ADVERTISEMENT

ದಸಂಸ 4 ವರ್ಷದ ಹೋರಾಟ: ದಲಿತ ಮಹಿಳೆ ಪೂವಮ್ಮ ಬಂಗಾರುಗೆ ಮತ್ತೆ ದಕ್ಕಿದ ಭೂಮಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 15:30 IST
Last Updated 5 ಜೂನ್ 2025, 15:30 IST
ಹುಣಸೂರು ತಾಲ್ಲೂಕಿನ ಹುಂಡಿಮಾಳದ ನಿವಾಸಿ ಪೂವಮ್ಮ ಬಂಗಾರು ಅವರಿಗೆ ಉಪವಿಭಾಗಾಧಿಕಾರಿ ವಿಜಯಕುಮಾರ್ ಒತ್ತವರಿಯಾಗಿದ್ದ ಕೃಷಿ ಭೂಮಿಯನ್ನು ಗುರುವಾರ ತೆರವುಗೊಳಿಸಿ ದಾಖಲೆಯನ್ನು ಹಸ್ತಾಂತರಿಸಿದರು
ಹುಣಸೂರು ತಾಲ್ಲೂಕಿನ ಹುಂಡಿಮಾಳದ ನಿವಾಸಿ ಪೂವಮ್ಮ ಬಂಗಾರು ಅವರಿಗೆ ಉಪವಿಭಾಗಾಧಿಕಾರಿ ವಿಜಯಕುಮಾರ್ ಒತ್ತವರಿಯಾಗಿದ್ದ ಕೃಷಿ ಭೂಮಿಯನ್ನು ಗುರುವಾರ ತೆರವುಗೊಳಿಸಿ ದಾಖಲೆಯನ್ನು ಹಸ್ತಾಂತರಿಸಿದರು   

ಹುಣಸೂರು: ತಾಲ್ಲೂಕಿನ ಹುಂಡಿಮಾಳದ ನಿವಾಸಿ ದಲಿತ ವೃದ್ಧೆ ಪೂವಮ್ಮ ಬಂಗಾರು ನಾಲ್ಕು ವರ್ಷದ ಹಿಂದೆ ತನ್ನ ಅಸಾಹಯಕತೆಯಿಂದ ಕಳೆದುಕೊಂಡಿದ್ದ ಸಾಗುವಳಿ ಭೂಮಿಯ ಮಾಲೀಕತ್ವವನ್ನು ಮತ್ತೊಮ್ಮೆ ಪಡೆಯುವಲ್ಲಿ ಸಫಲರಾಗಿದ್ದಾರೆ. ಉಪವಿಭಾಗಾಧಿಕಾರಿ ಕೈಗೊಂಡ ತೀರ್ಮಾನ ಪೂವಮ್ಮಗೆ ಹೊಸ ಬದುಕು ಕಟ್ಟಿಕೊಳ್ಳಲು ಸಹಕಾರವಾಗಿದೆ ಎಂದು ದಸಂಸ ಮುಖಂಡ ನಿಂಗರಾಜ್ ಮಲ್ಲಾಡಿ ಹೇಳಿದರು.

ಹುಣಸೂರು ತಾಲ್ಲೂಕಿನ ಹುಂಡಿಮಾಳದ ನಿವಾಸಿ ಪೂವಮ್ಮ ಬಂಗಾರು ನೆರೆಯ ತಾಲ್ಲೂಕು ಎಚ್.ಡಿ.ಕೋಟೆ ಪಡುಕೋಟೆಯಲ್ಲಿ 4 ಎಕರೆ 38 ಗುಂಟೆ ಕೃಷಿ ಭೂಮಿ ಹೊಂದಿ, ಸಾಗುವಳಿ ಮಾಡುತ್ತಿದ್ದರು. ತಮ್ಮ ಕುಟುಂಬ ಸದಸ್ಯರು ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರಿಂದಾಗಿ ಕೆಲವು ವರ್ಷಗಳಿಂದ ಕೃಷಿ ಕೈಬಿಟ್ಟಿದ್ದರು. ಭೂಮಾಫಿಯಾದವರು ಪೂವಮ್ಮಗೆ ಸೇರಿದ ಭೂಮಿಯನ್ನು ಕಬಳಿಸಿದ್ದರು. ಇದರಿಂದ ಬದುಕಿಗೆ ಆಸರೆಯಾಗಿದ್ದ ಕೃಷಿ ಭೂಮಿ ಇಲ್ಲದೆ ವೃದ್ಧೆ ಅತಂತ್ರರಾಗಿದ್ದರು.

