
ಎಚ್.ಡಿ.ಕೋಟೆ: ‘ಕ್ಷೇತ್ರ ವ್ಯಾಪ್ತಿಯಲ್ಲಿ ಕೇರಳ ಲಾಟರಿ ಮಾರಾಟ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸೋಮವಾರ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಈ ಹಿಂದೆ ಕೇರಳ ಲಾಟರಿ ಮಾರುತ್ತಿದ್ದ ಕೆಲವರನ್ನು ಬಂಧಿಸಲಾಗಿತ್ತು, ಆದರೆ ಈಗ ಮತ್ತೆ ಅವರೇ ಮಾರುತ್ತಿರುವುದಾಗಿ ನನಗೆ ಮಾಹಿತಿ ಬಂದಿದ್ದು, ಕಾನೂನಿನ ಮೇಲೆ ಭಯವಿಲ್ಲದೇ ಈ ರೀತಿ ಆಗಿದೆ ಎಂದು ಬೇಸರಿಸಿದರು. ಅಲ್ಲದೇ ಕೆಲವು ಗ್ರಾಮದಲ್ಲಿ ಜೂಜಾಡುತ್ತಿರುವ ಬಗ್ಗೆಯೂ ಮಾಹಿತಿ ನೀಡಿದರು.
ಸರ್ಕಲ್ ಇನ್‌ಸ್ಪೆಕ್ಟರ್ ಗಂಗಾಧರ್ ಮಾತನಾಡಿ, ‘ಲಾಟರಿ ಮಾರಾಟ ಮಾಡುವವರನ್ನು ಬಂಧಿಸಿದ ಬಳಿಕ ಅವರಿಗೆ ಠಾಣೆಯ ಜಾಮೀನು ದೊರೆಯುತ್ತದೆ, ನಂತರ ಮಾರುವುದು ಕಂಡುಬಂದರೆ ಅವರಿಗೆ ರೌಡಿಶೀಟರ್ ತೆರೆಯಲಾಗುವುದು. ಅಲ್ಲದೇ ಗಡಿಪಾರಿಗೂ ಅನುಮೋದನೆ ನೀಡುವಂತೆ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ’ ಎಂದರು.
‘ಜೂಜುಕೋರರ ಮಾಹಿತಿ ದೊರೆತರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪ್ರಸಾದ್ ಮಾತನಾಡಿ, ‘ತಾಲ್ಲೂಕಿನಲ್ಲಿ ಕಳೆದ ಸಾಲಿನಲ್ಲಿ 880 ಮಿ.ಮೀ ಮಳೆ ಆಗಬೇಕಿತ್ತು. ಆದರೆ ಅಗತ್ಯಕ್ಕಿಂತ ಹೆಚ್ಚು ಅಂದರೆ 980.7 ಮಿಮೀ ಮಳೆಯಾಗಿದೆ ಎಂದರು.
‘ಬೇರೆ ಕಡೆ ರಸಗೊಬ್ಬರ ಕೊರತೆ ಕಂಡುಬಂದಿದ್ದು, ನಮ್ಮ ತಾಲ್ಲೂಕಿಗೆ 27,615 ಮೆಟ್ರಿಕ್ ಟನ್ ಗೊಬ್ಬರ ಸರಬರಾಜಾಗಿದ್ದು, ರಸಗೊಬ್ಬರ ಸಮಸ್ಯೆ ತಲೆದೋರಿಲ್ಲ’ ಎಂದರು.
ಸಿಡಿಪಿಒ ದೀಪಾ ಮಾತನಾಡಿ, ‘ಸರಗೂರು ಮತ್ತು ಎಚ್.ಡಿ.ಕೋಟೆ ತಾಲ್ಲೂಕುಗಳಲ್ಲಿ ಯೋಜನೆಗೆ 74,614 ಮಂದಿ ನೋಂದಣಿಯಾಗಿದ್ದು, 72,762 ಮಂದಿಗೆ ‘ಗೃಹಲಕ್ಷ್ಮಿ’ ಹಣ ಪಾವತಿಸಲಾಗಿದೆ’ ಎಂದರು.
‘ತಾಲ್ಲೂಕಿನಲ್ಲಿ 69 ಅಂಗನವಾಡಿ ಕಟ್ಟಡಗಳು ದುರಸ್ತಿಗೆ ಬಂದಿದ್ದು, 15 ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. 45 ಕಟ್ಟಡಗಳನ್ನು ಕೆಡವಿ ಹೊಸದಾಗಿ ಕಟ್ಟಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ನೇತ್ರಾವತಿ ಮಾತನಾಡಿ, ‘ತಾಲ್ಲೂಕಿನಲ್ಲಿ 4750 ರೈತರು ಶುಂಠಿಯನ್ನು 3,600 ಹೆಕ್ಟೇರ್‌ನಲ್ಲಿ ಬೆಳೆಯುತ್ತಿದ್ದಾರೆ, 2,100 ಹೆಕ್ಟೇರ್‌ನಲ್ಲಿ ಬಾಳೆ ಬೆಳೆಯುತ್ತಿದ್ದಾರೆ’ ಎಂದರು.
