ಮೈಸೂರು: ‘ದಸರಾ ಇರುವುದು ಜನರಿಗಾಗಿ. ಆದರೆ ಬಂದೋಬಸ್ತ್ ಹೆಸರಿನಲ್ಲಿ ಹಬ್ಬದ ಸಂಭ್ರಮ ಕಿತ್ತುಕೊಂಡರು. ಬೆಳಿಗ್ಗೆ ಹಾಲು ತರಲೂ ಸಾಧ್ಯವಾಗಲಿಲ್ಲ’ ಎಂದು ಚಾಮುಂಡಿ ಬೆಟ್ಟದ ನಿವಾಸಿ ಸತೀಶ್ ಅಳವತ್ತುಕೊಂಡರು.
ನಾಡಹಬ್ಬ ದಸರಾ ಉದ್ಘಾಟನೆ ಸಮಯದಲ್ಲಿ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಸಾರ್ವಜನಿಕರಿಗೆ ಬೆಟ್ಟಕ್ಕೆ ಪ್ರವೇಶ ನಿಷೇಧಿಸಲಾಗಿತ್ತು. ಬೆಟ್ಟದ ನಿವಾಸಿಗಳಿಗೂ ಉದ್ಘಾಟನಾ ಸಮಾರಂಭಕ್ಕೆ ಅವಕಾಶ ಇರಲಿಲ್ಲ. ಇದರಿಂದ ಸ್ಥಳೀಯರು ಮಧ್ಯಾಹ್ನ 1 ಗಂಟೆಯವರೆಗೂ ತೊಂದರೆ ಅನುಭವಿಸಿದರು.
‘ಬೆಳಿಗ್ಗಿನಿಂದ ಅಂಗಡಿ ಮುಚ್ಚಿಸಿದ್ದಾರೆ. ಬಸ್ ಸಂಚಾರವೂ ಇಲ್ಲದಿರುವುದರಿಂದ ನಿತ್ಯ ಕೆಲಸಕ್ಕೆ ತೆರಳುವವರೂ ರಜೆ ಹಾಕಬೇಕಾಗಿದೆ. ಏನಾದರೂ ಆರೋಗ್ಯ ಸಮಸ್ಯೆಗಳಾದರೂ, ಆಸ್ಪತ್ರೆಗೆ ತೆರಳಲು ಅಧಿಕಾರಿಗಳ ಅನುಮತಿ ಪಡೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ’ ಎಂದು ಸ್ಥಳೀಯ ನಿವಾಸಿ ಬಂಗಾರು ಗೌಡ್ರು ‘ಪ್ರಜಾವಾಣಿ’ಗೆ ತಿಳಿಸಿದರು.
ಬಳೆ ತೆಗೆದು ಕಳಿಸಿದರು: ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದನ್ನು ಖಂಡಿಸಿ ಬಿಜೆಪಿ ಹಾಗೂ ಹಿಂದುತ್ವ ಸಂಘಟನೆಯ ನಾಯಕರು ಕಪ್ಪು ಬಾವುಟ ಪ್ರದರ್ಶಿಸುವುದಾಗಿ ಹೇಳಿಕೆ ನೀಡಿದ್ದರು. ಅಂತಹ ಘಟನೆಗಳನ್ನು ತಡೆಯಲು ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ತಾವರೆಕಟ್ಟೆಯಿಂದ ಉದ್ಘಾಟನಾ ವೇದಿಕೆಗೆ ತಲುಪಲು ಐದು ಚೆಕ್ ಪಾಯಿಂಟ್ ನಿರ್ಮಿಸಿ, ಪರಿಶೀಲನೆ ನಡೆಸಿದರು.
