ADVERTISEMENT

ಚುನಾವಣೆಯಲ್ಲಿ ಹೊಸಬರಿಗೆ ಅವಕಾಶ ಕೊಡಬೇಕೆಂಬುದು ನನ್ನ ಆಸೆ: ಕುಮಾರಸ್ವಾಮಿ

ಜನತಾ ಜಲಧಾರೆ ವಾಹನಕ್ಕೆ ವಿಶೇಷ ಪೂಜೆ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2022, 6:18 IST
Last Updated 12 ಏಪ್ರಿಲ್ 2022, 6:18 IST
ಎಚ್.ಡಿ.ಕುಮಾರಸ್ವಾಮಿ ಅವರು ಪಕ್ಷದ ಜನತಾ ಜಲಧಾರೆ ವಾಹನಕ್ಕೆ ಚಾಮುಂಡಿಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಎಚ್.ಡಿ.ಕುಮಾರಸ್ವಾಮಿ ಅವರು ಪಕ್ಷದ ಜನತಾ ಜಲಧಾರೆ ವಾಹನಕ್ಕೆ ಚಾಮುಂಡಿಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.   

ಮೈಸೂರು: ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಪಕ್ಷದ ಜನತಾ ಜಲಧಾರೆ ವಾಹನಕ್ಕೆ ಮಂಗಳವಾರ ಇಲ್ಲಿನ ಚಾಮುಂಡಿಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನತಾ ಜಲಧಾರೆ ಕಾಂಗ್ರೆಸ್‌ನ ಮೇಕೆದಾಟು ಪಾದಯಾತ್ರೆಗೆ ಪರ್ಯಾಯವಲ್ಲ. ಅದು ಶೋಗಾಗಿ ನಡೆಸಿದ ಯಾತ್ರೆ. ಅವರು ನೇರವಾಗಿ ರಾಜಕೀಯ ಯಾತ್ರೆ ಅಂತ ಹೇಳಲಿಲ್ಲ ಅಷ್ಟೆ. ಆದರೆ ನಮ್ಮದು ಜನರ ಮುಂದೆ ಸಮಸ್ಯೆ ಬಿಚ್ಚಿಡುವ ಯಾತ್ರೆ. ಯಾತ್ರೆ ಮೂಲಕ ಅಧಿಕೃತ ಚುನಾವಣಾ ಪ್ರಚಾರ ಆರಂಭಿಸಿದ್ದೇನೆ ಎಂದು ಹೇಳಿದರು.

ನಮ್ಮ ಹಾಸನ ಜಿಲ್ಲೆಯ ಯಾವ ಜಾತ್ರೆಯಲ್ಲೂ ಮುಸ್ಲಿಮರಿಗೆ ನಿರ್ಬಂಧ ಹೇರುವುದಕ್ಕೆ ಅವಕಾಶ ಕೊಡುವುದಿಲ್ಲ. ಚೆನ್ನಕೇಶವ ಜಾತ್ರೆಯಲ್ಲಿ ಸಮಸ್ಯೆ ಆಗಿರುವುದು ಗಮನಕ್ಕೆ ಬಂದಿದೆ. ಖುದ್ದು ರೇವಣ್ಣ ಅವರಿಗೆ ಸಮಸ್ಯೆ ಬಗೆಹರಿಸುವಂತೆ ಹೇಳಿದ್ದೇನೆ. ನಿರ್ಬಂಧ ತೆರವು ಮಾಡಿಸಿ ಅವರಿಗೆ ವ್ಯಾಪಾರಕ್ಕೆ ಅವಕಾಶ ಕೊಡಿಸುತ್ತೇನೆ. ಹಾಸನ ಜಿಲ್ಲೆ ಮಾತ್ರ ಅಲ್ಲ, ಎಲ್ಲಾ ಜಿಲ್ಲೆಗಳಲ್ಲೂ ನಿರ್ಬಂಧ ತೆರವಿಗೆ ನನ್ನ ಹೋರಾಟ ಇರುತ್ತದೆ ಎಂದರು.

ADVERTISEMENT

ಕಲ್ಲಂಗಡಿ ಒಡೆದಾಗ ತೋರಿದ ಅನುಕಂಪ ತಲೆ ಒಡೆದಾಗಲೂ ತೋರಿ ಎಂಬ ಸಿ.ಟಿ. ರವಿ ಮಾತಿನ ಅರ್ಥ ಏನು ? ರಾಜ್ಯದಲ್ಲಿ ತಲೆ ಒಡೆಯುತ್ತಾ ಇರುತ್ತೇವೆ ಅಂತಾನಾ? ನೀವು ತಲೆ ಒಡೆಯುತ್ತಿರಿ ನಾವು ಸಾಂತ್ವನ ಹೇಳಬೇಕಾ ಅನ್ನೋದಾ ಎಂದೂ‌ ಪ್ರಶ್ನಿಸಿದರು.

