ADVERTISEMENT

ದಸರಾದಲ್ಲಿ ‘ಅಂಬಾರಿ’ ಡಬ್ಬಲ್ ಡೆಕ್ಕರ್ ಬಸ್‌ಗೆ ಉತ್ತಮ ಪ್ರತಿಕ್ರಿಯೆ

ಪ್ರವಾಸಿಗರು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ

ಎಂ.ಮಹೇಶ
Published 15 ಅಕ್ಟೋಬರ್ 2022, 19:30 IST
Last Updated 15 ಅಕ್ಟೋಬರ್ 2022, 19:30 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವರು ಅಂಬಾರಿ ಬಸ್‌ನಲ್ಲಿ ದಸರಾ ವಿದ್ಯುತ್‌ ದೀಪಾಲಂಕಾರ ವೀಕ್ಷಿಸಿದ ಕ್ಷಣ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವರು ಅಂಬಾರಿ ಬಸ್‌ನಲ್ಲಿ ದಸರಾ ವಿದ್ಯುತ್‌ ದೀಪಾಲಂಕಾರ ವೀಕ್ಷಿಸಿದ ಕ್ಷಣ   

ಮೈಸೂರು: ನಾಡಹಬ್ಬ ದಸರಾದಲ್ಲಿ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಉಪಕ್ರಮವಾದ ‘ಅಂಬಾರಿ’ ಡಬ್ಬಲ್ ಡೆಕ್ಕರ್ ಬಸ್‌ಗೆ ಜನರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಎರಡು ವರ್ಷಗಳು ಕೋವಿಡ್ ಕಾರಣದಿಂದಾಗಿ ದಸರಾ ಮಹೋತ್ಸವವನ್ನು ಸರಳವಾಗಿ ನಡೆಸಲಾಗಿತ್ತು. ಈ ಬಾರಿ ಸರ್ಕಾರವು ಅದ್ದೂರಿಯಾಗಿ ಆಯೋಜಿಸಿದ್ದರಿಂದಾಗಿ ಸಾಂಸ್ಕೃತಿಕ ನಗರಿ ಮೈಸೂರಿಗೆ ನಿತ್ಯವೂ ಸಹಸ್ರಾರು ಮಂದಿ ಬಂದಿದ್ದರು. ವಿವಿಧ ಭಾಗಗಳಿಂದ ಬಂದಿದ್ದ ಪ್ರವಾಸಿಗರು ‘ಅಂಬಾರಿ’ ಬಸ್ ಬಳಸಿದ್ದಾರೆ.

ಮೈಸೂರು ಅರಮನೆ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ಹಾಗೂ ವೃತ್ತಗಳಲ್ಲಿ ವಿಜೃಂಭಣೆಯಿಂದ ಮಾಡಿದ್ದ ವಿದ್ಯುತ್‌ ದೀಪಾಲಂಕಾರವನ್ನು ಬಹಳಷ್ಟು ಮಂದಿ ಅಂಬಾರಿ ಬಸ್‌ನಲ್ಲಿ ನಿಂತು/ಕುಳಿತುಕಣ್ತುಂಬಿಕೊಂಡಿದ್ದಾರೆ.

ADVERTISEMENT

ನಗರದ ಹೃದಯ ಭಾಗದಲ್ಲಿ, ಸಂಚಾರ ದಟ್ಟಣೆ ನಿಯಂತ್ರಿಸುವುದಕ್ಕಾಗಿ ಅರಮನೆ ಸುತ್ತಲೂ ಪ್ರತಿ ದಿನ ರಾತ್ರಿ 9ರಿಂದ ರಾತ್ರಿ 11ರವರೆಗೆ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿರಲಿಲ್ಲ. ಆದರೆ, ಅಂಬಾರಿ ಬಸ್‌ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಅಲ್ಲದೇ, ಅದರ ಸಂಚಾರಕ್ಕಾಗಿ ವಿದ್ಯುತ್‌ ದೀಪಾಲಂಕಾರವನ್ನು ಎತ್ತರದಲ್ಲೇ ಮಾಡಲಾಗಿತ್ತು. ಇದೆಲ್ಲ ಕಾರಣದಿಂದಾಗಿ, ಪ್ರವಾಸಿಗರು ಹಾಗೂ ಸ್ಥಳೀಯರು ಕುಟುಂಬ ಸಮೇತವಾಗಿ ಬಂದು ಅಂಬಾರಿ ಏರಿ ನಗರದ ದೀಪ ಸೌಂದರ್ಯವನ್ನು ವೀಕ್ಷಿಸಿದ್ದಾರೆ.

