ADVERTISEMENT

ಮೈಸೂರು | ದಸರೆಗೆ ವಿಶೇಷ ಸಾರಿಗೆ ಸೇವೆ

ಸೆ.25ರಿಂದ ಕೆಎಸ್‌ಆರ್‌ಟಿಸಿಯ 600 ಹೆಚ್ಚುವರಿ ಬಸ್‌ಗಳ ಓಡಾಟ

ಆರ್.ಜಿತೇಂದ್ರ
Published 22 ಸೆಪ್ಟೆಂಬರ್ 2025, 5:28 IST
Last Updated 22 ಸೆಪ್ಟೆಂಬರ್ 2025, 5:28 IST
ಕೆಎಸ್‌ಆರ್‌ಟಿಸಿ ಬಸ್ ಏರುವಲ್ಲಿ ನಿರತರಾದ ಮಹಿಳೆಯರು     (ಪ್ರಜಾವಾಣಿ ಸಂಗ್ರಹ ಚಿತ್ರ)
ಕೆಎಸ್‌ಆರ್‌ಟಿಸಿ ಬಸ್ ಏರುವಲ್ಲಿ ನಿರತರಾದ ಮಹಿಳೆಯರು     (ಪ್ರಜಾವಾಣಿ ಸಂಗ್ರಹ ಚಿತ್ರ)   

ಮೈಸೂರು: ಈ ಬಾರಿ ದಸರೆಯಲ್ಲಿ ಪ್ರಯಾಣಿಕರ ಸಂದಣಿ ನಿಯಂತ್ರಿಸಲು ಕೆಎಸ್‌ಆರ್‌ಟಿಸಿಯು ಹೆಚ್ಚುವರಿ ಬಸ್‌ಗಳ ಸೇವೆ ಒದಗಿಸಲಿದೆ. 600 ಹೆಚ್ಚುವರಿ ಬಸ್‌ಗಳು ರಸ್ತೆಗೆ ಇಳಿಯಲಿವೆ.

ವರ್ಷದಿಂದ ವರ್ಷಕ್ಕೆ ದಸರೆ ನೋಡಲೆಂದು ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಅದರಲ್ಲೂ ಶಕ್ತಿ ಯೋಜನೆ ಜಾರಿಯಾದಾಗಿನಿಂದ ಪ್ರಯಾಣಿಕರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಕಳೆದ ವರ್ಷ ನವರಾತ್ರಿ ಸಂದರ್ಭ 4.84 ಕೋಟಿಯಷ್ಟು ಮಂದಿ (ಟಿಕೆಟ್‌ ಆಧಾರದಲ್ಲಿ) ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ರಾಜ್ಯದ ನಾನಾ ಮೂಲೆಗಳಿಂದ ಸಾಂಸ್ಕೃತಿಕ ನಗರಿಗೆ ಪ್ರಯಾಣಿಸಿ ದಾಖಲೆ ಬರೆದಿದ್ದರು. ಇದರಲ್ಲಿ ಬೆಂಗಳೂರು–ಮೈಸೂರು ನಡುವಿನ ಓಡಾಟವೇ ಹೆಚ್ಚಿದೆ. ಈ ವರ್ಷ 11 ದಿನಗಳ ಉತ್ಸವದಲ್ಲಿ ಒಟ್ಟು ಪ್ರಯಾಣಿಕರ ಸಂಖ್ಯೆ 5 ಕೋಟಿ ದಾಟುವ ನಿರೀಕ್ಷೆ ಇದೆ.