ರಾಯಚೂರಿನಲ್ಲಿ ತಲವಾರ್ ಹಂಚಿದ್ದಾರೆ. ಅವರನ್ನು ಏಕೆ ಬಂಧಿಸಿಲ್ಲ. ಏಕೆ ಹಂಚಿದ್ದಾರೆ ಎಂಬ ಪ್ರಶ್ನೆಗೆ ಮೌನಿ‌ ಬಸವರಾಜ ಬೊಮ್ಮಾಯಿ ಅವರೇ ಉತ್ತರಿಸಬೇಕು ಎಂದು ಹೇಳಿದರು.

ಅವರು ಯಾವ ಧರ್ಮದವರೇ ಆಗಿರಲಿ ಪರಸ್ಪರ ಪ್ರೀತಿಸುವವರಿಗೆ ತೊಂದರೆ ಕೊಡಬಾರದು.ಅವರನ್ನು ನಿಯಂತ್ರಿಸುವ ಕೆಲಸ ಮಾಡಬಾರದು ಎಂದರು.

ಜೆಡಿಎಸ್‌ಗೆ ಬಹುಮತ ಕೊಟ್ಟರೆ 5 ವರ್ಷದಲ್ಲಿ ರಾಜ್ಯದ ನೀರಾವರಿ ಯೋಜನೆ ಅನುಷ್ಠಾನ ಮಾಡುತ್ತೇನೆ. ಸಾಧ್ಯವಾಗದಿದ್ದರೆ ಜೆಡಿಎಸ್ ವಿಸರ್ಜನೆ ಮಾಡುವೆ ಎಂದು ತಿಳಿಸಿದರು.

ಈ ಬಾರಿ ಕನ್ನಡಿಗರ ಬಹುಮತದ ಸರ್ಕಾರ ಬೇಕು. ಯಾವ ಪಕ್ಷದ ಜೊತೆಯೂ ಹೊಂದಾಣಿಕೆ ಇಲ್ಲ. 30 ಅಥವಾ 40 ಸ್ಥಾನಕ್ಕಾಗಿ ಹೋರಾಟ ಅಲ್ಲ. ಪೂರ್ಣ ಪ್ರಮಾಣದ ಸರ್ಕಾರಕ್ಕೆ ಹೋರಾಟ. ಧರ್ಮ ಧರ್ಮಗಳ ನಡುವೆ ಬೆಂಕಿ ಇಟ್ಟು ಮತ ಕೇಳುತ್ತಿಲ್ಲ.ರಾಜ್ಯದ ಅಭಿವೃದ್ದಿಗಾಗಿ ನಮ್ಮ ಹೋರಾಟ. ನಮ್ಮದು ವಿಚಾರಾಧಾರಿತವಾದ ಹೋರಾಟ ಎಂದು ಪ್ರತಿಪಾದಿಸಿದರು.

ಜೆಡಿಎಸ್ ಬಿಟ್ಟುಹೋಗುವ ಮನಸ್ಸು ಮಾಡಿದವರಿಗೆ ಈಗ ಜ್ಞಾನೋದಯವಾಗುತ್ತಿದೆ‌. ಅವರು ಪಕ್ಷದಲ್ಲೇ ಉಳಿದರೆ ನನಗೇನು ಸಮಸ್ಯೆ ಇಲ್ಲ. ಪಕ್ಷ ಬಿಟ್ಟವರೂ‌ ಕೂಡ ಪಕ್ಷಕ್ಕೆ ಬರುವ ಮಾತಾಡುತ್ತಿದ್ದಾರೆ. ಅವರು ಬಂದರೂ ಸಂತೋಷ. ಯಾವುದೇ ಪಕ್ಷದಿಂದ ಯಾರೇ ನಮ್ಮ ಪಕ್ಷಕ್ಕೆ ಬಂದರೂ ಸ್ವಾಗತ. ಆದರೆ ಅಧಿಕಾರಕ್ಕಾಗಿ ಪಕ್ಷಕ್ಕೆ ಬಂದರೆ ಅಂತವರಿಗೆ ನಮ್ಮಲ್ಲಿ ಅವಕಾಶ ಇಲ್ಲ. ಈ‌ ಮಾತು ಜಿ.ಟಿ.ದೇವೇಗೌಡರಿಗೂ ಕೂಡಾ ಅನ್ವಯ ಎಂದು ಹೇಳಿದರು.

ಈ ಬಾರಿ ಹೊಸ ಮುಖಗಳಿಗೆ ಅವಕಾಶ ಕೊಡಬೇಕೆಂಬುದು ನನ್ನ ಆಸೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.