ಬೂಸ್ಟರ್‌ ಡೋಸ್:

ನಗರಕ್ಕೆ ಒಟ್ಟು 6 ಅಂಬಾರಿ ಬಸ್‌ಗಳನ್ನು ಪ್ರವಾಸೋದ್ಯಮ ಇಲಾಖೆ ಒದಗಿಸಿದೆ. ಅವುಗಳಲ್ಲಿ 2 ಬಸ್‌ಗಳನ್ನು ಮಾತ್ರವೇ ದಸರೆಗಿಂತ ಹಿಂದಿನ ದಿನಗಳಲ್ಲಿ ಬಳಸಲಾಗುತ್ತಿತ್ತು. ಅವುಗಳಿಗೂ ವಾರಾಂತ್ಯ ಅಥವಾ ಸಾರ್ವತ್ರಿಕ ರಜಾ ದಿನಗಳಂದು ಮಾತ್ರವೇ ಬೇಡಿಕೆ ಇತ್ತು. ಸೊರಗಿದ್ದ ಅಂಬಾರಿಗೆ ನಾಡಹಬ್ಬವು ‘ಬೂಸ್ಟರ್‌ ಡೋಸ್’ ನೀಡಿದೆ.

ದಸರಾ ರಜೆಯೂ ಇದ್ದಿದ್ದರಿಂದ ಕುಟುಂಬ ಸಮೇತ ಪ್ರವಾಸಿಗರು ಬಂದಿದ್ದರು. ಅವರನ್ನು, ವಿಶೇಷವಾಗಿ ಯುವಜನರನ್ನು ಅಂಬಾರಿಯು ಹೆಚ್ಚು ಆಕರ್ಷಿಸಿದೆ. ಅಂಬಾರಿಯಲ್ಲಿ ಸಾಗುತ್ತಾ ದೀಪಾಲಂಕಾರದ ವರ್ಣರಂಜಿತ ವಾತಾವರಣದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹಾಗೂ ಫೋಟೊ ತೆಗೆಸಿಕೊಳ್ಳಲು ಅವರು ಮುಗಿಬೀಳುತ್ತಿದ್ದುದು ಸಾಮಾನ್ಯವಾಗಿತ್ತು.

ದಸರಾ ಸಂದರ್ಭದಲ್ಲಿ ನಿತ್ಯವೂ 18 ಟ್ರಿಪ್‌ಗಳನ್ನು ಅಂಬಾರಿ ಬಸ್‌ಗಳು ಕಾರ್ಯಾಚರಣೆ ನಡೆಸಿವೆ. ಸಂಜೆ 6.30, ರಾತ್ರಿ 8 ಮತ್ತು ರಾತ್ರಿ 9.30ಕ್ಕೆ ತಲಾ 6 ಟ್ರಿಪ್‌ಗಳಾಗಿವೆ. ಮೈಸೂರು ಅರಮನೆಯ ವರಾಹ ದ್ವಾರದ ಬಳಿಯಿಂದ ಆರಂಭವಾಗುತ್ತಿದ್ದ ಟ್ರಿಪ್‌ನಲ್ಲಿ ಹಾರ್ಡಿಂಜ್ ವೃತ್ತ, ನಗರ ಬಸ್ ನಿಲ್ದಾಣದ ಎದುರಿನ ರಸ್ತೆ, ಕೆ.ಆರ್‌.ವೃತ್ತ, ಸಯ್ಯಾಜಿರಾವ್‌ ರಸ್ತೆ ಮೊದಲಾದ ಕಡೆಗಳಲ್ಲಿ ಸಂಚರಿಸಿ ವಿದ್ಯುತ್‌ ದೀಪಾಲಂಕಾರವನ್ನು ಜನರು ವೀಕ್ಷಿಸಿದ್ದಾರೆ.