ಕಪ್ಪು ವಸ್ತ್ರ, ಬಳೆ ತೆಗೆದುಕೊಂಡು ಬಂದವರನ್ನು ಚೆಕ್ ಪಾಯಿಂಟ್‌ಗಳಲ್ಲೇ ತೆಗೆಸಿ, ನಂತರ ಕಾರ್ಯಕ್ರಮ ಪ್ರವೇಶಿಸಲು ಅವಕಾಶ ನೀಡಿದರು. ವೇದಿಕೆಯ ಮುಂಭಾಗ ಗಣ್ಯರು ಹಾಗೂ ಮಾಧ್ಯಮದವರಿಗೆ ಅವಕಾಶ ನೀಡಿದ್ದರೆ, ಸಾರ್ವಜನಿಕರಿಗೆ ಪ್ರತ್ಯೇಕವಾಗಿ ಸಾವಿರ ಕುರ್ಚಿ ವ್ಯವಸ್ಥೆ ಮಾಡಲಾಗಿತ್ತು. ಪಾಸ್ ಇದ್ದವರಿಗಷ್ಟೇ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಿದ್ದರು.
150ಕ್ಕೂ ಅಧಿಕ ಗೃಹರಕ್ಷಕ ಸಿಬ್ಬಂದಿ ಮಫ್ತಿಯಲ್ಲಿ ಕರ್ತವ್ಯ ನಿರ್ವಹಿಸಿದರು. ಸಾವಿರಕ್ಕೂ ಅಧಿಕ ಪೊಲೀಸ್ ಅಧಿಕಾರಿ, ಸಿಬ್ಬಂದಿ, ಕ್ಷಿಪ್ರ ಕಾರ್ಯಾಚರಣ ಪಡೆ, ಬಾಂಬ್ ನಿಷ್ಕ್ರೀಯ ದಳ ತಂಡಗಳು ಭದ್ರತೆಯಲ್ಲಿ ಪಾಲ್ಗೊಂಡವು.
ದಸರಾ ಉದ್ಘಾಟನೆಯ ಪ್ರಮುಖಾಂಶಗಳು
* ಪೊಲೀಸ್ ಬೆಂಗಾವಲು ವಾಹನದೊಂದಿಗೆ ಬಾನು ಮುಷ್ತಾಕ್ ಆಗಮನ
* ಬಾನು ಮುಷ್ತಾಕ್ ಕುಟುಂಬಸ್ಥರ ಆಗಮನ
* ಐರಾವತ ಬಸ್‌ನಲ್ಲಿ ಸಚಿವರು ಶಾಸಕರು ಹಾಗೂ ಜನಪ್ರತಿನಿಧಿಗಳ ಆಗಮನ
* ಚಾಮುಂಡಿ ಬೆಟ್ಟ ಪ್ರಾಧಿಕಾರದ ಕಾರ್ಯದರ್ಶಿ ರೂಪ ಹೂಗುಚ್ಛ ನೀಡಿ ಸ್ವಾಗತ
* ಅತಿಥಿಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ದೇವಾಲಯಕ್ಕೆ ಕರೆದೊಯ್ದ ಮಹಿಳೆಯರು. ಡೊಳ್ಳು ಕುಣಿತ ಕಂಸಾಲೆ ವೀರಗಾಸೆ ತಂಡಗಳ ಸಾಥ್
ವಿಶ್ವ ಪ್ರಸಿದ್ಧವಾದ ದಸರಾ ಉದ್ಘಾಟನೆ ನೋಡುವ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ. ಅದಕ್ಕಾಗಿ 750 ಕಿ.ಮೀ ಕ್ರಮಿಸಿ ಬಂದಿದ್ದೇನೆ-ಮಲ್ಲಿಕಾರ್ಜುನ ಸ್ವಾಮಿ ಜಿ.ಆರ್ ಕುಪ್ಪೇವಾಡ ಗ್ರಾಮ ವಿಜಯಪುರ
ನನ್ನ ನಾದಿನಿಯ ಸಾಧನೆ ಖುಷಿ ಕೊಟ್ಟಿದೆ. ಆಕೆಯ ಜೀವನದ ಅಮೂಲ್ಯ ಕ್ಷಣದಲ್ಲಿ ಭಾಗಿಯಾಗಲು ಕುಟುಂಬಸ್ಥರೊಂದಿಗೆ ಬಂದಿದ್ದೇವೆ- ಅಬ್ದುಲ್ ವಾಜಿದ್ (ಬಾನು ಮುಷ್ತಾಕ್ ಕುಟುಂಬಸ್ಥರು) ಹಾಸನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.