ಮೈಸೂರು: ಚಾಮುಂಡಿ ಬೆಟ್ಟಕ್ಕೆ ಬರುವ ಪ್ರವಾಸಿಗರು ಹಾಗೂ ಭಕ್ತರನ್ನು ಮತ್ತೊಂದು ತಾಣ ಕೈಬೀಸಿ ಕರೆಯುತ್ತಿದೆ. ಅರಣ್ಯ ಇಲಾಖೆಯ ಮಾಹಿತಿ ನೀಡಲು ‘ಚಾಮುಂಡಿ ವನ’ ಹಾಗೂ ಪರಿಸರ ಮಾಹಿತಿ ಕೇಂದ್ರವನ್ನು ಆರಂಭಿಸಿದ್ದು, ಪ್ರೇಕ್ಷಣೀಯ ಸ್ಥಳವಾಗಲಿದೆ.
ವನ್ಯಜೀವಿ ಹಾಗೂ ಇಲಾಖೆಯ ಕಾರ್ಯವೈಖರಿ ಕುರಿತು ಸಾರ್ವಜನಿಕರಿಗೆ ಮಾಹಿತಿಯನ್ನು ಕೇಂದ್ರದಲ್ಲಿ ಪ್ರದರ್ಶಿಸಲಾಗಿದೆ. ಪ್ರವಾಸಕ್ಕೆ ಬರುವ ವಿದ್ಯಾರ್ಥಿಗಳನ್ನು ಗಮನದಲ್ಲಿ ಇಟ್ಟುಕೊಂಡು ವಿವಿಧ ಮಾಹಿತಿ ನೀಡಿದ್ದು, ವಾರದೊಳಗಾಗಿ ಸಾರ್ವಜನಿಕ ವೀಕ್ಷಣೆಗೆ ಕೇಂದ್ರವು ತೆರೆದುಕೊಳ್ಳಲಿದೆ.
ಕೇಂದ್ರದ ಸುತ್ತಲೂ ‘ಪವಿತ್ರ ವನ’ ಶೀರ್ಷಿಕೆಯಲ್ಲಿ ಅಶ್ವತ್ಥ, ಆಲ, ಬೇವು, ಬನ್ನಿ, ಬಿಲ್ವ, ಅಶೋಕ, ಕದಂಬ, ಮಾವು, ರುದ್ರಾಕ್ಷಿ, ಚಂದನನ, ಅರ್ಜುನ, ತೆಂಗು ಮುಂತಾದ ಹದಿನೈದು ಬಗೆಯ ಗಿಡಗಳನ್ನು ನೆಡಲಾಗಿದೆ. ‘ರಾಶಿ ವನ’ ಹಾಗೂ ‘ನಕ್ಷತ್ರ ವನ’ ಪರಿಕಲ್ಪನೆಯಲ್ಲಿ ಮತ್ತಷ್ಟು ಔಷಧೀಯ ಸಸಿಗಳನ್ನು ನೆಡಲು ಇಲಾಖೆ ಯೋಜನೆ ರೂಪಿಸಿದೆ.
ಪರಿಸರ ಮಾಹಿತಿ ಕೇಂದ್ರಕ್ಕೆ ಪ್ರವೇಶಿಸಿದ ಕೂಡಲೇ ಕಾಣಿಸುವ ಚಾಮುಂಡಿ ಬೆಟ್ಟದ ಪ್ರತಿಕೃತಿಯು ಬೆಟ್ಟದ ಸ್ಪಷ್ಟ ಚಿತ್ರಣ ನೀಡುತ್ತದೆ. ಆನೆ, ಹುಲಿ, ಚಿರತೆಯ ಪ್ರತಿಕೃತಿ ಇದ್ದು, ಅವುಗಳ ಮುಂಭಾಗ ಮಾಹಿತಿ ಪ್ರಕಟಿಸಲಾಗಿದೆ. ಚಿರತೆ, ಚೀತಾ ಮತ್ತು ಜಾಗ್ವಾರ್‌ಗಳಲ್ಲಿನ ಹೋಲಿಕೆಗಳ ಬಗ್ಗೆ ಚಿತ್ರ ಸಹಿತ ವಿವರಿಸಿದ್ದಾರೆ. ಆನೆ ಕಾರ್ಯಾಚರಣೆ ಯಾವ ರೀತಿ ನಡೆಯುತ್ತದೆ ಎಂಬುದರ ಮಾಹಿತಿಯೂ ಇಲ್ಲಿ ಲಭ್ಯ.
