ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಆಯೋಜನೆ | ಭಾವಕ್ಕೆ ವೈಕಲ್ಯವಿಲ್ಲ: ಸುಕನ್ಯಾ ಮಾರುತಿ | ಸಂಜ್ಞೆಯಲ್ಲೇ ಅಭಿನಂದಿಸಿದ ಸಾಹಿತ್ಯಪ್ರಿಯರು
ಮೈಸೂರು: ವಾಕ್ ಮತ್ತು ಶ್ರವಣ ದೋಷವುಳ್ಳವರು, ಅನಾಥಾಶ್ರಮ ವಾಸಿಗಳು, ದೃಷ್ಟಿದೋಷವುಳ್ಳವರ ಕಾವ್ಯ ಪ್ರತಿಭೆಗೆ, ಲಿಂಗತ್ವ ಅಲ್ಪಸಂಖ್ಯಾತರ ತವಕ–ತಲ್ಲಣಗಳಿಗೆ ಬುಧವಾರ ಇಲ್ಲಿ ನಡೆದ ದಸರಾ ‘ಪ್ರಚುರ ಕವಿಗೋಷ್ಠಿ’ ಸಾಕ್ಷಿಯಾಯಿತು. ಸಾಹಿತ್ಯಪ್ರಿಯರ ಮೆಚ್ಚುಗೆಗೂ ಪಾತ್ರವಾಯಿತು.
ಮಾನಸಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಹೋರಾಟಗಾರರು, ಅಧಿಕಾರಿಗಳು ಸೇರಿದಂತೆ ಸಮಾಜದ ವಿವಿಧ ಕ್ಷೇತ್ರದ ಕವಿಮನಸ್ಸಿನವರು ಕವನ ವಾಚಿಸಿದರು. ಅವಕಾಶವಂಚಿತರಿಗೆ ಇದೇ ಮೊದಲಿಗೆ ವೇದಿಕೆ ಸಿಕ್ಕಿತು.
ಕಳ್ಳಸಾಗಣೆ, ಲೈಂಗಿಕ ಶೋಷಣೆಗೆ ಒಳಗಾದ ಮಹಿಳೆಯರು, ಮಕ್ಕಳ ರಕ್ಷಣೆ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವ ಒಡನಾಡಿ ಸೇವಾ ಸಂಸ್ಥೆ ನಿವಾಸಿಯಾದ ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿ ಚೈತ್ರಾ ಆರ್. ‘ಅಮ್ಮ’ ಕವಿತೆ ವಾಚಿಸಿ ತಾಯಿಯನ್ನು ನೆನೆದರು. ಇದೇ ಸಂಸ್ಥೆಯ ಸತ್ಯಾ ಡಿ. ‘ಶ್ರೀ’ ಕವನವಾಚಿಸಿದರು.
ಶ್ರವಣದೋಷವುಳ್ಳ ಹಾವೇರಿಯ ಮಧು ಕಾರಗಿ ‘ಚೆಲುವ ಕನ್ನಡ ನಾಡು’ ಕವನದ ಮೂಲಕ ರಾಜ್ಯದ ಚೆಲುವನ್ನು ವರ್ಣಿಸಿದರು.
ಒಪ್ಪಿಕೊಳ್ಳಿರಿ ನಮ್ಮನ್ನೂ ಮಾನವರೆಂದು:
ಮೈಸೂರಿನಲ್ಲಿ ಪ್ರಸಾಧನ ಕಲಾವಿದೆಯಾಗಿರುವ ಲಿಂಗತ್ವ ಅಲ್ಪಸಂಖ್ಯಾತರಾದ ರಿಹಾನಾ ಇರ್ಫಾನ್ ‘ಬದುಕಿನ ಬವಣೆ’ ಕವನದಲ್ಲಿ, ಸಮುದಾಯದವರ ಸವಾಲುಗಳು, ಸಮಸ್ಯೆಗಳನ್ನು ಕಟ್ಟಿಕೊಟ್ಟರು.
