ಮೈಸೂರು: ‘ಇನ್ಫೊಸಿಸ್‌ನವರೇನು ಬೃಹಸ್ಪತಿಗಳಾ? ನಾವು ನಡೆಸುತ್ತಿರುವುದು ಹಿಂದುಳಿದವರ ಸಮೀಕ್ಷೆಯಲ್ಲ. ಅವರಿಗೆ ಅದು ಅರ್ಥವಾಗದಿದ್ದರೆ ನಾವೇನು ಮಾಡಕ್ಕಾಗುತ್ತೆ?’
– ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಮಾಹಿತಿ ನೀಡುವುದಿಲ್ಲ’ ಎಂಬ ಇನ್ಫೊಸಿಸ್‌ನ ಸಹ ಸಂಸ್ಥಾಪಕ ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ಅವರ ಕುರಿತ ವರದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೀಗೆ ಪ್ರತಿಕ್ರಿಯಿಸಿದರು.
ಇಲ್ಲಿನ ವಿಮಾನನಿಲ್ದಾಣದಲ್ಲಿ ಪತ್ರಕರ್ತರ ಪ್ರಶ್ನೆಗೆ ಶುಕ್ರವಾರ ಉತ್ತರಿಸಿದ ಅವರು, ‘ಅವರಿಗೆ ತಪ್ಪು ಮಾಹಿತಿ ಇರಬಹುದು. ಏನಿದ್ದರೂ ಅವರಿಗೆ ಸೇರಿದ್ದು’ ಎಂದರು.
‘ಇದು ಹಿಂದುಳಿದವರ ಸಮೀಕ್ಷೆಯಲ್ಲ. ಎಲ್ಲ ಏಳು ಕೋಟಿ ಜನರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಎಂದು ಇಪ್ಪತ್ತು ಬಾರಿ ಹೇಳಿದ್ದೇವೆ. ಜಾಹೀರಾತೂ ಕೊಟ್ಟಿದ್ದೇವೆ. ‘ಶಕ್ತಿ’, ‘ಗೃಹಲಕ್ಷ್ಮಿ’, ‘ಭಾಗ್ಯಲಕ್ಷ್ಮಿ’ ಯೋಜನೆಗಳ ಲಾಭವನ್ನು ಪ್ರಬಲ ಜಾತಿಯವರು ಪಡೆದುಕೊಳ್ಳೊಲ್ಲವೇ? ನಾರಾಯಣ ಮೂರ್ತಿ, ಸುಧಾ ಅಂಥವರು ಇದು ಹಿಂದುಳಿದವರ ಸಮೀಕ್ಷೆ ಎಂಬ ಭಾವನೆ ಹೊಂದಿದ್ದರೆ ತಪ್ಪು. ಮುಂದೆ ಕೇಂದ್ರ ಸರ್ಕಾರ ಜನಗಣತಿ ಮಾಡುತ್ತದೆ, ಆಗ ಇವರು ಏನು ಹೇಳುತ್ತಾರೆ’ ಎಂದು ಪ್ರಶ್ನಿಸಿದರು.
ಇಷ್ಟವಿದ್ದಲ್ಲಿ ಹೂಡುತ್ತಾರೆ:
ಕೆಲವು ಕಂಪನಿಗಳು ಬೇರೆ ರಾಜ್ಯಗಳಿಗೆ ಹೋದ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಉದ್ಯಮಿಗಳು ಎಲ್ಲಿ ಬೇಕೋ ಅಲ್ಲಿ ಹೂಡಿಕೆ ಮಾಡುತ್ತಾರೆ. ಕರ್ನಾಟಕದಲ್ಲಿ ಹೂಡಿದವರು ಸೌಕರ್ಯ ಇಲ್ಲವೆಂದು ಹಾಕಿದ್ದಾರಾ? ಐಫೋನ್ ತಯಾರಿಕಾ ಕಂಪನಿಯವರು ಕರ್ನಾಟಕದಲ್ಲಿ ಸ್ಥಾಪಿಸಿಲ್ಲವೇ? ಬೇರೆಡೆ ಮಾಡಿಲ್ಲವೇಕೆ ಎಂದು ಕೇಳಿದರೆ ಹೇಗೆ? ಅವರಿಗೆ ಇಷ್ಟವಾದಲ್ಲಿ ಬಂಡವಾಳ ಹಾಕುತ್ತಾರೆ’ ಎಂದರು.
‘ರಾಜ್ಯದಲ್ಲಿ ಬಹಳಷ್ಟು ಮಂದಿ ಹೂಡಿಕೆ ಮಾಡಿದ್ದಾರೆ. ಇಲ್ಲದಿದ್ದರೆ ಜಾಗತಿಕ ಹೂಡಿಕೆಯಲ್ಲಿ ಕರ್ನಾಟಕ ನಂ.1 ಹೇಗಾಗುತ್ತಿತ್ತು? ಕೆಲವರು ಹೇಳುತ್ತಾರೆ, ಮಾಧ್ಯಮದವರು ಉಪ್ಪು–ಖಾರ ಹಾಕುತ್ತೀರಷ್ಟೆ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.