ADVERTISEMENT

‘ಮಹಾ’ ನಂಟಿನ ಐವರಿಗೆ ಕೋವಿಡ್

ತಬ್ಲೀಗ್ ಜಮಾತ್‌ನ ಸಂಪರ್ಕ ಹೊಂದಿದ್ದವರು; ಸಕ್ರಿಯ ಪ್ರಕರಣ 10ಕ್ಕೇರಿಕೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2020, 16:34 IST
Last Updated 11 ಜೂನ್ 2020, 16:34 IST
   

ಮೈಸೂರು: ಮಹಾರಾಷ್ಟ್ರದಿಂದ ಜಿಲ್ಲೆಗೆ ಮರಳಿದ ಐವರಲ್ಲಿ ಗುರುವಾರ ಕೋವಿಡ್–19 ದೃಢಪಟ್ಟಿದ್ದು, ಎಲ್ಲರನ್ನೂ ನಗರದಲ್ಲಿರುವ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ತಬ್ಲೀಗ್‌ ಜಮಾತ್‌ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಇವರು, ಸೊಲ್ಲಾಪುರದಿಂದ ಮೈಸೂರಿಗೆ ಈಚೆಗಷ್ಟೇ ಮರಳಿದ್ದರು ಎಂಬುದು ಖಚಿತಪಟ್ಟಿದೆ.

ಸೊಲ್ಲಾಪುರದಿಂದ ಬಂದಿದ್ದ 21 ಜನರನ್ನು ನಗರದ ನಾಯ್ಡು ನಗರದಲ್ಲಿರುವ ಮುಸ್ಲಿಂ ಮೈನಾರಿಟಿ ಆಸ್ಪತ್ರೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್‌ಗೊಳಪಡಿಸಲಾಗಿತ್ತು. ಇವರು ಕೇಂದ್ರದಲ್ಲಿ ನಿಗಾದಲ್ಲಿದ್ದಾಗಲೇ ಕೋವಿಡ್–19 ದೃಢಪಟ್ಟಿದೆ. ಇನ್ನೂ ಹಲವರ ವರದಿ ಬರಬೇಕಿದೆ ಎಂದು ಜಿಲ್ಲಾಡಳಿತದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ADVERTISEMENT

ಎರಡಂಕಿ ತಲುಪಿದ ಸಕ್ರಿಯ ಪ್ರಕರಣ: ನಂಜನಗೂಡಿನ ಔಷಧ ಕಾರ್ಖಾನೆಯ ನೌಕರರೊಬ್ಬರಿಂದ ಜಿಲ್ಲೆಯನ್ನೇ ತಲ್ಲಣಗೊಳಿಸಿದ್ದ ಕೋವಿಡ್–19, ಮೈಸೂರು ಜಿಲ್ಲಾಡಳಿತ, ಪೊಲೀಸರು, ಆರೋಗ್ಯ ಇಲಾಖೆಯ ಸತತ ಪರಿಶ್ರಮದಿಂದ ನಿಯಂತ್ರಣಕ್ಕೆ ಬಂದಿತ್ತು. ಕೋವಿಡ್‌ ಪೀಡಿತ ಎಲ್ಲರೂ ಗುಣಮುಖರಾಗಿ ಮನೆಗೆ ಮರಳಿದ್ದರು.

ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 106 ಜನರಿಗೆ ಕೋವಿಡ್ ತಗುಲಿದೆ. ಇದರಲ್ಲಿ 96 ಜನರು ಈಗಾಗಲೇ ಗುಣಮುಖರಾಗಿ ಮನೆಗಳಿಗೆ ಮರಳಿದ್ದಾರೆ. 10 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಜಿಲ್ಲೆಯ ಜನರಲ್ಲಿ ಮತ್ತೊಮ್ಮೆ ಕೋವಿಡ್‌–19ನ ಆತಂಕ ಹೆಚ್ಚಿಸಿದೆ. ಕೆಲ ಪ್ರದೇಶಗಳನ್ನು ಈಗಾಗಲೇ ಸೀಲ್‌ಡೌನ್‌ ಮಾಡಲಾಗಿದೆ.

ಮೈಸೂರು ಜಿಲ್ಲೆಯಾದ್ಯಂತ 7,718 ಜನರ ಮೇಲೆ ಜಿಲ್ಲಾಡಳಿತ ನಿಗಾ ವಹಿಸಿದೆ. 6,031 ಜನರು 14 ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದಾರೆ. 1,592 ಜನರು 14 ದಿನದ ಹೋಂ ಕ್ವಾರಂಟೈನ್‌ನಲ್ಲಿದ್ದರೆ, 85 ಜನರು 7 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ಗೊಳಪಟ್ಟಿದ್ದಾರೆ.

ಇದುವರೆಗೂ 12,581 ಜನರ ಗಂಟಲು ದ್ರವದ ಮಾದರಿ ಪರೀಕ್ಷೆ ನಡೆಸಲಾಗಿದ್ದು, 12,475 ಜನರ ವರದಿ ನೆಗೆಟಿವ್ ಬಂದಿದೆ. 106 ಜನರಲ್ಲಿ ಕೋವಿಡ್–19 ದೃಢಪಟ್ಟಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.