‘ದಸರೆಗೆ ಅಗತ್ಯವಾದಷ್ಟು ಸಂಖ್ಯೆಯಲ್ಲಿ ಹೆಚ್ಚುವರಿ ಬಸ್ ಸೌಲಭ್ಯಕ್ಕೆ ಈಗಾಗಲೇ ಯೋಜಿಸಿದ್ದು, ಮೈಸೂರು ಘಟಕದಿಂದ 350 ಹಾಗೂ ಬೆಂಗಳೂರು ಘಟಕದಿಂದ 250 ಸೇರಿದಂತೆ ಒಟ್ಟು 600 ಬಸ್‌ಗಳನ್ನು ಹೆಚ್ಚುವರಿಯಾಗಿ ಎರವಲು ಪಡೆಯಲಾಗುತ್ತಿದೆ. ಸೆ. 25ರಿಂದ ಈ ಹೆಚ್ಚುವರಿ ಸೇವೆ ಲಭ್ಯವಾಗಲಿದ್ದು, ಅಕ್ಟೋಬರ್‌ 3ರವರೆಗೂ ಇರಲಿದೆ’ ಎಂದು ಕೆಎಸ್‌ಆರ್‌ಟಿಸಿ ಮೈಸೂರು ಗ್ರಾಮಾಂತರ ವಿಭಾಗದ ಸಂಚಾರ ನಿಯಂತ್ರಣಾಧಿಕಾರಿ ಬಿ. ಶ್ರೀನಿವಾಸ್‌ ತಿಳಿಸಿದರು.

ಪ್ರಸ್ತುತ ಬೆಂಗಳೂರು–ಮೈಸೂರು ನಡುವೆ 270 ಬಸ್‌ಗಳು ದಿನಕ್ಕೆ ತಲಾ ಎರಡು ಟ್ರಿಪ್‌ನಂತೆ ಸಂಚರಿಸುತ್ತಿವೆ. ಇದರೊಟ್ಟಿಗೆ ಇನ್ನೂ 150 ಬಸ್‌ಗಳು ಈ ಮಾರ್ಗದಲ್ಲಿ ಹೆಚ್ಚುವರಿಯಾಗಿ ಓಡಲಿವೆ. ಜೊತೆಗೆ ಹಾಸನ, ಚಾಮರಾಜನಗರ, ಮಂಡ್ಯ ಸೇರಿದಂತೆ ವಿವಿಧ ಜಿಲ್ಲಾ ಕೇಂದ್ರಗಳಿಗೂ ಬಸ್ ಸೇವೆ ವಿಸ್ತರಣೆಗೊಳ್ಳುತ್ತಿದೆ.

ದಸರೆಯ ಸಂದರ್ಭ ಹೊರ ಜಿಲ್ಲೆಗಳ ಪ್ರವಾಸಿಗರಿಗಾಗಿ ಜಲದರ್ಶಿನಿ, ಗಿರಿದರ್ಶಿನಿ, ದೇವ ದರ್ಶಿನಿ ಎಂಬ ವಿಶೇಷ ಟೂರ್‌ ಪ್ಯಾಕೇಜ್‌ಗಳಿದ್ದು, ಸುತ್ತಲಿನ ಪ್ರವಾಸಿ ತಾಣಗಳಿಗೆ ಜನರನ್ನು ಕರೆದೊಯ್ಯುವ ವ್ಯವಸ್ಥೆಯೂ ಇದೆ.

ಉತ್ತಮ ಆದಾಯದ ನಿರೀಕ್ಷೆ: ಹೆಚ್ಚುವರಿ ಬಸ್ ಸೇವೆಯಿಂದ ಕೆಎಸ್‌ಆರ್‌ಟಿಸಿ ಮೈಸೂರು ಘಟಕವು ಕಳೆದ ವರ್ಷ ₹ 5 ಕೋಟಿಯಷ್ಟು ವರಮಾನ ದಾಖಲಿಸಿತ್ತು. ಈ ವರ್ಷವೂ ಅಷ್ಟೇ ಮೊತ್ತದ ಆದಾಯದ ನಿರೀಕ್ಷೆಯಲ್ಲಿದೆ.

