ಮೈಸೂರು: 'ಸಣ್ಣ ವರ್ತಕರಿಗೆ ಜಿಎಸ್‌ಟಿ ನೋಟಿಸ್ ವಿಚಾರದಲ್ಲಿ ಬಿಜೆಪಿ ನಾಯಕರು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು' ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆಗ್ರಹಿಸಿದರು.
ಇಲ್ಲಿನ ವಾಣಿಜ್ಯ ತೆರಿಗೆ ಇಲಾಖೆ ಕಚೇರಿ ಮುಂಭಾಗ ಮಂಗಳವಾರ ಸುದ್ದಿಗೋಷ್ಢಿ ನಡೆಸಿದ ಅವರು 'ಕಳೆದೊಂದು ವಾರದಿಂದ ನಮ್ಮ ವರ್ತಕರಿಗೆ ನಿರಂತರ ನೋಟಿಸ್ ನೀಡಲಾಗುತ್ತಿದೆ. ಕೆಲವರು ಇದನ್ನೇ ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಮಾನ ಮರ್ಯಾದೆ ಇದ್ದರೆ ಸರಿಯಾಗಿ ಮಾಹಿತಿ ನೀಡಿ' ಎಂದರು.
'ಜಿಎಸ್‌ಟಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ವಾಣಿಜ್ಯ ತೆರಿಗೆ ಇಲಾಖೆಯು ಕೇಂದ್ರದ ನಿಯಮಗಳನ್ನು ಆಧರಿಸಿ ನೋಟಿಸ್ ನೀಡುತ್ತಿದೆ. ಜಿಎಸ್‌ಟಿ ಸೆಕ್ಷನ್ 22 ಪ್ರಕಾರ ಪ್ರತಿ ವರ್ತಕನು ಜಿಎಸ್‌ಟಿಗೆ ನೋಂದಣಿ ಮಾಡಬೇಕು. 40 ಲಕ್ಷ ಆದಾಯ ಮೀರಿದರೆ ತೆರಿಗೆ ವ್ಯಾಪ್ತಿಗೆ ಬರುತ್ತಾರೆ ಎಂದಿದೆ. ಈಗಾಗಲೇ ಸಿಎಂ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ' ಎಂದರು.
'ಇದು ಗಬ್ಬರ್ ಸಿಂಗ್ ಟ್ಯಾಕ್ಸ್ ಎಂಬ ರಾಹುಲ್ ಗಾಂಧಿ ಹೇಳಿಕೆ ನಿಜವಾಗಿದೆ. ಒಂದು ಪದಾರ್ಥಕ್ಕೆ ಆರೇಳು ಬಾರಿ ತೆರಿಗೆ ಬೀಳುತ್ತಿದೆ. ಅಕ್ಕಿ ಬೆಳೆಯುವ ಪ್ರಕ್ರಿಯೆಯಿಂದ ಹಿಡಿದು ಇಡ್ಲಿ ತಯಾರಿಕೆ ವರೆಗೆ ಪ್ರತಿ ಹಂತದಲ್ಲೂ ತೆರಿಗೆ ಹಾಕಲಾಗುತ್ತಿದೆ. ಇದರಿಂದ ಜನರಿಗೆ ತೆರಿಗೆಯು ಹೊರಲಾರದ ಹೊರೆಯಾಗುತ್ತಿದೆ' ಎಂದರು.
'ಜಿಎಸ್‌ಟಿ ನಮ್ಮನ್ನು ಕೊಲ್ಲುತ್ತಿದೆ. ನಿರ್ಮಲಾ ಸೀತಾರಾಮನ್, ಮೋದಿ ಅವರಿಗೆ ಮಾನ ಮರ್ಯಾದೆ ಇದ್ದರೆ ಸ್ಟಷ್ಟೀಕರಣ ಕೊಡಿ. ಸಣ್ಣ ವರ್ತಕರಿಗೆ ತೊಂದರೆ ಕೊಡಬೇಡಿ. ಇದರಲ್ಲಿ ರಾಜ್ಯ ಸರ್ಕಾರದ ಪಾತ್ರ ಏನೂ ಇಲ್ಲ. ಅಧಿಕಾರಿಗಳು, ವರ್ತಕರು ಜನರ ದಾರಿ ತಪ್ಪಿಸಬಾರದು' ಎಂದರು.
'ವರ್ತಕರ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲವಿದೆ. ಏನಿದ್ದರೂ ಕೇಂದ್ರದ ವಿರುದ್ಧ ಹೋರಾಟ ನಡೆಯಲಿ. ಇಡೀ ದೇಶದಲ್ಲಿ ಈ ಸಮಸ್ಯೆ ಇದೆ. ಶೇ 90 ರಷ್ಟು ವರ್ತಕರು ಜಿಎಸ್‌ಟಿ ನೋಂದಣಿ ಮಾಡಿಕೊಂಡಿದ್ದು, ಶೇ 10ರಷ್ಟು ನೋಂದಣಿ ಆಗಿಲ್ಲ. ಅವರಿಗೆ ಮಾತ್ರ ನೋಟಿಸ್ ಬಂದಿದೆ' ಎಂದು ಹೇಳಿದರು.
