ADVERTISEMENT

ಕೆಆರ್‌ಎಸ್‌: ಸರ್ಕಾರ ಎಲ್ಲವನ್ನೂ ಗಮನಿಸುತ್ತಿದೆ-ನಳಿನ್‌ ಕುಮಾರ್‌ ಕಟೀಲ್

​ಪ್ರಜಾವಾಣಿ ವಾರ್ತೆ
Published 14 ಜುಲೈ 2021, 9:42 IST
Last Updated 14 ಜುಲೈ 2021, 9:42 IST
ನಳಿನ್‌ ಕುಮಾರ್ ಕಟೀಲ್‌
ನಳಿನ್‌ ಕುಮಾರ್ ಕಟೀಲ್‌   

ಮೈಸೂರು: ‘ಕೆಆರ್‌ಎಸ್‌ ಅಣೆಕಟ್ಟೆ ವಿಚಾರದಲ್ಲಿ ರಾಜಕೀಯ ಮುಖಂಡರು ವೈಯಕ್ತಿಕವಾಗಿ ಮಾತನಾಡುವುದು ಸರಿಯಲ್ಲ. ಅಲ್ಲಿ ನಡೆಯುತ್ತಿರುವ ಎಲ್ಲ ಬೆಳವಣಿಗೆಗಳನ್ನು ಸರ್ಕಾರ ಗಮನಿಸುತ್ತಿದ್ದು, ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಬುಧವಾರ ಇಲ್ಲಿ ಮಾಧ್ಯಮದವರಿಗೆ ತಿಳಿಸಿದರು.

ಕೆಆರ್‌ಎಸ್‌ ಪರಿಶೀಲನೆಗೆ ತಜ್ಞರ ತಂಡ

‘ಕೆಆರ್‌ಎಸ್‌ ಅಣೆಕಟ್ಟೆಯಲ್ಲಿ ಬಿರುಕು ಬಿಟ್ಟಿದೆಯೇ ಎಂಬುದನ್ನು ಪರಿಶೀಲಿಸಲು ತಜ್ಞರ ತಂಡವನ್ನು ಕಳುಹಿಸಿಕೊಡಲಾಗುವುದು’ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದರು.

ADVERTISEMENT

ಮೈಸೂರಿನಲ್ಲಿ ಬುಧವಾರ ಮಾಧ್ಯಮದವರ ಜತೆ ಮಾತನಾಡಿ, ‘ನಾನು ಮಂಡ್ಯಕ್ಕೆ ಭೇಟಿ ಕೊಡಲಿದ್ದು, ಅಲ್ಲಿನ ಜಿಲ್ಲಾಧಿಕಾರಿ ಜತೆ ಈ ಬಗ್ಗೆ ಚರ್ಚಿಸುತ್ತೇನೆ. ಜಿಲ್ಲಾಧಿಕಾರಿ ನೇತೃತ್ವದ ತಜ್ಞರ ತಂಡವನ್ನು ಕಳುಹಿಸಿ ಇಡೀ ಅಣೆಕಟ್ಟೆ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸುತ್ತೇನೆ’ ಎಂದು ಹೇಳಿದರು.

‘ಅಣೆಕಟ್ಟೆ ಬಿರುಕು ಬಿಟ್ಟಿಲ್ಲ ಎಂದು ಈಗಾಗಲೇ ತಜ್ಞರು ವರದಿ ಕೊಟ್ಟಿದ್ದಾರೆ. ಅವರ ಮಾತನ್ನು ನಂಬಬೇಕೇ ಹೋರತು, ಬೇರೆಯವರ ಮಾತನ್ನು ನಂಬಲು ಸಾಧ್ಯವಿಲ್ಲ. ನಾನು, ಗಣಿ ಸಚಿವರೂ ಸೇರಿದಂತೆ ಮಂತ್ರಿಗಳು ಈ ವಿಚಾರದಲ್ಲಿ ಹಲವು ಸಲ ಸ್ಪಷ್ಟನೆ ಕೊಟ್ಟಿದ್ದೇವೆ. ಆದರೂ ಕೆಆರ್‌ಎಸ್‌ ಬಿರುಕಿನ ವಿಚಾರ ಮತ್ತೆ ಮತ್ತೆ ಚರ್ಚೆಗೆ ಬರುತ್ತಿದೆ. ಇದರಿಂದ ಕೆಳಭಾಗದಲ್ಲಿ ವಾಸಿಸುತ್ತಿರುವ ಜನರು, ರೈತರಿಗೆ ಆತಂಕ ಉಂಟಾಗಿದೆ’ ಎಂದರು.

‘ಯಾವುದೇ ಅಕ್ರಮ ಗಣಿಗಾರಿಕೆಗೆ ಈ ಸರ್ಕಾರ ಅವಕಾಶ ಕೊಡುವುದಿಲ್ಲ. ರಾಜ್ಯದಲ್ಲಿ ಅನುಮತಿ ಪಡೆದಿರುವ ಗಣಿಗಾರಿಕೆ ಮಾತ್ರ ನಡೆಯಲಿದೆ. ಆದರೂ ಕೆಆರ್‌ಎಸ್‌ಗೆ ಏನಾದರೂ ತೊಂದರೆ ಆಗುತ್ತದೆ ಎಂಬ ಸಣ್ಣ ಸುಳಿವು ಸಿಕ್ಕರೂ ಬೇಬಿಬೆಟ್ಟದಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ. ಗಣಿಗಾರಿಕೆ ನಡೆಸುತ್ತಿರುವವರು ಎಷ್ಟೇ ದೊಡ್ಡ ವ್ಯಕ್ತಿಯೇ ಇರಲಿ, ನಾವು ನಿಲ್ಲಿಸುತ್ತೇವೆ’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.