
ತಿ.ನರಸೀಪುರ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ವೋಟ್ ಚೋರಿ ಸಹಿ ಸಂಗ್ರಹ ಅಭಿಯಾನಕ್ಕೆ ಸನಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪನವರು ಸಹಿಮಾಡುವ ಮೂಲಕ ಚಾಲನೆ ನೀಡಿದರು
ತಿ.ನರಸೀಪುರ: ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರಲು ನಡೆಸುತ್ತಿರುವ ಮತಗಳ್ಳತನದ ಬಗ್ಗೆ ಜನಜಾಗೃತಿ ಮೂಡಿಸಲು ಕಾಂಗ್ರೆಸ್ ಪಕ್ಷ ದೇಶದಾದ್ಯಂತ ಮತಕಳುವಿನ (ಚೋರಿ) ವಿರುದ್ಧ ಚಳುವಳಿ ಮಾದರಿ ಅಭಿಯಾನ ಆರಂಭಿಸಿದ್ದು, ದೇಶದಲ್ಲಿ ಪಾರದರ್ಶಕ ಹಾಗೂ ನಿಷ್ಪಕ್ಷಪಾತ ಚುನಾವಣೆ ನಡೆಯಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ವೋಟ್ ಚೌರಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದಲ್ಲಿ ಕೋಮುವಾದಿ ಪಕ್ಷಗಳು ಸರ್ವಾಧಿಕಾರ ಸಾಧಿಸಲು ಚುನಾವಣಾ ಆಯೋಗದ ಮೂಲಕ ಮತಗಳ್ಳತನದ ಹುನ್ನಾರ ನಡೆಸುತ್ತಿವೆ. ಇದರ ಬಗ್ಗೆ ಮತದಾರರು ಜಾಗೃತರಾಗಬೇಕು.
 ಚುನಾವಣಾ ಆಯೋಗ ಸರಿಯಾಗಿ ಚುನಾವಣೆಗಳನ್ನು ನಡೆಸಬೇಕು. ಇಲ್ಲವಾದಲ್ಲಿಮತಗಳಿವಿನ ವ್ಯವಸ್ಥೆ ಯಿಂದ ಪ್ರಜಾಪ್ರಭುತ್ವ ನಶಿಸಬಹುದು ಪ್ರಜಾಪ್ರಭುತ್ವ ಉಳಿಯಬೇಕು ಹಾಗೂ ಚುನಾವಣೆಯಲ್ಲಿ ಪ್ರಜಾತಂತ್ರ ಗೆದ್ದು ಆಡಳಿತ ಹಾಗೂ ಆಳ್ವಿಕೆ ನಡೆಯಬೇಕು ಎಂಬ ಸಂದೇಶವನ್ನು ರಾಷ್ಟ್ರದಲ್ಲಿ ನೀಡಲಿಕ್ಕೆ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಜನಜಾಗೃತಿಯ ಚಳುವಳಿ ನಡೆಸುತ್ತಿದ್ದಾರೆ. ಕಾಂಗ್ರೆಸ್ ಸಹಿ ಸಂಗ್ರಹ ಜನಂದೋಲನ ನಡೆಸುತ್ತಿದೆ ಎಂದರು.
ಸರ್ವಾಧಿಕಾರಿ ಧೋರಣೆಯುಳ್ಳವರ ಕೈಗೆ ಅಧಿಕಾರ ಸಿಕ್ಕರೆ ಜನರ ಹಕ್ಕು ಮತ್ತು ವಾಕ್ ಸ್ವಾತಂತ್ರ್ಯದ ಹರಣವಾಗುತ್ತದೆ ಎಂದ ಸಚಿವರು,ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಯಾದ ಚುನಾವಣಾ ಆಯೋಗ ಜನಾದೇಶವನ್ನು ಅತಂತ್ರಗೊಳಿಸುವ ಮತಗಳ್ಳತನ ಕೃತ್ಯದ ಬಗ್ಗೆ ಪ್ರತಿ ಮತದಾರರು ತಮ್ಮ ಮತದ ಹಕ್ಕನ್ನು ಕಸಿಯಲು ಅವಕಾಶ ನೀಡದಂತೆ ಎಚ್ಚರಿಸಬೇಕು. ಅದಕ್ಕಾಗಿ ಮತದಾರರ ಹಕ್ಕುಗಳಿಗಾಗಿ ಸಹಿ ಸಂಗ್ರಹಣೆ ಅಭಿಯಾನ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ನಡೆಸಲಾಗುತ್ತಿದೆ ಎಂದರು.