'ಹಾಲು ಜಿಎಸ್‌ಟಿ ವ್ಯಾಪ್ತಿಗೆ ಬರುವುದಿಲ್ಲ. ಹಾಲು ವರ್ತಕರಿಗೆ ನೋಟಿಸ್ ನೀಡಿಲ್ಲ. ಬಿಜೆಪಿ ನಾಯಕರು ಮಾತೆತ್ತಿದರೆ ಸಿದ್ದರಾಮಯ್ಯ ಮೇಲೆ ಆರೋಪ ಮಾಡುವುದನ್ನು ಬಿಡಿ. ಐಆರ್‌ಎಸ್ ಅಧಿಕಾರಿಗಳು ಅರೆ ಮಾಹಿತಿ ನೀಡಿ ದಿಕ್ಕು ತಪ್ಪಿಸಬೇಡಿ. ಮೀರಾ ಪಂಡಿತ್ ವಿರುದ್ಧ ದೂರು ನೀಡಲಾಗುವುದು' ಎಂದರು.
'ಜನಸಾಮಾನ್ಯರ ಯಾವ ಹೋರಾಟಕ್ಕೂ ನಮ್ಮ ಬೆಂಬಲ ಇದೆ. ಸಿಎಂ ಸದ್ಯದಲ್ಲೇ ಕೇಂದ್ರ ನಾಯಕರನ್ನು ಭೇಟಿ ಮಾಡಲಿದ್ದಾರೆ' ಎಂದರು.
ಮುಡಾ: ಬಿಜೆಪಿ- ಜೆಡಿಎಸ್ ಷಡ್ಯಂತ್ರಕ್ಕೆ ಸೋಲು
'ಮುಡಾ ವಿಚಾರದಲ್ಲಿ ಸಿಎಂ ಹೆಸರಿಗೆ ಮಸಿ ಬಳಿಯಲು ಬಿಜೆಪಿ- ಜೆಡಿಎಸ್ ನಡೆಸಿದ್ದ ಷಡ್ಯಂತ್ರಕ್ಕೆ ಸೋಲಾಗಿದೆ. ಮಾನಸಿಕವಾಗಿ ಪಾರ್ವತಿ ಅವರಿಗೆ ವೇದನೆ ನೀಡಲಾಗಿತ್ತು. ಈಗ ಸತ್ಯಕ್ಕೆ ಜಯ ಸಿಕ್ಕಿದೆ. ಸುಪ್ರೀಂ ಕೋರ್ಟ್ ತೀರ್ಪು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ, ನ್ಯಾಯಾಂಗದ ಮೇಲಿನ ಭರವಸೆ ಹೆಚ್ಚಿಸಿದೆ' ಎಂದು ಲಕ್ಷ್ಮಣ್ ಪ್ರತಿಕ್ರಿಯಿಸಿದರು.
'ಇ.ಡಿ. ಅಧಿಕಾರಿಗಳು ಬಿಜೆಪಿ ಹಾಗೂ ಆರ್‌ಎಸ್‌ಎಸ್ ಏಜೆಂಟರಾಗಿ ಕೆಲಸ ಮಾಡುವುದನ್ನು ಇನ್ನಾದರೂ ಬಿಡಿ. ಹೀಗೆ ಆದರೆ ಕರ್ನಾಟಕದಲ್ಲಿ ಪೊಲೀಸ್ ಸ್ಟೇಷನ್ ಬೇಕಿಲ್ಲ. ಇ.ಡಿ.ಯೇ ಎಲ್ಲ ನೋಡಿಕೊಳ್ಳಲಿದೆ' ಎಂದು ಲೇವಡಿ ಮಾಡಿದರು.
'ಪಾರ್ವತಿ ಅವರ ವಿಚಾರದಲ್ಲಿ ಒಬ್ಬ ಸೈಡ್ ಆ್ಯಕ್ಟರ್ ಅನ್ನು ಎತ್ತಿ ಕಟ್ಟಿ ದೂರು ಕೊಡಿಸಿದ್ದರು. ನ್ಯಾಯಾಲಯ ಛೀಮಾರಿ ಹಾಕಿದೆ. ಇನ್ನಾದರೂ ಬಿಜೆಪಿಯು ಇ.ಡಿ. ಹಾಗೂ ಐ.ಟಿ. ಯಂತಹ ಸಂಸ್ಥೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದನ್ನು ಬಿಡಬೇಕು. ಇ.ಡಿ.ಯನ್ನು ಕೇಂದ್ರ ಸರ್ಕಾರ ಮುಚ್ಚಬೇಕು' ಎಂದು ಆಗ್ರಹಿಸಿದರು.
'ಇ.ಡಿ.ವಿರುದ್ಧ ಕಾಂಗ್ರೆಸ್ ಸದ್ಯದಲ್ಲೇ ರಾಜ್ಯದಾದ್ಯಂತ ಆಂದೋಲನ ಹಮ್ಮಿಕೊಳ್ಳಲಿದೆ' ಎಂದರು.
ಕಾಂಗ್ರೆಸ್ ಜಿಲ್ಲಾ ಗ್ರಾಮಾಂತರ ಸಮಿತಿ ಅಧ್ಯಕ್ಷ ವಿಜಯ್ ಕುಮಾರ್, ಮುಖಂಡರಾದ ಬಿ.ಎಂ. ರಾಮು, ಮಹೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.