ADVERTISEMENT

ಪ್ರತಾಪ ಸಿಂಹ: ಆಗ ‘ಅಚ್ಚರಿಯ ಅಭ್ಯರ್ಥಿ’, ಈಗ ಅಚ್ಚರಿಯ ನಿರಾಸೆ

ಟಿಕೆಟ್ ತಪ್ಪಲು ಹಲವು ಕಾರಣ, ಮುಖಂಡರೊಂದಿಗೆ ಮುನಿಸು ಮುಳು

ಎಂ.ಮಹೇಶ
Published 14 ಮಾರ್ಚ್ 2024, 6:03 IST
Last Updated 14 ಮಾರ್ಚ್ 2024, 6:03 IST
ಪ್ರತಾಪ ಸಿಂಹ
ಪ್ರತಾಪ ಸಿಂಹ   

ಮೈಸೂರು: 2014ರಲ್ಲಿ ‘ಅಚ್ಚರಿಯ ಅಭ್ಯರ್ಥಿ’ಯಾಗಿಯೇ ರಾಜಕಾರಣಕ್ಕೆ ಬಂದು, ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಿಂದ ಸತತ ಎರಡು ಬಾರಿಗೆ ಸಂಸದರಾಗಿ, ಮೂರನೇ ಬಾರಿಗೆ ಟಿಕೆಟ್‌ ನಿರೀಕ್ಷೆಯಲ್ಲಿದ್ದ ಪ್ರತಾಪ ಸಿಂಹ ಅವರಿಗೆ ಈಗ ‘ಅಚ್ಚರಿಯ ನಿರಾಸೆ’ಯಾಗಿದೆ.

‘ಸಂಸತ್ತಿನಲ್ಲಿ ಭದ್ರತಾ ಲೋಪ ಪ್ರಕರಣದ ಆರೋಪಿ ಮೈಸೂರಿನ ಡಿ.ಮನೋರಂಜನ್ ಅವರಿಗೆ ಪಾಸ್‌ಗೆ ಶಿಫಾರಸು ಮಾಡಿದ್ದ ಪ್ರಕರಣ ದೇಶದಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಕೇಂದ್ರ ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರವನ್ನೂ ಉಂಟು ಮಾಡಿತ್ತು. ಅದನ್ನು ಚುನಾವಣೆಯಲ್ಲಿ ಕಾಂಗ್ರೆಸ್‌ ಮುಂದಿಟ್ಟು ದೊಡ್ಡ ಮಟ್ಟದಲ್ಲಿ ವಾಗ್ದಾಳಿ ನಡೆಸಬಹುದು; ಪಕ್ಷಕ್ಕೆ ರಾಷ್ಟ್ರ ಮಟ್ಟದಲ್ಲಿ ಮುಜುಗರ ಉಂಟಾಗಬಹುದು ಎಂಬ ಕಾರಣದಿಂದ ‌ಅವರಿಗೆ ಟಿಕೆಟ್‌ ತಪ್ಪಿಸಲಾಗಿದೆ’ ಎಂದು ವಿಶ್ಲೇಷಿಸಲಾಗುತ್ತಿದೆ.

ಅವರ ಬಗ್ಗೆ ಸ್ಥಳೀಯ ನಾಯಕರಲ್ಲೇ ತೀವ್ರ ವಿರೋಧವಿತ್ತು. ಮಹಿಷ ದಸರಾ ಸಂದರ್ಭದಲ್ಲಿ ನೀಡಿದ್ದ ಹೇಳಿಕೆಗಳೂ ಸೇರಿದಂತೆ ಕೆಲವು ವಿವಾದಗಳಿಗೂ ಕಾರಣವಾಗಿದ್ದರು. ಕ್ಷೇತ್ರದ ನಾಯಕರೊಂದಿಗೆ ಸಮನ್ವಯ ಸಾಧಿಸುವಲ್ಲಿ ವಿಫಲವಾಗಿದ್ದರು.

ADVERTISEMENT

2023ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ವಿ.ಸೋಮಣ್ಣ ಅವರು ಸ್ಪರ್ಧಿಸಿದ್ದ ವರುಣ ಕ್ಷೇತ್ರ ಹೊರತುಪಡಿಸಿದರೆ ಇತರೆಡೆ ಪ್ರಚಾರಕ್ಕೆ ಹೆಚ್ಚು ಒತ್ತು ನೀಡದೇ ಇದ್ದುದು, ಸೋತವರಲ್ಲಿ ಅಸಮಾಧಾನ ಮೂಡಿಸಿತ್ತು. ಬಿ.ಎಸ್.ಯಡಿಯೂರಪ್ಪ ಅವರಲ್ಲೂ ಅಸಮಾಧಾನ ತಂದಿತ್ತು.

‘ಕಾರ್ಯಕರ್ತರೊಂದಿಗೆ ಉತ್ತಮ ಒಡನಾಟ ಹೊಂದಿಲ್ಲ’ ಎಂಬ ಮಾತುಗಳೂ ಕೇಳಿಬಂದಿದ್ದವು. ಈ ಭಾಗದ ನಾಯಕರಾದ ಮಾಜಿ ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಅಪ್ಪಚ್ಚು ರಂಜನ್‌, ಸಿ.ಎಚ್. ವಿಜಯಶಂಕರ್‌ ಅವರೊಂದಿಗೆ ಶೀತಲಸಮರ ನಡೆದೇ ಇತ್ತು. ‘ಮುಖಂಡರಿಂದ ತೀವ್ರ ವಿರೋಧವಿದೆ’ ಎಂಬ ಸಂಗತಿಯನ್ನು ಹೈಕಮಾಂಡ್‌ಗೆ ತಲುಪಿಸುವ ಕೆಲಸವನ್ನು ಪಕ್ಷದ ಮಟ್ಟದಲ್ಲೇ ಮಾಡಲಾಗಿತ್ತು.