ಅಬಕಾರಿ ನಿರೀಕ್ಷಕ ಶಿವರಾಜು ಮಾತನಾಡಿ, ‘ತಾಲ್ಲೂಕಿನಲ್ಲಿ ಕಳೆದ 10 ವರ್ಷಗಳಲ್ಲಿ ಕಳ್ಳಭಟ್ಟಿ ತಯಾರಿ ನಡೆಯುತ್ತಿತ್ತು, ಈಗ ಅದು ನಿಂತಿದೆ. ಹಾಡಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ’ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್‌ಕುಮಾರ್, ಐಟಿಡಿಪಿ ಅಧಿಕಾರಿ ಮಲ್ಲೇಶ್, ತಹಶೀಲ್ದಾರ್‌ಗಳಾದ ಶ್ರೀನಿವಾಸ್, ಮೋಹನ್ ಕುಮಾರಿ, ಕಾರ್ಯ ನಿರ್ವಹಣಾಧಿಕಾರಿಗಳಾದ ಪ್ರೇಮಕುಮಾರ್, ಧರಣೇಶ್, ಕೆಡಿಪಿ ನಾಮ ನಿರ್ದೇಶಕ ಸದಸ್ಯರಾದ ಗಿರೀಶ್, ಸುರೇಶ್, ಕಾಳಸ್ವಾಮಿ, ಉಪಕಾರಿ, ಬಿಇಒ ರಾಜು ಇದ್ದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆ ಮತ್ತು ಸಿಜೇರಿಯನ್ ಹೆರಿಗೆ ಮಾಡಿಸಲು ₹13 ಸಾವಿರ ಪಡೆದುಕೊಳ್ಳುತ್ತಿದ್ದಾರೆ ಎಂಬ ದೂರು ಇದ್ದು ಇನ್ನು ಮುಂದೆ ಇದೇ ರೀತಿ ಮುಂದುವರಿದರೆ ಲೋಕಾಯುಕ್ತಕ್ಕೆ ನಾನೇ ದೂರು ನೀಡುತ್ತೇನೆ’ ಎಂದು ಶಾಸಕ ಅನಿಲ್ ಚಿಕ್ಕಮಾದು ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಪೂರ್ಣಿಮಾ ಅವರಿಗೆ ಎಚ್ಚರಿಕೆ ನೀಡಿದರು.
ಎಚ್.ಡಿ.ಕೋಟೆ: ‘ತಾಲ್ಲೂಕಿನಲ್ಲಿ 23 ರೆಸಾರ್ಟ್‌ಗಳಿದ್ದು ಅವುಗಳಲ್ಲಿ 20ಕ್ಕೆ ಅನುಮತಿ ಪಡೆದಿದ್ದು ಉಳಿದ ಮೂರು ಅನುಮತಿ ಪಡೆದಿಲ್ಲ’ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದರು.
‘2017ರ ಹಿಂದೆ 20 ರೆಸಾರ್ಟ್‌ಗಳು ನಿರ್ಮಾಣವಾಗಿದ್ದು ಇವು ಸೂಕ್ಷ್ಮವಲಯ ಪ್ರದೇಶ ಎಂದು ಘೋಷಣೆ ಆಗುವುದಕ್ಕೂ ಮೊದಲೇ ನಿರ್ಮಾಣವಾಗಿವೆ. ಉಳಿದ ಮೂರು 2025ರ ನಂತರ ಸೂಕ್ಷ್ಮವಲಯ ಘೋಷಣೆಯಾದ ನಂತರ ನಿರ್ಮಾಣವಾಗಿವೆ. ಹಾಗಾಗಿ ಇವುಗಳಿಗೆ ಪ್ರಾದೇಶಿಕ ಆಯುಕ್ತರ ಸಮಿತಿಯಲ್ಲಿ ಅನುಮತಿ ಪಡೆಯಬೇಕು ಅಲ್ಲಿಯವರೆಗೆ ಯಾವುದೇ ಕಾರ್ಯಚಟುವಟಿಕೆ ನಡೆಸಿದಂತೆ ಸೂಚನೆ ನೀಡಲಾಗಿದೆ’ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
‘6 ರೆಸಾರ್ಟ್‌ನವರು ನೀರಾವರಿ ಇಲಾಖೆಗೆ ಭೂಸ್ವಾಧೀನವಾಗಿರುವ ಜಾಗವನ್ನು ಒತ್ತುವರಿ ಮಾಡಿಕೊಂಡು ನಿರ್ಮಾಣ ಆಗಿರುವುದು ಸರ್ವೇಯಿಂದ ತಿಳಿದು ಬಂದಿದ್ದು ಒತ್ತುವರಿ ತೆರವು ಮಾಡುವಂತೆ 15 ದಿನಗಳ ಕಾಲ ಗಡುವು ನೀಡಲಾಗಿದೆ. ಇದರಲ್ಲಿ ಈಗಾಗಲೇ ಮೂರು ಮಂದಿ ತೆರವುಗೊಳಿಸಿದ್ದು ಉಳಿದ ಮೂರು ರೆಸಾರ್ಟ್‌ನವರು ತೆರವು ಮಾಡಿಲ್ಲ ಮುಂದಿನ ದಿನಗಳಲ್ಲಿ ತೆರವು ಮಾಡಲಿದ್ದಾರೆ’ ಎಂದು ಮಾಹಿತಿ ನೀಡಿದರು. ‘ಅಕ್ರಮ ರೆಸಾರ್ಟ್ ತೆರವುಗೊಳಿಸುವಂತೆ ನಡೆಸುತ್ತಿರುವ ಪ್ರತಿಭಟನಕಾರರಿಗೂ ಈ ಮಾಹಿತಿ ನೀಡಿದ್ದು ಅವರು ಮನವರಿಕೆ ಮಾಡಿಕೊಂಡಿದ್ದಾರೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.