆದ್ದಾರಿಯ ಕಡೆಗೆ ಸಂಚರಿಸಲಿದೆ.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.