‘ಅಲ್ಲೂ ಇರಲಾರದ, ಇಲ್ಲೂ ಬರಲಾಗದ ಸಂಕಟ ನಮ್ಮದು’ ಎಂದು ನೋವು ಬಿಚ್ಚಿಟ್ಟರು. ‘ಬದುಕಿದ್ದರೂ ಬದುಕಿರದ ನಿರ್ಜೀವಿ ದುರ್ಭಾಗ್ಯರು ನಾವು, ತಿಳಿದುಕೊಳ್ಳಿರಿ ನಮ್ಮ ಅಂತರಾಳವ, ಒಪ್ಪಿಕೊಳ್ಳಿರಿ ನಮ್ಮನ್ನೂ ಮಾನವರೆಂದು’ ಎಂದು ಕೋರಿದರು. ಇದಕ್ಕೆ ನೆರೆದಿದ್ದವರಿಂದ ಚಪ್ಪಾಳೆಗಳ ಸ್ಪಂದನೆಯ ಸುರಿಮಳೆಯಾಯಿತು.
ದೃಷ್ಟಿದೋಷವುಳ್ಳ ಡಿಪ್ಲೊಮಾ ವಿದ್ಯಾರ್ಥಿ ಲಿಖಿತ್ ಎ. ‘ಕೈಗೆಟುಕದ ನಕ್ಷತ್ರ’, ಮೈಸೂರಿನ ಕಿವುಡ ಮಕ್ಕಳ ಸರ್ಕಾರಿ ಶಾಲೆಯ ವಿದ್ಯಾರ್ಥಿ ಹೇಮಂತ್ ‘ಬಾಂಧವ್ಯ’ ಶೀರ್ಷಿಕೆ ಕವನ ವಾಚಿಸಿದರು. ಶ್ರವಣದೋಷವುಳ್ಳ ವಿದ್ಯಾರ್ಥಿ ಲಿಖಿತ್ ಅವರ ‘ನಮ್ಮ ಭಾಷೆ’ ಕವನವನ್ನು ಅವರ ಶಿಕ್ಷಕರು ವಾಚಿಸಿದರು. ‘ಸಂಜ್ಞೆ’ಯಲ್ಲಿ ಅದನ್ನು ಲಿಖಿತ್ ಪ್ರದರ್ಶಿಸಿದರು. ಪಾಲ್ಗೊಂಡಿದ್ದವರು ಎದ್ದುನಿಂತು ಕೈಗಳನ್ನು ಮೇಲೆತ್ತಿ ಸಂಜ್ಞೆಯಲ್ಲೇ ಅಭಿನಂದನೆ ಸಲ್ಲಿಸಿದ್ದು ವಿಶೇಷವಾಗಿತ್ತು.
ವಾಕ್ ದೋಷವುಳ್ಳ ವಿದ್ಯಾರ್ಥಿನಿ ಶೈಲಾ ಬಿ.ಕೊಣ್ಣೂರು ‘ಶಿಕ್ಷಣ’ ಕವನದ ಮೂಲಕ ಜ್ಞಾನಾರ್ಜನೆಯ ಮಹತ್ವವನ್ನು ತೊದಲು ಮಾತುಗಳಲ್ಲೇ ಮಂಡಿಸಿ ಮೆಚ್ಚುಗೆಗೆ ಪಾತ್ರವಾದರು.
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕವಯತ್ರಿ ಸುಕನ್ಯಾ ಮಾರುತಿ, ‘ದೇಹಕ್ಕೆ ವೈಕಲ್ಯ ಇರಬಹುದು. ಆದರೆ, ಭಾವಕ್ಕಲ್ಲ ಎಂಬ ಸಂದೇಶವನ್ನು ವಿಶೇಷ ವ್ಯಕ್ತಿಗಳು ಇಲ್ಲಿ ಪ್ರತಿಪಾದಿಸಿದ್ದಾರೆ. ಇದೊಂದು ವಿಶಿಷ್ಟ ಕವಿಗೋಷ್ಠಿ. ಭಾಗವಹಿಸಿದ್ದವರಿಂದ ಕಲಿಯಬೇಕಾದುದು ಬಹಳಷ್ಟಿದೆ’ ಎಂದು ಶ್ಲಾಘಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.