ಉತ್ತರ ಪ್ರದೇಶ, ಮಧ್ಯ ಪ್ರದೇಶ ಹಾಗೂ ಬಿಹಾರ ರಾಜ್ಯಗಳಲ್ಲಿ ಮತಗಳುವು ಆಗಿರುವುದನ್ನು ಖಚಿತ ಪಡಿಸಿಕೊಂಡು ಇದರ ವಿರುದ್ಧ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೋರಾಡುತ್ತಿದ್ದಾರೆ ಚುನಾವಣೆ ವೇಳೆ ಸುಳಿವು ಕೊಟ್ಟ ಕೂಡಲೇ ದಾಳಿ ಮಾಡುವ ಚುನಾವಣಾ ಆಯೋಗ ಮತಗಳವು ಬಗ್ಗೆ ರಾಹುಲ್ ಗಾಂಧಿ ಅವರನ್ನು ದಾಖಲೆ ಕೇಳುತ್ತಿದೆ. ಚುನಾವಣೆ ಅಕ್ರಮ, ಮತಗಳವು ತಡೆಗಟ್ಟಬೇಕಾದದ್ದು ಆಯೋಗದ ಸಂವಿಧಾನಿಕ ಕರ್ತವ್ಯ, ಜವಾಬ್ದಾರಿ ಎಂಬುದನ್ನು ಆಯೋಗ ತಿಳಿಯಬೇಕು ಎಂದು ಅಭಿಪ್ರಾಯ ಪಟ್ಟರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮಾತನಾಡಿ, ಎಐಸಿಸಿ ದೇಶದಲ್ಲಿ ಹಮ್ಮಿಕೊಂಡಿರುವ ವೋಟ್ ಚೌರಿ ವಿರುದ್ಧದ ಅಭಿಯಾನದಲ್ಲಿ ಮತದಾರರ ಹಕ್ಕುಗಳಿಗಾಗಿ ಸಹಿ ಸಂಗ್ರಹಣೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಮತಗಳ್ಳತನ ನಿಲ್ಲಿಸಿ, ಜನಾದೇಶ ಕಗ್ಗೊಲೆ ಆಗುವುದನ್ನು ತಪ್ಪಿಸಲು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅದಕ್ಕಾಗಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ 20 ಸಾವಿರ ಸಹಿಗಳನ್ನು ಪಡೆಯಲಾಗುತ್ತಿದೆ. ಅಭಿಯಾನವನ್ನು ಯಶಸ್ವಿಗೊಳಿಸಲು ಪಕ್ಷದ ಕಾರ್ಯಕರ್ತರು ಸೇರಿದಂತೆ ಮುಖಂಡರು ಕಾರ್ಯನಿರ್ವಹಿಸುತ್ತಿರುವುದಾಗಿ ಅವರು ತಿಳಿಸಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಡಿ. ಬಸವರಾಜು, ಬಿ.ಚನ್ನಕೇಶವ, ಮುಖಂಡರಾದ
 ಎಂ.ಸುಧಾ ಮಹದೇವಯ್ಯ, ಹೊನ್ನನಾಯಕ, ಸೋಸಲೆ ಮಹದೇವಸ್ವಾಮಿ, ಮೈಮುಲ್ ನಿರ್ದೇಶಕ ಆರ್. ಚಲುವರಾಜು, ಎಂ.ಮಲ್ಲಿಕಾರ್ಜುನಸ್ವಾಮಿ, ಎಚ್.ಎನ್.ಉಮೇಶ್ ಕೆ. ವಜ್ರೇಗೌಡ, ಎಂ.ಎಸ್. ಶಿವಮೂರ್ತಿ, ಪಿ ಎ ಸಿ ಸಿ ಬ್ಯಾಂಕ್ ಅಧ್ಯಕ್ಷ ವೈ.ಎನ್. ಶಂಕರೇಗೌಡ, ಬಿ.ಕೆ.ಜ್ಞಾನಪ್ರಕಾಶ್, ಲತಾ ಜಗದೀಶ್, ಎಂ.ಪರಶಿವಮೂರ್ತಿ, , ಕುಕ್ಕೂರು ಗಣೇಶ್, ನರಸಿಂಹ ಮಾದನಾಯಕ, ರಾಮಲಿಂಗಯ್ಯ, ಮುನಾವರ್ ಪಾಷ, ಉಕ್ಕಲಗೆರೆ ಬಸವಣ್ಣ, ಆದಿಬೆಟ್ಟಹಳ್ಳಿ ಎ. ಬಿ.ಮಂಜುನಾಥ್, ಕೇತುಪುರ ಪ್ರಭಾಕರ್, ಹೆಮ್ಮಿಗೆ ಶೇಷಾದ್ರಿ, ಸಿದ್ದನಹುಂಡಿ ಸೋಮಣ್ಣ, ಕೊಳತ್ತೂರು ಎನ್.ಕುಮಾರ್, ಆರ್.ಸೋಮಣ್ಣ, ಡಿ.ಆರ್.ಮೂರ್ತಿ, ಜೆ.ಅನೂಪ್ ಗೌಡ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.