ಸಿದ್ದರಾಮಯ್ಯ
ಮೈಸೂರು: ಜಿಲ್ಲೆಯಲ್ಲಿ ಪಶುವೈದ್ಯಕೀಯ ಕಾಲೇಜು ಸ್ಥಾಪಿಸಬೇಕೆಂಬ ಒತ್ತಾಯ ಕೇಳಿಬಂದಿದೆ.
ಮೈಸೂರಿನವರೇ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತವರು ಜಿಲ್ಲೆಗೆ ಈ ‘ಶಾಶ್ವತವಾದ ಕೊಡುಗೆ’ ನೀಡುವಂತೆ ಹಾಗೂ ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಿ ಸ್ಥಾಪನೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.
ಕೋಲಾರದ ಮೂಲದವರಾದ, ಬೆಂಗಳೂರಿನ ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನ ಹಿರಿಯ ಪ್ರಾಧ್ಯಾಪಕ ಪ್ರೊ.ಎಂ. ನಾರಾಯಣಸ್ವಾಮಿ ತ್ಯಾವನಹಳ್ಳಿ ಅವರು ಈ ಬಗ್ಗೆ ಪತ್ರ ಬರೆದು ಗಮನಸೆಳೆದಿದ್ದಾರೆ.
ಮುಖ್ಯಮಂತ್ರಿ ಕಚೇರಿಗೆ ಸಲ್ಲಿಕೆಯಾದ ಈ ಪತ್ರಕ್ಕೆ ಪ್ರೊ.ರಾಜಪ್ಪ ದಳವಾಯಿ, ಬಂಜಗೆರೆ ಜಯಪ್ರಕಾಶ್, ಕೋಟಿಗಾನಹಳ್ಳಿ ರಾಮಯ್ಯ, ಜಯಲಕ್ಷ್ಮೀ ನಾಯಕ, ರಾಮಣ್ಣ ಕೂನಿಕೆರೆ ಮೊದಲಾದ ಚಿಂತಕರು ಸಹಿ ಮಾಡಿದ್ದಾರೆ. ಈಚೆಗೆ ಬೆಂಗಳೂರಿನಲ್ಲಿ ನಡೆದ ಪಶುಪಾಲಕರ ದುಂಡು ಮೇಜಿನ ಸಭೆಯ ಬಳಿಕ ಮುಖ್ಯಮಂತ್ರಿಯವರ ಕಾರ್ಯದರ್ಶಿ ನೆಲ್ಲುಕುಂಟೆ ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಲಾಗಿದೆ.
‘ಪಶುಪಾಲಕ ಸಮುದಾಯದಿಂದ ಬಂದು ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಪಶುವೈದ್ಯ ಕಾಲೇಜು ಸ್ಥಾಪಿಸುವ ಮೂಲಕ ಪಶುವೈದ್ಯಕೀಯ ಮತ್ತು ಪಶುಸಂಗೋಪನೆಯ ದೇಸಿ ಜ್ಞಾನದ ಕಡೆಗೆ ಬೆಳಕು ಚೆಲ್ಲಬೇಕು. ಇದರಿಂದ ಕುರಿ ಮತ್ತು ಮೇಕೆ ಉತ್ಪನ್ನಗಳ ಸದುಪಯೋಗವೂ ಆಗಲಿದೆ’ ಎಂದು ಪತ್ರದಲ್ಲಿ ಪ್ರತಿಪಾದಿಸಲಾಗಿದೆ.