ಶ್ರೀಗಂಧದ ಮರದ ಭಾಗಗಳನ್ನು ಪ್ರದರ್ಶಿಸಿದ್ದು, ಅದರ ಗುಣಲಕ್ಷಣವನ್ನೂ ತಿಳಿಸುವ ಫಲಕ ಅಳವಡಿಸಲಾಗಿದೆ. ಗೋಡೆಯುದ್ದಕ್ಕೂ ವನ್ಯಜೀವಿಗಳಲ್ಲಿನ ವೈವಿಧ್ಯ ಹಾಗೂ ಈ ಭಾಗದಲ್ಲಿ ಕಂಡುಬರುವ ಅಪರೂಪದ ಪ್ರಾಣಿಗಳ ಬಗ್ಗೆ ಮಾಹಿತಿ ಫಲಕ ಅಳವಡಿಸಿದ್ದಾರೆ. ವಿವಿಧ ಪ್ರಭೇದದ ಹಾವು, ಮುಂಗುಸಿ, ಕೀಟಗಳ ವಿಧ ಮತ್ತು ಅವುಗಳ ಉಪಯೋಗ, ಹುಲಿ ಸಂರಕ್ಷಿತ ಪ್ರದೇಶ, ಪಕ್ಷಿಗಳಲ್ಲಿನ ವೈವಿಧ್ಯತೆವನ್ನು ಅನಾವರಣಗೊಳಿಸಲಾಗಿದೆ.
ಹಸಿರು ಸೇನಾನಿ (ಹುತಾತ್ಮ ಅಧಿಕಾರಿ)ಗಳ ಫೋಟೊ ಗ್ಯಾಲರಿ ನಿರ್ಮಿಸಿದ್ದು ಆಕರ್ಷಣೀಯವಾಗಿದೆ. ಜನರಿಗೆ ಪರಿಸರದಲ್ಲಿನ ಕುತೂಹಲಕಾರಿ ವಿಚಾರಗಳನ್ನು ವಿವರವಾಗಿ ಅರಿಯಲು ಕೇಂದ್ರ ಸಹಾಯಕವಾಗಲಿದೆ. ಮಾಹಿತಿ ಕೇಂದ್ರದ ನಿರ್ವಹಣೆಗೆ ಕಮಿಟಿ ಮಾಡಲಾಗಿದೆ. ಒಂದು ವಾರದೊಳಗಾಗಿ ಸಾರ್ವಜನಿಕರ ಭೇಟಿಗೆ ಅವಕಾಶ ನೀಡಲಿದ್ದು ಕಮಿಟಿಯು ಟಿಕೆಟ್ ದರ ನಿಗದಿಪಡಿಸಲಿದೆ
ಮೈಸೂರು ಪ್ರಾದೇಶಿಕ ಅರಣ್ಯ ವಿಭಾಗವು ಚಾಮುಂಡಿಬೆಟ್ಟದಲ್ಲಿ ನಿರ್ಮಿಸಿರುವ ಪರಿಸರ ಮಾಹಿತಿ ಕೇಂದ್ರದಲ್ಲಿ ಚಿರತೆ ಚೀತಾ ಮತ್ತು ಜಾಗ್ವಾರ್‌ಗಳ ಹೋಲಿಕೆಯ ಗ್ಯಾಲರಿ–
ಮೈಸೂರು ಪ್ರಾದೇಶಿಕ ಅರಣ್ಯ ವಿಭಾಗವು ಚಾಮುಂಡಿಬೆಟ್ಟದಲ್ಲಿ ನಿರ್ಮಿಸಿರುವ ಪರಿಸರ ಮಾಹಿತಿ ಕೇಂದ್ರದಲ್ಲಿ ಪರಿಸರ ಸೇನಾನಿಗಳ ಭಾವಚಿತ್ರ ಅಳವಡಿಸಿರುವುದು–
ಗಮನಸೆಳೆಯುವ ಪ್ರಾಣಿಗಳ ಪ್ರತಿಕೃತಿ ವನ್ಯಜೀವಿಗಳ ಮಾಹಿತಿ
