ADVERTISEMENT

ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ | ಭಯೋತ್ಪಾದಕರ ಕೃತ್ಯ: ಈಶ್ವರಪ್ಪ ಆರೋಪ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2024, 7:09 IST
Last Updated 2 ಮಾರ್ಚ್ 2024, 7:09 IST
 ಈಶ್ವರಪ್ಪ
ಈಶ್ವರಪ್ಪ   

ಮೈಸೂರು: ‘ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ ನಡೆದಿರುವುದು ಭಯೋತ್ಪಾದಕರ ಕೃತ್ಯ’ ಎಂದು ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ದೂರಿದರು.

ಇಲ್ಲಿ ಪತ್ರಕರ್ತರೊಂದಿಗೆ ಶನಿವಾರ ಮಾತನಾಡಿದ ಅವರು, ‘ಅದು ಭಯೋತ್ಪಾದಕರ ಕೃತ್ಯವಲ್ಲದೇ ಮತ್ತೇನು? ಆ ಹೋಟೆಲ್‌ನಲ್ಲಿ ಯಾರೋ ಮಕ್ಕಳು ಪಟಾಕಿ ಸಿಡಿಸಿದ್ದಾರೆಯೇ ಅಥವಾ ಬಲೂನ್‌ನಲ್ಲಿ ಆಡಿದ್ದಾರೆಯೇ? ಅಲ್ಲಿ ಆಗಿರುವುದು ಬಾಂಬ್ ಸ್ಫೋಟ’ ಎಂದರು.

‘ಇದು ಗುಪ್ತಚರ ಇಲಾಖೆಯ ವೈಫಲ್ಯ. ಈ ವೈಫಲ್ಯವನ್ನು ಮುಖ್ಯಮಂತ್ರಿ ಮೊದಲು ಒಪ್ಪಿಕೊಳ್ಳಬೇಕು. ಭಯೋತ್ಪಾದಕರನ್ನು ಮೊದಲು ಪತ್ತೆ ಹಚ್ಚಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಬಾಯಿಗೆ ಬೀಗ ಹಾಕಬೇಕು. ಅವರು ಬಾಯಿಗೆ ಬಂದಂತೆ ಹೇಳಿಕೆ‌ ಕೊಡುತ್ತಿದ್ದಾರೆ. ಅವರು ಭಯೋತ್ಪಾದಕರ ಪರ ಎಂಬುದು ನಮಗೆ ಗೊತ್ತಾಗಿದೆ. ಅವರ ಮೇಲೆ ಯಾವ ನಂಬಿಕೆಯೂ ಉಳಿದಿಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ವಿಧಾನಸೌಧದಲ್ಲಿ ಪಾಕಿಸ್ತಾನ್‌ ಜಿಂದಾಬಾದ್ ಘೋಷಣೆ ಪ್ರಕರಣದ ಎಫ್ಎಸ್ಎಲ್ ವರದಿಯನ್ನು ಸರ್ಕಾರ ಬಹಿರಂಗಪಡಿಸಬೇಕು. ತಡ ಮಾಡಿದಷ್ಟೂ ವರದಿ ತಿರುಚುತ್ತಿದ್ದಾರೆ ಎಂಬ ಅನುಮಾನ ಹೆಚ್ಚಾಗುತ್ತದೆ. ಅಂತಹ ಘಟನೆ ನಡೆದೇ ಇಲ್ಲ ಎಂದು ಕೆಲ ಸಚಿವರು ಈಗಾಗಲೇ ಹೇಳಿಕೆ ನೀಡಿದ್ದಾರೆ. ಹೀಗಾಗಿ ಆ ವರದಿಗೇನು ಬೆಲೆ?’ ಎಂದು ಕೇಳಿದರು.

‘ನಮ್ಮ ಪ್ರಕಾರ ಈಗಾಗಲೇ ಎಫ್ಎಸ್ಎಲ್ ವರದಿ ಬಂದಿದೆ. ಸರ್ಕಾರ ಅದನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿದೆ’ ಎಂದು ಆರೋಪಿಸಿದರು.