‘ಎಲ್ಲವನ್ನೂ ನಾನೇ ಮಾಡಿದ್ದು’ ಎಂಬ ಆತ್ಮವಿಶ್ವಾಸದ ಮಾತುಗಳು ಹಾಗೂ ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇದ್ದುದು ಅವರಿಗೆ ಮುಳುವಾಗಿ ಪರಿಣಮಿಸಿದೆ. ವೈಯಕ್ತಿಕ ವರ್ಚಸ್ಸಿಗೆ ನೀಡಿದಷ್ಟು ಒತ್ತನ್ನು ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಕೊಡಲಿಲ್ಲ’ ಎಂಬ ಅಸಮಾಧಾನವೂ ಅವರಿಗೆ ಟಿಕೆಟ್ ತಪ್ಪಿಸಿದೆ.

‘ತಳಮಟ್ಟದ, ಗ್ರಾಮಾಂತರ ಕಾರ್ಯಕರ್ತರೊಂದಿಗೆ ಹೆಚ್ಚಿನ ಒಡನಾಟ ಹೊಂದಿರದೇ ಇದ್ದುದು, ಸ್ಥಳೀಯ ಬಿಜೆಪಿ ಮುಖಂಡರು ವಿಶ್ವಾಸ ಕಳೆದುಕೊಳ್ಳುವಂತೆ ಮಾಡಿತ್ತು. ಅವರದ್ದೇ ಪಕ್ಷದ ಮಹಾನಗರಪಾಲಿಕೆ ಸದಸ್ಯರೊಂದಿಗೂ ಉತ್ತಮ ಬಾಂಧವ್ಯ ಹೊಂದಿರಲಿಲ್ಲ. ರಾಜಕಾರಣಿಯ ಪ್ರಬುದ್ಧತೆ; ವಿನಯ ಇರಲಿಲ್ಲ ಎನ್ನುವುದು ವ್ಯತಿರಿಕ್ತ ಪರಿಣಾಮ ಬೀರಿದೆ’ ಎಂದು ಪಕ್ಷದ ಮುಖಂಡರು ಹೇಳುತ್ತಾರೆ.

‘ಸಹೋದರ ವಿಕ್ರಂ ಸಿಂಹ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿ ಮರ ಕಡಿದ ಪ್ರಕರಣ ವಿವಾದವಾಗಿತ್ತು. ಅವರ ತಮ್ಮನ ವಿರುದ್ಧ ಮೊಕದ್ದಮೆಯೂ ದಾಖಲಾಗಿತ್ತು; ಬಂಧನವೂ ಆಗಿತ್ತು. ಇದೂ ಕೂಡ ಪರಿಣಾಮ ಬೀರಿದೆ’ ಎನ್ನಲಾಗುತ್ತಿದೆ.

‘ಮೈಸೂರು ರಾಜವಂಶಸ್ಥರ ಕೊಡುಗೆಗಳನ್ನು ಇಲ್ಲಿನ ಜನ ಇಂದಿಗೂ ಸ್ಮರಿಸುತ್ತಾರೆ. ಈ ಭಾವನೆಯನ್ನು ರಾಜಕೀಯ ಲಾಭವನ್ನಾಗಿ ಮಾಡಿಕೊಳ್ಳುವುದು ನಾಯಕರ ಉದ್ದೇಶ. ಇದು ಪ್ರತಾಪಗೆ ಮುಳುವಾಗಿ ಪರಿಣಮಿಸಿದೆ’ ಎನ್ನಲಾಗಿದೆ.

‘ಬಿಜೆಪಿಯ ಹೊಸ ಪ್ರಯೋಗದಿಂದ ಮೈಸೂರು–ಕೊಡಗು ಕ್ಷೇತ್ರದೊಂದಿಗೆ ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳಲ್ಲೂ ಪಕ್ಷಕ್ಕೆ ಅನುಕೂಲವಾಗಬಹುದು’ ಎಂಬುದು ಬಿಜೆಪಿ ವರಿಷ್ಠರ ಲೆಕ್ಕಾಚಾರ. ಅದನ್ನೇ ಪಕ್ಷದ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರು ಹೈಕಮಾಂಡ್‌ ಮಟ್ಟದಲ್ಲಿ ಮನವರಿಕೆ ಮಾಡಿಕೊಟ್ಟಿದ್ದರು.

‘ರಾಜವಂಶಸ್ಥ ಸ್ಪರ್ಧಿಸಿದರೆ ಹಳೆಯ ಮೈಸೂರು ಭಾಗದಲ್ಲಿ ಸಂಚಲನ ಉಂಟಾಗಲಿದೆ. ಜಾತ್ಯತೀತವಾಗಿ ಎಲ್ಲ ವರ್ಗದವರಿಂದಲೂ ಬೆಂಬಲ ದೊರೆಯುತ್ತದೆ. ಅದರಿಂದ ಪಕ್ಷಕ್ಕೆ ಒಳ್ಳೆಯ ಇಮೇಜ್ ಸೃಷ್ಟಿಯಾಗುತ್ತದೆ. ಇದೆಲ್ಲವನ್ನೂ ವರಿಷ್ಠರು ಪರಿಗಣಿಸಿದ್ದಾರೆ’ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದರು.

****

ಯದುವೀರ್ ಅವರಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದೇನೆ. ದೇಶದಕ್ಕಾಗಿ ಹಾಗೂ ಮೋದಿಗಾಗಿ ಇನ್ನೆರಡು ದಿನಗಳಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳುತ್ತೇನೆ

-ಪ್ರತಾಪ ಸಿಂಹ, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.