
ಮೈಸೂರು: ಚಾಮುಂಡಿಬೆಟ್ಟದಲ್ಲಿ ಭಕ್ತರು, ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳ ವಿರೋಧದ ನಡುವೆಯೇ ಮಂಗಳವಾರವೂ ‘ಪ್ರಸಾದ್ ಯೋಜನೆ’ಯಡಿ ಅಭಿವೃದ್ಧಿ ಕಾಮಗಾರಿ ಮುಂದುವರಿದಿದ್ದು, ಸಂಘಟನೆಗಳು ಹೋರಾಟ ರೂಪಿಸುತ್ತಿವೆ.
ಪೊಲೀಸ್ ಭದ್ರತೆಯಲ್ಲಿ ಸೋಮವಾರ ಕಾಮಗಾರಿ ಆರಂಭ
ಗೊಂಡಾಗ ಶ್ರೀರಂಗಪಟ್ಟಣ ಹನುಮ ಮಾಲಾಧಾರಿಗಳ ಸಮಿತಿ ಹಾಗೂ ಗ್ರಾಮಸ್ಥರು ಪ್ರತಿಭಟಿಸಿದ್ದರು. ಆದರೆ ಕೆಲಸ ಮುಂದುವರಿದಿದ್ದು, ಹೋರಾಟಕ್ಕೆ ಪರಿಸರ ಪ್ರೇಮಿಗಳೂ ಕೈಜೋಡಿಸಿದ್ದಾರೆ.
‘ಪರಿಸರಕ್ಕಾಗಿ ನಾವು’, ‘ಟೀಂ ಮೈಸೂರು’, ಮೈಸೂರು ಗ್ರಾಹಕರ ಪರಿಷತ್ತು, ಜೈ ಕರ್ನಾಟಕ ಪರಿಷತ್ತು, ಪಿಯುಸಿಎಲ್, ಕ್ಲೀನ್ ಮೈಸೂರು, ಕರ್ನಾಟಕ ಯುವಜನ ನೆಟ್ವರ್ಕ್, ಬೆಳವಳ ಫೌಂಡೇಷನ್, ಗುಬ್ಬಿವಾಣಿ ಟ್ರಸ್ಟ್ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ, ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕರನ್ನು ಭೇಟಿ ಮಾಡಿ ‘ಪ್ರಸಾದ್’ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಮನವಿ ಮಾಡಿದರು.
‘ಚಾಮುಂಡಿ ಬೆಟ್ಟ ಸಂರಕ್ಷಿತ ಅರಣ್ಯ ಪ್ರದೇಶ. ಇಲ್ಲಿ ಕಟ್ಟಡ ನಿರ್ಮಿಸುವ ಮೊದಲು, ಅವು ಪರಿಸರಕ್ಕೆ ಉಂಟುಮಾಡುವ ಸಮಸ್ಯೆಗಳ ಬಗ್ಗೆ ಮೌಲ್ಯಮಾಪನ ಮಾಡಿಸಬೇಕು. ಬೆಟ್ಟದ ಧಾರಣಾ ಸಾಮರ್ಥ್ಯ ಮೀರಿ ಮನೆಗಳು ನಿರ್ಮಾಣವಾದರೆ ಕುಸಿಯುವ ಸಾಧ್ಯತೆಯಿದ್ದು, ಅನಧಿಕೃತ ಮನೆಗಳ ತೆರವುಗೊಳಿಸಬೇಕು. ಸಾರ್ವಜನಿಕರ ಗಮನಕ್ಕೆ ತಾರದೇ ಏಕಪಕ್ಷೀಯವಾಗಿ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದು ಖಂಡನೀಯ’ ಎಂದು ಆಕ್ರೋಶ
ವ್ಯಕ್ತಪಡಿಸಿದರು.
ಮುಖಂಡರಾದ ಎ.ಟಿ.ರಾಮಸ್ವಾಮಿ, ಪರಶುರಾಮೇಗೌಡ, ಆಂಜನೇಯ ರೆಡ್ಡಿ, ಎ.ಎಸ್.ಕವಿತಾ, ಪಾರ್ವತಿ ಶ್ರೀರಾಮ್, ಲೀಲಾ ವೆಂಕಟೇಶ್, ಭಾಮಿ ಶೆಣೈ, ಸುಧೀರ್ ಒಂಬತ್ಕೆರೆ, ಗೋಕುಲ್ ಗೋವರ್ಧನ್, ಎಸ್.ನಾರಾಯಣ್, ರವಿಶಂಕರ್ ಬಳೆ, ಎಸ್.ಶೋಭನಾ, ಕಮಲ್ ಗೋಪಿನಾಥ್, ಲೀಲಾ ಶಿವಕುಮಾರ್, ಕೆ.ಸರಸ್ವತಿ, ಮಾಲವಿಕ ಗುಬ್ಬಿವಾಣಿ, ಡಾ.ರಾಮಕೃಷ್ಣಪ್ಪ, ಮಂಜುಳಾ ರಾಮಕೃಷ್ಣಪ್ಪ ಇದ್ದರು.
ಕಾಂಗ್ರೆಸ್ ನಿಯೋಗವು ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ ಅವರನ್ನು ಭೇಟಿ ಮಾಡಿದಾಗ ಮಾಜಿ ಮೇಯರ್ ಬಿ.ಎಲ್.ಭೈರಪ್ಪ ಬೆಟ್ಟದ ಕಾಮಗಾರಿ ನಿಲ್ಲಿಸುವಂತೆ ಆಗ್ರಹಿಸಿದರು.
‘ಬೆಟ್ಟದಲ್ಲಿ ಪಾರ್ಕಿಂಗ್ ಸಮಸ್ಯೆಯಿದೆ. ಬೆಟ್ಟದ ಪಾದದಲ್ಲಿ ಒತ್ತುವರಿ ತೆರವುಗೊಳಿಸಿ ಅಭಿವೃದ್ಧಿ ಕಾರ್ಯ ಅಲ್ಲಿ ನಡೆಸಿ’ ಎಂದು ಸಲಹೆ ನೀಡಿದರು.
ಚಾಮುಂಡಿ ಚಲೋ: ವಿವಿಧ ಸಂಘಟನೆಗಳ ಮುಖಂಡರು ಬುಧವಾರ ಬೆಳಿಗ್ಗೆ 11ಕ್ಕೆ ಚಾಮುಂಡಿ ಚಲೋಗೆ ಕರೆ ನೀಡಿದ್ದಾರೆ. ‘ಬೆಟ್ಟದಲ್ಲಿ ಜನರ ಒತ್ತಡ ಹೆಚ್ಚುತ್ತಿದೆ. ವೇದಿಕೆ ನಿರ್ಮಾಣದಿಂದ ಮತ್ತಷ್ಟು ಸಮಸ್ಯೆಯಾಗಲಿದೆ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಾಮುಂಡಿ ಬೆಟ್ಟ ಸಂರಕ್ಷಿತ ಅರಣ್ಯ ಪ್ರದೇಶ ಕಾಮಗಾರಿಯಿಂದಾಗುವ ಹಾನಿಯ ಬಗ್ಗೆ ಚಿಂತನೆ ಇರಲಿ ಬೆಟ್ಟದ ಧಾರಣಾ ಸಾಮರ್ಥ್ಯ ಮೀರಿ ಮನೆಗಳ ನಿರ್ಮಾಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.