
ಹುಣಸೂರು: ರಾಜ್ಯದಲ್ಲಿ ಬೋವಿ ಸಮುದಾಯದ ಯುವಕರಿಗೆ ಕೌಶಲಾಧಾರಿತ ತರಬೇತಿ ನೀಡಿ ಸ್ವ–ಉದ್ಯೋಗ ಹೊಂದಿ ಸಾಮಾಜಿಕ ಮತ್ತು ಆರ್ಥಿಕವಾಗಿ ಸ್ವಾವಲಂಬಿಯಾಗಿಸುವ ಗುರಿ ಬೋವಿ ಅಭಿವೃದ್ಧಿ ನಿಗಮ ಹೊಂದಿದೆ ಎಂದು ಅಧ್ಯಕ್ಷ ಎಂ. ರಾಮಪ್ಪ ಹೇಳಿದರು.
ತಾಲ್ಲೂಕಿನ ವಿನೋಬ ಕಾಲೊನಿಯಲ್ಲಿ ಸಮುದಾಯದವರು ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ರಾಜ್ಯದ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಬೋವಿ ಸಮಾಜದ ಅಭಿವೃದ್ಧಿ ನಿಗಮದ ಕಚೇರಿ ತೆರೆದು, ಯುವಕರಿಗೆ ಕೌಶಲ ತರಬೇತಿ ನೀಡಿ, ಉದ್ಯೋಗ ಸೃಷ್ಟಿಸುವ ಯೋಜನೆ ಇದೆ. ಸಮುದಾಯದ ಸಮಸ್ಯೆ ಪಟ್ಟಿ ಸಿದ್ಧಮಾಡಿಕೊಂಡಿದ್ದು, ಮುಖ್ಯಮಂತ್ರಿ ಗಮನಕ್ಕೆ ತಂದು ಸಮಾಜದ ಅಭಿವೃದ್ದಿಗೆ ಒತ್ತು ನೀಡಲಾಗುವುದು ಎಂದರು.
ಸಮುದಾಯದ ಮಹಿಳೆಯರಲ್ಲಿ ಆರ್ಥಿಕ ಶಕ್ತಿ ವೃದ್ಧಿಗೆ ಮಹಿಳಾ ಸ್ವಸಹಾಯ ಸಂಘ ಸ್ಥಾಪಿಸಿ ಆರ್ಥಿಕ ಚಟುವಟಿಕೆಗೆ ತಲಾ ₹5 ಲಕ್ಷ ಅನುದಾನ ನೀಡಲಾಗುವುದು. ಟುಂಬದ ಆರ್ಥಿಕ ಶಕ್ತಿ ವೃದ್ಧಿಗೆ ಹೈನುಗಾರಿಕೆ, ಕುಲಕಸುಬು ವೃದ್ಧಿಗೆ ಯಂತ್ರೋಪಕರಣ, ಗೂಡ್ಸ್ ಆಟೋ, ಕೃಷಿ ಯಂತ್ರೋಪಕರಣ ನೀಡಲಾಗುತ್ತದೆ ಎಂದರು.
ಬೋವಿ ನಿಗಮದ ಮಾಜಿ ಅಧ್ಯಕ್ಷ ಸೀತಾರಾಮು, ತಾಲ್ಲೂಕು ಕುರುಬ ಸಮುದಾಯ ಅಧ್ಯಕ್ಷ ಡಿ.ಕೆ.ಕುನ್ನೇಗೌಡ, ಕುಪ್ಪುಸ್ವಾಮಿ, ಗಣೇಶ್, ಸುಧಾಕರ್, ಪ್ರಮುಖರಾದ ರಾಮಯ್ಯ, ಚಿನ್ನವೀರಯ್ಯ, ಮಾತನಾಡಿದರು. ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ರವಿ ಪ್ರಸನ್ನ, ಪ್ರೇಮಕುಮಾರ್, ಬೋವಿ ಸಮಾಜದ ಮುಖಂಡ ವಿಜಯಕುಮಾರ್, ಈರಯ್ಯ, ಉಮಾಶಂಕರ್, ನಾಗರಾಜ್, ಮಹದೇವ್ ಭಾಗವಹಿಸಿದ್ದರು.
‘ಅನುದಾನದಿಂದ ಅಭಿವೃದ್ಧಿ’
ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಮಾತನಾಡಿ ದಿ.ದೇವರಾಜ ಅರಸು ಬೋವಿ ಸಮುದಾಯಕ್ಕೆ ತಾಲ್ಲೂಕಿನಲ್ಲಿ ಆಶ್ರಯ ನೀಡಿ ಕಾಲೊನಿ ನಿರ್ಮಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಬೋವಿ ಅಭಿವೃದ್ಧಿ ನಿಗಮ ಸ್ಥಾಪಿಸಿ ಅನುದಾನ ನೀಡಿದ್ದಾರೆ ಎಂದರು. ತಾಲ್ಲೂಕಿನ ವಿನೋಬ ಕಾಲೋನಿಯಲ್ಲಿ ಬೋವಿ ಸಮುದಾಯ ಭವನ ನಿರ್ಮಾಣಕ್ಕೆ ₹ 15 ಲಕ್ಷ ಅನುದಾನ ಹೊನ್ನಿಕುಪ್ಪೆ ಮತ್ತು ಮೂಕನಹಳ್ಳಿ ಗ್ರಾಮದಲ್ಲಿ ಭವನ ನಿರ್ಮಾಣಕ್ಕೆ ತಲಾ ₹ 10 ಲಕ್ಷ ಬಿಡುಗಡೆ ಮಾಡಿಸಲಾಗಿದೆ. ‘ನನ್ನ ಅವಧಿಯಲ್ಲಿ ಬೋವಿ ಸಮುದಾಯದ ಮುಖಂಡ ಶಿವರಾಜ ತಂಗಡಿ ಸಣ್ಣ ನೀರಾವರಿ ಸಚಿವರಾಗಿದ್ದಾಗ ಕ್ಷೇತ್ರಕ್ಕೆ 7 ಏತ ನೀರಾವರಿ ನಿರ್ಮಿಸಿದ್ದು ಹತ್ತಾರು ಕೆರೆಗಳಿಗೆ ನೀರು ತುಂಬಿಸಲು ಸಹಕಾರಿ ಆಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.