ಶುಲ್ಕ ಹೆಚ್ಚಿಸಿದರೂ ಬಂದರು!:

ಈ ಬಸ್‌ಗಳಲ್ಲಿ ಸಂಚಾರಕ್ಕೆ ₹ 250 ಶುಲ್ಕ ನಿಗದಿ‍ಪಡಿಸಲಾಗಿತ್ತು. ದಸರೆಗೆ ಮುನ್ನ, ಸಾರ್ವಜನಿಕರಿಂದ ಬೇಡಿಕೆ ಕಂಡುಬಾರದಿದ್ದರಿಂದ ಶುಲ್ಕವನ್ನು ₹ 150ಕ್ಕೆ ಇಳಿಸಲಾಗಿತ್ತು. ಆದರೆ, ದಸರಾ ವೇಳೆ ಕಂಡುಬಂದ ಪ್ರತಿಕ್ರಿಯೆ ಗಮನಿಸಿ ಶುಲ್ಕವನ್ನು ಹೆಚ್ಚಿಸಲಾಗಿತ್ತು. ಬಸ್‌ನ ಅಪ್ಪರ್‌ನಲ್ಲಿ ಸಂಚರಿಸಲು ₹ 350 ಹಾಗೂ ಲೋವರ್‌ಗೆ ₹ 250 ನಿಗದಿಪಡಿಸಲಾಗಿತ್ತು! ಆದರೂ ಜನರು ಬಂದರು ಇದರಿಂದ ಉತ್ತಮ ವರಮಾನವನ್ನೂ ನಿಗಮ ಕಂಡುಕೊಂಡಿದೆ.

‘ಈ ಬಾರಿಯ ದಸರೆಯಲ್ಲಿ ‘ಅಂಬಾರಿ’ ಬಸ್‌ಗಳಿಗೆ ಅಭೂತಪೂರ್ವ ಪ್ರತಿಕ್ರಿಯೆ ಬಂದಿದೆ.ಸೇವೆ ಒದಗಿಸಲು ಸಾಧ್ಯವಾಗದಷ್ಟು ಪ್ರಮಾಣದಲ್ಲಿ ಪ್ರವಾಸಿಗರು ನಿತ್ಯವೂ ಬಂದರು. ಇದರಿಂದ ಉತ್ತಮ ಆದಾಯವನ್ನು ನಿಗಮ ಕಂಡಿದೆ’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ’ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಮುಖ್ಯಮಂತ್ರಿ, ಸಚಿವರು ಟಿಕೆಟ್ ತೆಗೆದುಕೊಂಡರೇ?!

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅವರ ಕುಟುಂಬದವರು ಮತ್ತು ಬಹಳಷ್ಟು ಸಚಿವರುಅಂಬಾರಿ ಬಸ್‌ನಲ್ಲಿ ವಿದ್ಯುತ್‌ ದೀಪಾಲಂಕಾರವನ್ನು ವೀಕ್ಷಿಸಿದರು. ಆ ಹಣವನ್ನು ಯಾರು ಪಾವತಿಸಿದರು, ಜಿಲ್ಲಾಡಳಿತ ನೀಡಿದೆಯೇ, ಉಚಿತವಾಗಿ ಸೇವೆ ಒದಗಿಸಲಾಗಿದೆಯೇ ಎನ್ನುವ ಮಾಹಿತಿ ನನ್ನ ಬಳಿ ಇಲ್ಲ. ಮೈಸೂರಿನಲ್ಲಿರುವ ವ್ಯವಸ್ಥಾಪಕರ ಬಳಿ ಆ ಮಾಹಿತಿ ಇರಬಹುದು’ ಎಂದು ಪ್ರತಿಕ್ರಿಯಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಮೈಸೂರಿನ ವ್ಯವಸ್ಥಾಪಕ ಚೇತನ್, ‘ಗಣ್ಯರಿಗೆ ಅಂಬಾರಿ ಬಸ್‌ನಲ್ಲಿ ಟ್ರಿಪ್ ನಡೆದಿದೆ. ಆದರೆ, ಅವರು ಹಣ ಪಾವತಿಸಿದರೋ, ಇಲ್ಲವೋ ಎನ್ನುವುದನ್ನು ಹಿರಿಯ ಅಧಿಕಾರಿಗಳೇ ತಿಳಿಸಬೇಕಾಗುತ್ತದೆ’ ಎಂದು ಹೇಳಿದರು. ನಿಗಮದ ಅಧಿಕಾರಿಗಳ ಈ ಭಿನ್ನ ಹೇಳಿಕೆಗಳು ಮತ್ತು ಮಾಹಿತಿಯನ್ನು ಮುಚ್ಚಿಡುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಲ್ಲದೇ, ಮುಖ್ಯಮಂತ್ರಿ ಮತ್ತು ಸಚಿವರು ಅಂಬಾರಿ ಬಸ್‌ ಅನ್ನು ಉಚಿತವಾಗಿ ಬಳಸಿದರೋ, ಇಲ್ಲವೋ ಎನ್ನುವುದು ಸ್ಪಷ್ಟವಾಗುತ್ತಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.