ಏನಿದರ ಮಹತ್ವ?: ‘ಅಮೃತ ಮಹಲ್’, ‘ಹಳ್ಳಿಕಾರ್’, ‘ಮಲೆನಾಡು ಗಿಡ್ಡ’, ‘ಖಿಲಾರಿ’, ‘ದೇವಣಿ’ ಹಾಗೂ ‘ಕೃಷ್ಣಾ’ ನಮ್ಮ ರಾಜ್ಯದ ಹೆಮ್ಮೆಯ ತಳಿಗಳು. ಇವುಗಳಲ್ಲಿ ‘ಅಮೃತಮಹಲ್’ ತಳಿಯ ಮೂಲ ಮೈಸೂರು ಸೀಮೆಯಾಗಿದೆ. ಹಳ್ಳಿಕಾರ್, ಹಾಗಲವಾಡಿ ಮತ್ತು ಚಿತ್ರದುರ್ಗ ತಳಿಗಳಿಂದ ಅಮೃತಮಹಲ್ ತಳಿಯನ್ನು ರೂಪಿಸಲಾಗಿದೆ. ಇದು ಸಾಧ್ಯವಾದದ್ದು 1572–1600ರ ಕಾಲಘಟ್ಟದಲ್ಲಿ. ಇಡೀ ಜಗತ್ತಿನಲ್ಲೇ ಮೊಟ್ಟಮೊದಲ ಬಾರಿಗೆ ‘ಸಂಕರಣ’ದ ಮೂಲಕ ರೂಪಿಸಲಾದ ದನದ ತಳಿ ಇದು ಎಂಬ ಹೆಮ್ಮೆಯೂ ನಾಡಿನದು. ಇಂಗ್ಲೆಂಡ್‌ನ ‘ಶಾರ್ಟ್‌ಹಾರ್ನ್’ ಎಂಬ ಸಂಕರಣ ತಳಿಗಿಂತಲೂ ಮೊದಲೇ ಅಮೃತ ಮಹಲ್ ತಳಿಯನ್ನು ಸಂಕರಣಗೊಳಿಸಲಾಯಿತು. ಈ ತಳಿಗಳ ರಕ್ಷಣೆಗೆ ಕಾವಲುಗಳನ್ನು ಪ್ರಾರಂಭಿಸಲಾಯಿತು’ ಎಂದು ಪತ್ರದಲ್ಲಿ ತಿಳಿಸಲಾಗಿದೆ.
‘ದಿ ಕ್ಯಾಪಿಟಲ್ ಆಫ್ ಮೈಸೂರು ಸ್ಟೇಟ್’ ಎಂಬ ಕೃತಿಯನ್ನು 1985 ಹಾಗೂ 1912ರಲ್ಲಿ ಭಾರತ ಸರ್ಕಾರದಿಂದ ಪ್ರಕಟಿಸಲಾಗಿದೆ. ಕೃಷ್ಣಸ್ವಾಮಿ ಅಯ್ಯಂಗಾರ್ ಹಾಗೂ ಬ್ರಿಟಿಷ್ ಅಧಿಕಾರಿಯಾಗಿದ್ದ ಎಚ್.ಓ. ಪೀಸೆ ಬರೆದಿರುವ ಕೃತಿ ಇದು. ಇದನ್ನು 2012ರಲ್ಲಿ ಬಂಜಗೆರೆ ಜಯಪ್ರಕಾಶ್ ‘ಮೈಸೂರು ಸಂಸ್ಥಾನದ ದನದ ತಳಿಗಳು’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಮೈಸೂರು ಭಾಗದಲ್ಲಿ ಮಹದೇಶ್ವರ ಬೆಟ್ಟದ ದನಗಳು ಕೂಡ ನಾಡಿನ ಪಶುಸಂಪತ್ತಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ’ ಎಂದು ಆ ಕೃತಿಯಲ್ಲಿ ವಿವರಿಸಲಾಗಿದೆ’ ಎಂದು ನೆನಪಿಸಲಾಗಿದೆ.
‘ಬೆಣ್ಣೆ ಚಾವಡಿ’ ಇಲಾಖೆ ಎಂಬ ಹೆಸರಿನಿಂದ ಕರೆಯಲಾಗುತ್ತಿದ್ದ ಇಲಾಖೆಯನ್ನು ನಂತರ ‘ಅಮೃತ ಮಹಲ್ ಇಲಾಖೆ’ ಎಂದು ಕರೆಯಲಾಯಿತು. ವಿಜಯನಗರದ ಅರಸರಿಂದ ಹಿಡಿದು ಮೈಸೂರು ಅರಸರವರೆಗೂ ಪೋಷಿಸಿಕೊಂಡ ಬಂದ ತಳಿಯೆಂದರೆ ಅಮೃತಮಹಲ್. ಯುದ್ಧ ಸಾಮಗ್ರಿ ಸಾಗಣೆಗೆ ಅಮೃತ ಮಹಲ್ ದನಗಳನ್ನು ಬಳಸಲಾಗಿದೆ. ಹೈದರಾಬಾದ್‌ನ ನಿಜಾಮನ 3ಸಾವಿರ ಸೈನಿಕರನ್ನು ಮೈಸೂರು ಅರಸರ ಸೈನ್ಯದ 250 ಅಮೃತಮಹಲ್ ತಳಿಯ ಹೋರಿಗಳು ಹಿಮ್ಮೆಟ್ಟಿಸಿದ ಚಾರಿತ್ರಿಕ ದಾಖಲೆಗಳಿವೆ’ ಎನ್ನುತ್ತಾರೆ ಪ್ರೊ.ಎಂ. ನಾರಾಯಣಸ್ವಾಮಿ.
