ADVERTISEMENT

ಚಾಮುಂಡಿ ಬೆಟ್ಟದಲ್ಲಿ ಭಕ್ತರಿಗೆ ವ್ಯವಸ್ಥೆ ಮಾಡಿ:ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ್

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 4:36 IST
Last Updated 31 ಡಿಸೆಂಬರ್ 2025, 4:36 IST
   

ಮೈಸೂರು: ಹೊಸ ವರ್ಷ ಜ.1ರಂದು ಚಾಮುಂಡಿ ಬೆಟ್ಟಕ್ಕೆ ಹೆಚ್ವಿನ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದ್ದು, ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ್ ರೆಡ್ಡಿ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿ, ‘ಚಾಮುಂಡಿ ಬೆಟ್ಟದಲ್ಲಿ ಜ.2ರಂದು ಲಲಿತಾ ಸಹಸ್ರನಾಮ ಕಾರ್ಯಕ್ರಮ, ಜ.3 ಹಾಗೂ 4ರಂದು ವಾರಾಂತ್ಯವಿದ್ದು, ದರ್ಶನಕ್ಕೆ ಬರುವ ಭಕ್ತಾದಿಗಳು ಹೆಚ್ಚು. ಹೀಗಾಗಿ ನೂಕು ನುಗ್ಗಲು ಉಂಟಾಗದಂತೆ ಸರದಿ ಸಾಲಿನಲ್ಲಿ ತೆರಳಲು ವ್ಯವಸ್ಥೆ ಮಾಡಿ. ಸುಗಮ‌ ವಾಹನ ಸಂಚಾರಕ್ಕೆ ಹಾಗೂ‌ ವಾಹನ ನಿಲುಗಡೆಗೆ ಸಂಬಂಧಿಸಿ ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಿ. ಹೆಚ್ಚಿನ ಜನದಟ್ಟಣೆ ಉಂಟಾದ ಸಂದರ್ಭದಲ್ಲಿ ಗಣ್ಯ ವ್ಯಕ್ತಿಗಳ ವಾಹನಗಳನ್ನೂ ಮಹಿಷಾಸುರ ಪ್ರತಿಮೆ ಬಳಿ ನಿಲ್ಲಿಸಿ ನಂತರ ಬ್ಯಾಟರಿ ಚಾಲಿತ ವಾಹನದ ವ್ಯವಸ್ಥೆ ಕೈಗೊಳ್ಳಿ’ ಎಂದರು.

‘ಆರೋಗ್ಯ ಇಲಾಖೆಯಿಂದ ಎರಡು ಅಂಬ್ಯೂಲೆನ್ಸ್ ನಿಯೋಜಿಸಬೇಕು ಹಾಗೂ ದಾನಿಗಳು ನೀಡುವ ಆಹಾರ ಪದಾರ್ಥಗಳಲ್ಲಿ ದಾಸೋಹ ಭವನದಲ್ಲಿ ಪ್ರಸಾದ ಸಿದ್ಧಪಡಿಸಿದರೂ ಗುಣಮಟ್ಟವನ್ನು ಪರಿಶೀಲಿಸಿ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು’ ಎಂದು ತಿಳಿಸಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್, ಚಾಮುಂಡಿ‌ ಬೆಟ್ಟ ಪ್ರಾಧಿಕಾರದ ಕಾರ್ಯದರ್ಶಿ ರೂಪ, ದೇವಸ್ಥಾನದ ಅರ್ಚಕರಾದ ಶಶಿಶೇಖರ್ ದೀಕ್ಷಿತ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.