ಆರೋಗ್ಯ ಇಲಾಖೆಯಿಂದ ಕಾರ್ಯಕ್ರಮ | ಸಚಿವ ಸಂಪುಟ ಸಭೆಯಲ್ಲಾದ ನಿರ್ಣಯದಂತೆ ಕ್ರಮ ಅನುಷ್ಠಾನಕ್ಕೆ ₹ 45 ಕೋಟಿ ವೆಚ್ಚ
ಮೈಸೂರು: ಕಣ್ಣಿನ ಸಮಗ್ರ ತಪಾಸಣೆ, ಶಸ್ತ್ರಚಿಕಿತ್ಸೆ ಹಾಗೂ ಕನ್ನಡಕಗಳ ವಿತರಣೆ ಸೇವೆಯನ್ನು ಉಚಿತವಾಗಿ ಒದಗಿಸುವ ‘ಆಶಾಕಿರಣ’ ಯೋಜನೆಯನ್ನು ರಾಜ್ಯದಾದ್ಯಂತ ವಿಸ್ತರಿಸಲಾಗಿದ್ದು, ಎಲ್ಲ ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲೂ ‘ಶಾಶ್ವತ ದೃಷ್ಟಿ ಪರೀಕ್ಷಾ ಕೇಂದ್ರ’ಗಳನ್ನು ಸ್ಥಾಪಿಸಲಾಗುತ್ತಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಯೋಜನೆ ಅನುಷ್ಠಾನ ಮಾಡಲಾಗುತ್ತಿದ್ದು, ದೃಷ್ಟಿ ದೋಷ ನಿವಾರಣೆಯ ಪ್ರಮುಖ ಆಶಯ ಹೊಂದಲಾಗಿದೆ.
ಯೋಜನೆಯನ್ನು ಪ್ರಾಯೋಗಿಕವಾಗಿ ಮೊದಲ ಹಂತದಲ್ಲಿ ಚಿಕ್ಕಬಳ್ಳಾಪುರ, ಕಲಬುರಗಿ, ಹಾವೇರಿ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗಿತ್ತು. ಅಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ಇತರ ಜಿಲ್ಲೆಗಳಲ್ಲೂ ಅನುಷ್ಠಾನಗೊಳಿಸಲಾಗುತ್ತಿದೆ.
ಮೊದಲಿಗೆ, ಹಂತ–ಹಂತವಾಗಿ ಇತರ ಜಿಲ್ಲೆಗಳಿಗೆ ವಿಸ್ತರಿಸುವ ಉದ್ದೇಶ ಹೊಂದಲಾಗಿತ್ತು. ಪ್ರತಿ ವರ್ಷ ನಾಲ್ಕು ಜಿಲ್ಲೆಗಳ ಸೇರ್ಪಡೆಗೆ ಯೋಜಿಸಲಾಗಿತ್ತು. ಹೀಗೆ ನಡೆದರೆ, ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕಾರ್ಯಕ್ರಮ ಅನುಷ್ಠಾನಗೊಳಿಸಲು 7 ವರ್ಷಗಳು ಬೇಕಾಗುತ್ತವೆ. ಆದ್ದರಿಂದ, ಎಲ್ಲ ಕಡೆಯೂ ಸೇವೆ ಲಭ್ಯವಾಗವಂತೆ ಮಾಡಬೇಕೆಂದು ಏ.24ರಂದು ಚಾಮರಾಜನಗರ ಜಿಲ್ಲೆಯ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಅದರಂತೆ, ಎಲ್ಲ ಜಿಲ್ಲೆಗಳಿಗೂ ಅನುದಾನ ಕಲ್ಪಿಸಲಾಗುತ್ತಿದೆ. ಒಟ್ಟು ₹ 45 ಕೋಟಿ ವೆಚ್ಚವಾಗಲಿದ್ದು, ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಮನೆಗಳಿಗೆ ತೆರಳಿ:
ಆಶಾ ಕಾರ್ಯಕರ್ತೆಯರು ಅಥವಾ ಆರೋಗ್ಯ ಇಲಾಖೆಯ ಸಿಬ್ಬಂದಿಯ ಮೂಲಕ ಮನೆಗಳಿಗೆ ತೆರಳಿ ಪ್ರಾಥಮಿಕ ಪರೀಕ್ಷೆ ನಡೆಸಲಾಗುತ್ತದೆ. ದ್ವಿತೀಯ ಹಂತದ ಪರೀಕ್ಷೆ ಹಾಗೂ ಶಸ್ತ್ರಚಿಕಿತ್ಸೆಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಸುವುದು ಯೋಜನೆಯ ಸ್ವರೂಪವಾಗಿದೆ. ನಿಯಮಿತವಾಗಿ ತಪಾಸಣೆಗೆ ಒಳಗಾಗಲೂ ಅವಕಾಶವಿದೆ.