ಮಾಹಿತಿ ಕೇಂದ್ರದ ನಿರ್ವಹಣೆಗೆ ಕಮಿಟಿ ಮಾಡಲಾಗಿದೆ. ಒಂದು ವಾರದೊಳಗಾಗಿ ಸಾರ್ವಜನಿಕರ ಭೇಟಿಗೆ ಅವಕಾಶ ನೀಡಲಿದ್ದು ಕಮಿಟಿಯು ಟಿಕೆಟ್ ದರ ನಿಗದಿಪಡಿಸಲಿದೆಡಾ.ಮಾಲತಿ ಪ್ರಿಯಾ ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ
ಕೇಂದ್ರಕ್ಕೆ ಎಚ್.ಸಿ.ಮಹದೇವಪ್ಪ ಚಾಲನೆ
ಅರಣ್ಯ ಇಲಾಖೆಯ ಪ್ರಾದೇಶಿಕ ಅರಣ್ಯ ವಿಭಾಗವು ನಿರ್ಮಿಸಿರುವ ಚಾಮುಂಡಿ ವನ ಹಾಗೂ ಪರಿಸರ ಮಾಹಿತಿ ಕೇಂದ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಚಾಲನೆ ನೀಡಿದರು. ವಿಶ್ವ ಪರಿಸರ ದಿನದ ಅಂಗವಾಗಿ ಔಷಧೀಯ ಗಿಡ ನೆಟ್ಟು ನೀರೆರದರು. ಬಳಿಕ ಮಾತನಾಡಿ ‘ಚಾಮುಂಡಿ ಬೆಟ್ಟದಲ್ಲಿ ಸುಮಾರು 20 ಎಕರೆ ಅರಣ್ಯ ಇಲಾಖೆ ಭೂಮಿಯನ್ನು ಖಾಸಗಿಯವರು ಅತಿಕ್ರಮಣ ಮಾಡಿ ನ್ಯಾಯಾಲಯಕ್ಕೆ ಹೋಗಿದ್ದರು. ಹೈಕೋರ್ಟ್‌ನಲ್ಲಿ ಈ ಭೂಮಿ ಸರ್ಕಾರ ಹಾಗೂ ಅರಣ್ಯ ಇಲಾಖೆಗೆ ಸೇರಿರುವುದೆಂದು ತೀರ್ಪು ಪ್ರಕಟವಾಯಿತು. ಈಗ ವನ್ಯಜೀವಿಗಳ ಅರಿವು ಮತ್ತು ಜವಾಬ್ದಾರಿ ಮೂಡಿಸಲು ಮಾಹಿತಿ ಕೇಂದ್ರ ತೆರೆಯಲಾಗಿದೆ’ ಎಂದರು. ಶಾಸಕ ಜಿ.ಟಿ.ದೇವೇಗೌಡ ಜಿಲ್ಲಾಧಿಕಾರಿ ಸಿ.ಲಕ್ಷ್ಮಿಕಾಂತ್ ರೆಡ್ಡಿ ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಡಾ.ಮಾಲತಿ ಪ್ರಿಯಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಡಾ.ಕೆ.ಎನ್.ಬಸವರಾಜ ಐ.ಬಿ.ಪ್ರಭು ಗೌಡ ಭಾಗವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.