‘ಜನರು ಆ ವರದಿ ಬಿಡುಗಡೆಗೆ ಕಾಯುತ್ತಿದ್ದಾರೆ. ನೀವು ಮುಸ್ಲಿಮರ ಪರವಾಗಿಯೇ ಇರಿ. ಆದರೆ, ಭಯೋತ್ಪಾದಕ ಚಟುವಟಿಕೆ ನಡೆಸುವವರು ಹಾಗೂ ದೇಶದ್ರೋಹಿಗಳನ್ನು ರಕ್ಷಿಸಬೇಡಿ’ ಎಂದು ಮುಂಖ್ಯಮಂತ್ರಿಯನ್ನು ಕೋರಿದರು.

‘ಮುಖ್ಯಮಂತ್ರಿಗೆ ತಾಕತ್ತಿದ್ದರೆ, ಜಾತಿ ಗಣತಿ ವರದಿಯನ್ನು ಸಚಿವ ಸಂಪುಟದಲ್ಲಿ ಇಡಲಿ. ವಿಧಾನಸೌಧದಲ್ಲಿ ಚರ್ಚೆಗೆ ಮಂಡಿಸಲಿ. ಕಾಂಗ್ರೆಸ್‌ನವರೇ ಪರಸ್ಪರ ಹೊಡೆದಾಡಿಕೊಳ್ಳದಿದ್ದರೆ ನೋಡಿ’ ಎಂದು ಟೀಕಿಸಿದರು.

‘ಸಿದ್ದರಾಮಯ್ಯ ಜಾತಿ– ಜಾತಿಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ‌. ಹಿಂದುಳಿದ ವರ್ಗಗಳ ಚಾಂಪಿಯನ್ ಎನಿಸಿಕೊಳ್ಳಲು ಹಿಂದೂ ಸಮಾಜವನ್ನು ಜಾತಿ ಹೆಸರಿನಲ್ಲಿ ಒಡೆಯುತ್ತಿದ್ದಾರೆ’ ಎಂದು ದೂರಿದರು. ‘ಅವರು ಮುಸ್ಲಿಮರ ಪರವಿರಲಿ. ಬಿಜೆಪಿ ಹಿಂದೂಗಳ ಪರ ಇರುತ್ತದೆ’ ಎಂದರು.

ಆಫರ್ ಮಾಡಿದವರ‍್ಯಾರು ತಿಳಿಸಲಿ:

‘ಕಾಂಗ್ರೆಸ್‌ ಶಾಸಕರಿಗೆ ಬಿಜೆಪಿಯವರು ₹ 50 ಕೋಟಿ ಆಫರ್‌ ಮಾಡುತ್ತಿದ್ದಾರೆ’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ‘₹ 50 ಕೋಟಿ ಆಫರ್ ಕೊಟ್ಟಿದ್ದು ಯಾರೆಂಬುದನ್ನು ಮೊದಲು ಹೇಳಲಿ. ಹಾಗೆ ಮಾಡಿದವರನ್ನು ಜೈಲಿಗೆ ಕಳುಹಿಸಲಿ. ಇಲ್ಲದಿದ್ದರೆ ನಾನು ರಾಜಕೀಯ ಕಾರಣದಿಂದಾಗಿ ಸುಳ್ಳು ಹೇಳಿದ್ದೇನೆ ಎಂದು ಜನರ ಕ್ಷಮೆ ಕೇಳಲಿ’ ಎಂದರು.

‘ಮುಖ್ಯಮಂತ್ರಿಯಿಂದ ಅಂತಹ ಮಾತು ಬರಬಾರದು. ಹೇಳಿದ ಮೇಲೆ ಸಾಕ್ಷಿ ಕೊಡಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯಸಭಾ ಚುನಾವಣೆಯಲ್ಲಿ ಮತ ಹಾಕಿಸಿಕೊಳ್ಳಲು ಶಾಸಕ ಎಸ್.ಟಿ ಸೋಮಶೇಖರ್ ಅವರಿಗೆ ಎಷ್ಟು ನೂರು ಕೋಟಿ ಕೊಟ್ಟಿರಿ? ಶಿವರಾಂ ಹೆಬ್ಬಾರ್ ಮತ ಚಲಾಯಿಸದಂತೆ ತಡೆಯಲು ಎಷ್ಟು ಹಣ ಕೊಟ್ಟಿದ್ದೀರಿ ಎನ್ನುವುದನ್ನು ತಿಳಿಸಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲೆಸೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.