ದಸಂಸ ಉಪವಿಭಾಗ ಮಟ್ಟದ ಎಸ್ಸಿ ಮತ್ತು ಎಸ್ಟಿ ಸಮಿತಿ ಸಭೆಯಲ್ಲಿ ಪೂವಮ್ಮಳಿಗೆ ನ್ಯಾಯಕೊಡಿಸುವಂತೆ ವಿಷಯ ಪ್ರಸ್ತಾಪಿಸಿ ಸತತ 4 ವರ್ಷದಿಂದ ಹೋರಾಟ ಮಾಡಿದ್ದರ ಫಲದಿಂದಾಗಿ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಸ್ತು ಸ್ಥಿತಿ ಪರಿಶೀಲಿಸಿದರು. ಸರ್ಕಾರದಿಂದ ಮಂಜೂರಾಗಿದ್ದ ಭೂಮಿಯನ್ನು ಮರು ಹಸ್ತಾಂತರ ಮಾಡಿದ್ದಾರೆ. ಧ್ವನಿ ಇಲ್ಲದ ಸಮುದಾಯಕ್ಕೆ ಆಸರೆಯಾದ ಕಂದಾಯ ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ‍ಪ್ರಶಂಸನಾರ್ಹವಾಗಿದೆ ಎಂದರು.

ADVERTISEMENT

ಉಪವಿಭಾಗಾಧಿಕಾರಿ ವಿಜಯಕುಮಾರ್ ಮಾತನಾಡಿ, ಪೂವಮ್ಮ ಬಂಗಾರು ಅವರ ಭೂಮಿ ವಿಚಾರದ ಬಗ್ಗೆ ಉಪವಿಭಾಗ ಮತ್ತು ಜಿಲ್ಲಾ ಮಟ್ಟದ ಎಸ್ಸಿ ಮತ್ತು ಎಸ್ಟಿ ಸಭೆಯಲ್ಲಿ ಚರ್ಚೆಯಾಗಿತ್ತು. ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ದಾಖಲೆ ಆಧರಿಸಿ ಪ್ರತಿ ಹಂತದ ವಿಚಾರಣೆ ನಡೆಸಿ ಅಂತಿವಾಗಿ ಪೂವಮ್ಮ ಬಂಗಾರು ಅವರಿಗೆ ಮಂಜೂರಾಗಿದ್ದ 4 ಎಕರೆ 38 ಗುಂಟೆ ಭೂಮಿಯ ಒತ್ತುವರಿ ತೆರವುಗೊಳಿಸಿ ಅವರಿಗೆ ಹಸ್ತಾಂತರಿಸಿದ್ದೇವೆ ಎಂದರು.

ಮನೆ ಹಸ್ತಾಂತರ: ಸಾಗುವಳಿ ಭೂಮಿಯಲ್ಲಿ ನಿರ್ಮಿಸಿದ್ದ ಮನೆಯ ಬೀಗ ತೆರವುಗೊಳಿಸಿದ ಪೊಲೀಸರು, ಪೂವಮ್ಮ ಬಂಗಾರು ಕುಟುಂಬದವರನ್ನು ಆ ಮನೆಗೆ ಮರಳುವಂತೆ ಮಾಡಿ, ಸಂಪೂರ್ಣ ರಕ್ಷಣೆ ನೀಡುವ ಭರವಸೆ ನೀಡಿದರು. 

ಒತ್ತುವರಿ ತೆರವು ಕಾರ್ಯಾಚರಣೆ ಸಮಯದಲ್ಲಿ ಡಿವೈಎಸ್ಪಿ ಗೋಪಾಲಕೃಷ್ಣ, ತಹಶೀಲ್ದಾರ್ ಶ್ರೀನಿವಾಸ್, ಸರ್ಕಲ್ ಇನ್‌ಸ್ಪೆಕ್ಟರ್ ಮುನಿಯಪ್ಪ, ಸಂತೋಷ್ ಕಶ್ಯಪ್, ಜಿಲ್ಲಾ ಎಸ್ಸಿ, ಎಸ್ಟಿ ಜಾಗೃತಿ ಸಮಿತಿ ಸದಸ್ಯ ರವಿಕುಮಾರ್, ದಸಂಸ ಮುಖಂಡ ಬಲ್ಲೇನಹಳ್ಳಿ ಕೆಂಪರಾಜು, ದೇವೇಂದ್ರ, ದಿವಾಕರ್, ಗಜೇಂದ್ರ ಸೇರಿದಂತೆ ಪೂವಮ್ಮ ಬಂಗಾರು ಕುಟುಂಬದವರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.