ತಳಿಗಳ ಸಂರಕ್ಷಣೆಗಾಗಿ...
‘ಮೈಸೂರು ಚಾಮರಾಜನಗರ ಮಂಡ್ಯ ತುಮಕೂರು ಹಾಸನ ಚಿಕ್ಕಮಗಳೂರು ಚಿತ್ರದುರ್ಗ ಕೋಲಾರ ಚಿಕ್ಕಬಳ್ಳಾಪುರ ಮೊದಲಾದ ಜಿಲ್ಲೆಗಳಲ್ಲಿ ‘ಅಮೃತಮಹಲ್’ ದನಗಳಿವೆ. ಇವುಗಳ ಸಂಖ್ಯೆ ಒಂದು ಲಕ್ಷಕ್ಷಿಂತಲೂ ಕಡಿಮೆ ಇದೆ. ಹೀಗಾಗಿ ಇವುಗಳನ್ನು ಸಂರಕ್ಷಿಸಬೇಕಾಗಿದೆ. ಜೊತೆಗೆ ಈ ಭಾಗದ ಮತ್ತೊಂದು ತಳಿಯಾದ ‘ಬಂಡೂರು’ ಕುರಿ ತಳಿಯನ್ನೂ ಸಂರಕ್ಷಿಸಬೇಕಾಗಿದೆ’ ಎಂದು ಪತ್ರದಲ್ಲಿ ಪ್ರತಿಪಾದಿಸಲಾಗಿದೆ. ‘ಈ ಭಾಗದಲ್ಲಿ ರೈತರ ಉಪಯೋಗಕ್ಕಾಗಿ ಪಶುವೈದ್ಯಕೀಯ–ಪಶುಸಂಗೋಪನೆಯ ಸಂಶೋಧನೆಗಾಗಿ ವಿಸ್ತರಣೆಗೆ ಚಟುವಟಿಕೆಗಳಿಗಾಗಿ ವಿದ್ಯಾಭ್ಯಾಸಕ್ಕಾಗಿ ಮೈಸೂರಿನಲ್ಲಿ ಪಶುವೈದ್ಯಕೀಯ ಕಾಲೇಜು ಸ್ಥಾಪನೆ ಅಗತ್ಯವಾಗಿದೆ. ಇದರಿಂದ ಪಶುವೈದ್ಯಕೀಯ ವಿಜ್ಞಾನ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಬಹುದಾಗಿದೆ. ನೆರೆಯ ಜಿಲ್ಲೆಯ ವಿದ್ಯಾರ್ಥಿಗಳು ಪಶುವೈದ್ಯಕೀಯ ಶಿಕ್ಷಣದ ಕಡೆಗೆ ಆಕರ್ಷಿತರಾಗುತ್ತಾರೆ. ಆದ್ದರಿಂದ ಚಾರಿತ್ರಿಕ ನಡೆಯಾಗಿ ಈ ಕ್ರಮ ಕೈಗೊಳ್ಳಬೇಕು’ ಎಂದು ಚಿಂತಕರು ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತವರು ಜಿಲ್ಲೆಯಲ್ಲಿ ಕೃಷಿ ಸಂಬಂಧಿತವಾದ ಈ ವಿ.ವಿ ಸ್ಥಾಪಿಸಿ ಕೊಡುಗೆ ನೀಡಬೇಕೆಂಬ ಆಶಯ ನಮ್ಮದಾಗಿದೆ. ಇದರಿಂದ ಬಹಳ ಅನುಕೂಲವಾಗಲಿದೆ ಪ್ರೊ.ಎಂ. ನಾರಾಯಣಸ್ವಾಮಿ ತ್ಯಾವನಹಳ್ಳಿ ಹಿರಿಯ ಪ್ರಾಧ್ಯಾಪಕ ಪಶುವೈದ್ಯಕೀಯ ಕಾಲೇಜು ಹೆಬ್ಬಾಳ ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.