ವಯಸ್ಸಾಗುತ್ತಿದ್ದಂತೆಯೇ ವಿವಿಧ ಕಾರಣಗಳಿಂದಾಗಿ ದೃಷ್ಟಿದೋಷದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದನ್ನು ನಿರ್ಲಕ್ಷಿಸಿದರೆ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಇದನ್ನು ತಡೆಯಲು ಹಾಗೂ ತಪಾಸಣೆ, ಚಿಕಿತ್ಸೆಯ ಸೌಲಭ್ಯ ಸುಲಭವಾಗಿ ಲಭ್ಯವಾಗಲೆಂದು ಆಶಾಕಿರಣ ಯೋಜನೆ ಜಾರಿಗೊಳಿಸಲಾಗಿದೆ. ಅಗತ್ಯಬಿದ್ದರೆ ಕನ್ನಡಕಗಳು ಅಥವಾ ಕಾಂಟಾಕ್ಟ್ ಲೆನ್ಸ್‌ಗಳನ್ನು ಉಚಿತವಾಗಿ ಒದಗಿಸಲಾಗುತ್ತದೆ. ಪ್ರಸಕ್ತ ಸಾಲಿನಲ್ಲಿ ಒಂದು ಕೋಟಿಗೂ ಹೆಚ್ಚಿನ ತಪಾಸಣೆ ನಡೆಸಲು ಉದ್ದೇಶಿಸಲಾಗಿದೆ.
ಅನುದಾನ:
‘ಆಶಾಕಿರಣ ಯೋಜನೆಯಡಿ ಈಗ ಎಲ್ಲ ತಾಲ್ಲೂಕು ಕೇಂದ್ರಗಳ ಸಾರ್ವಜನಿಕ ಆಸ್ಪತ್ರೆಗಳಲ್ಲೂ ‘ಶಾಶ್ವತ ದೃಷ್ಟಿ ಪರೀಕ್ಷಾ ಕೇಂದ್ರ’ಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 17 ಕೇಂದ್ರಗಳಿದ್ದು, ಅಲ್ಲಿ ನೇತ್ರ ತಪಾಸಣೆ ಮೊದಲಾದ ಸೇವೆ ಒದಗಿಸಲಾಗುತ್ತಿದೆ. ಪ್ರತಿ ಕೇಂದ್ರಗಳಿಗೆ ಸಲಕರಣೆಗಳಿಗೆಂದೇ ಸರಾಸರಿ ₹ 1.50 ಲಕ್ಷ ಅನುದಾನ ನೀಡಲಾಗಿದೆ. ಎಚ್.ಡಿ. ಕೋಟೆಗೆ ವಿಶೇಷವಾಗಿ ₹ 9 ಲಕ್ಷ ಬಿಡುಗಡೆ ಮಾಡಲಾಗಿದೆ’ ಎಂದು ಡಿಎಚ್‌ಒ ಡಾ.ಪಿ.ಸಿ. ಕುಮಾರಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ರಾಷ್ಟ್ರೀಯ ಅಂಧತ್ವ ಮತ್ತು ದೃಷ್ಟಿ ಮಾಂದ್ಯತೆ ನಿಯಂತ್ರಣ ಕಾರ್ಯಕ್ರಮದ ಭಾಗವಾಗಿ, ದೃಷ್ಟಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಶಾಲಾ ಮಕ್ಕಳನ್ನೂ ತಪಾಸಣೆ ಮಾಡಿ, ಉಚಿತವಾಗಿ ಕನ್ನಡಗಳನ್ನು ವಿತರಿಸಲಾಗುವುದು. ಇದಕ್ಕಾಗಿ ತಾಂತ್ರಿಕ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ಅಗತ್ಯವಿರುವವರು ಯೋಜನೆಯ ಪ್ರಯೋಜನವನ್ನು ಉಚಿತವಾಗಿ ಪಡೆದುಕೊಳ್ಳಬಹುದು’ ಎನ್ನುತ್ತಾರೆ ಅವರು.
ಜನರಿಗೆ ನೇತ್ರ ಆರೈಕೆ ಸೇವೆಯು ಮನೆ ಬಾಗಿಲಿನಲ್ಲಿ ಸಿಗಬೇಕೆಂಬ ಆಶಯದಿಂದ ‘ಆಶಾಕಿರಣ’ ಯೋಜನೆ ಜಾರಿಗೊಳಿಸಲಾಗಿದೆ. ಕಣ್ಣಿನ ಪೊರೆಯ ಸಮಸ್ಯೆಯಿಂದ ಬಳಲುತ್ತಿದ್ದರೆ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆದಿನೇಶ್ ಗುಂಡೂರಾವ್ ಆರೋಗ್ಯ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.