ನಗರ ಸಾರಿಗೆಯೂ ವಿಸ್ತರಣೆ: ದಸರೆ ಸಂದರ್ಭ ಕೆಎಸ್‌ಆರ್‌ಟಿಸಿ ನಗರ ಸಾರಿಗೆ ಘಟಕವೂ 150 ಹೆಚ್ಚುವರಿ ಬಸ್‌ಗಳ ಸೇವೆಯನ್ನು ಒದಗಿಸುತ್ತಿದೆ. ಈ ಪೈಕಿ 60 ಬಸ್‌ಗಳು ನಗರದೊಳಗೆ ಸಂಚರಿಸಲಿವೆ. 50 ಬಸ್‌ಗಳು ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕು ಕೇಂದ್ರಗಳ ನಡುವೆ ಸಂಚಾರ ಕೈಗೊಳ್ಳಲಿವೆ.

ಸೆ. 23ರಿಂದ 27ರವರೆಗೆ ಉತ್ತನಹಳ್ಳಿ ರಿಂಗ್‌ ರಸ್ತೆಯ ಮೈದಾನದಲ್ಲಿ ಯುವ ದಸರಾ ಕಾರ್ಯಕ್ರಮ ನಡೆಯಲಿದ್ದು, ಸಾವಿರಾರು ಮಂದಿ ಪಾಲ್ಗೊಳ್ಳಲಿದ್ದಾರೆ. ಅವರಿಗಾಗಿ ನಗರದಿಂದ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಲಾಗುತ್ತಿದೆ. ಸುಮಾರು 40 ಬಸ್‌ಗಳು ನಗರದಿಂದ
ಉತ್ತನಹಳ್ಳಿಗೆ ಸಂಚಾರ ಕೈಗೊಳ್ಳಲಿವೆ.

ಸೆ. 25ರಿಂದ ಹೆಚ್ಚುವರಿ ಸೇವೆ ಲಭ್ಯ ಪ್ರಯಾಣಿಕರ ಸಂಖ್ಯೆ 5 ಕೋಟಿ ದಾಟುವ ನಿರೀಕ್ಷೆ

ದಸರೆಗೆ ಹೆಚ್ಚುವರಿ ಬಸ್‌ ಸೇವೆಯು ಸೆ. 25ರಿಂದ ಆರಂಭವಾಗಲಿದ್ದು ಅ.3ರವರೆಗೂ ಇರಲಿದೆ. ಪ್ರಯಾಣಿಕರಿಂದ ಬೇಡಿಕೆಗೆ ಅನುಗುಣವಾಗಿ ಬಸ್ ಸೇವೆ ವಿಸ್ತರಿಸಲಾಗುವುದು
ಬಿ. ಶ್ರೀನಿವಾಸ್ ವಿಭಾಗೀಯ ನಿಯಂತ್ರಣಾಧಿಕಾರಿ ಕೆಎಸ್‌ಆರ್‌ಟಿಸಿ
ನಗರ ಸಾರಿಗೆ ನಿಲ್ದಾಣ ತಾತ್ಕಾಲಿಕ ಬಂದ್‌
ದಸರಾ ಅಂಗವಾಗಿ ಅರಮನೆಗೆ ಹೊಂದಿಕೊಂಡಂತೆಯೇ ಇರುವ ನಗರ ಬಸ್ ನಿಲ್ದಾಣವನ್ನು ಸೋಮವಾರದಿಂದ (ಸೆ. 22) ತಾತ್ಕಾಲಿಕವಾಗಿ ಮುಚ್ಚಲಾಗುತ್ತಿದೆ. ಇದರ ಬದಲಿಗೆ ಗಾಂಧಿ ವೃತ್ತ ಡಿ. ಬನುಮಯ್ಯ ಕಾಲೇಜು ರಸ್ತೆ ಮಿರ್ಜಾ ಇಸ್ಲಾಯಿಲ್‌ ರಸ್ತೆ ಬಳಿ ಮೂರು ತಾತ್ಕಾಲಿಕ ನಿಲ್ದಾಣಗಳ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಂದಲೇ ನಗರದ ವಿವಿಧ ಪ್ರದೇಶಗಳಿಗೆ ಬಸ್‌ಗಳು ಸಂಚರಿಸಲಿವೆ. ಅ.2ರವರೆಗೂ ಈ ವ್ಯವಸ್ಥೆ ಜಾರಿಯಲ್ಲಿ ಇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.