ADVERTISEMENT

ಹುಣಸೂರು: ಎರಡು ವರ್ಷದಲ್ಲಿ 24 ಅಧಿಕಾರಿಗಳ ವರ್ಗಾವಣೆ, ಜನರ ಪರದಾಟ

ಎಚ್.ಎಸ್.ಸಚ್ಚಿತ್
Published 27 ಅಕ್ಟೋಬರ್ 2023, 5:54 IST
Last Updated 27 ಅಕ್ಟೋಬರ್ 2023, 5:54 IST
ಹುಣಸೂರು ನಗರಸಭೆ ಕಚೇರಿ
ಹುಣಸೂರು ನಗರಸಭೆ ಕಚೇರಿ   

ಹುಣಸೂರು: ಅಧಿಕಾರಿಗಳ ನಿರಂತರ ವರ್ಗಾವಣೆಯಿಂದ ನಗರಸಭೆಯ ಕಚೇರಿಯಲ್ಲಿ ಸಾರ್ವಜನಿಕರ ಕೆಲಸಗಳು ನಡೆಯದೆ, ಮನೆಗೆ ವಾಪಾಸ್ಸಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಸ್ಯೆ ಹೇಳಿಕೊಳ್ಳೋಣವೆಂದರೆ ಮೀಸಲಾತಿ ಗೊಂದಲದಿಂದ ಚುನಾಯಿತ ವಾರ್ಡ್ ಸದಸ್ಯರೂ ಅಧಿಕಾರವಿಲ್ಲದೆ ಸುಮ್ಮನಾಗಿದ್ದಾರೆ.

ಹೊಸ ಸರ್ಕಾರ ಅಸ್ಥಿತ್ವಕ್ಕೆ ಬರುತ್ತಿದ್ದಂತೆ ಪ್ರಮುಖ ಹುದ್ದೆಗಳ ಅಧಿಕಾರಿಗಳು ವರ್ಗಾವಣೆಗೊಂಡು ವಿವಿಧ ಸ್ಥಳಕ್ಕೆ ನಿಯೋಜನೆಗೊಂಡರು. ಖಾಲಿ ಹುದ್ದೆಗೆ ಹೊಸ ಅಧಿಕಾರಿಗಳ ನಿಯೋಜನೆ ಆಗದೆ ಇರುವುದರಿಂದ ಕಚೇರಿಯ ಕಡತಗಳು ಧೂಳು ಹಿಡಿದಿದೆ. ಕಳೆದ ಎರಡೂವರೆ ವರ್ಷದಲ್ಲಿ ನಾಲ್ವರು ಪೌರಾಯುಕ್ತರು ಸೇರಿದಂತೆ ಕಂದಾಯ ಇಲಾಖೆಯ 24 ಅಧಿಕಾರಿ ಮತ್ತು ಸಿಬ್ಬಂದಿಗಳು ವರ್ಗಾವಣೆಯಾಗಿದ್ದಾರೆ. 100 ಜನ ಪೌರಕಾರ್ಮಿರ ಜಾಗದಲ್ಲಿ 40 ಪೌರಕಾರ್ಮಿಕರ ಕೆಲಸ ನಿರ್ವಹಿಸುತ್ತಿದ್ದಾರೆ. ಇದೀಗ ಆಡಳಿತಾಧಿಕಾರಿಯನ್ನಷ್ಟೇ ನೇಮಿಸಿ ಸರ್ಕಾರವು ಸುಮ್ಮನಾಗಿದೆ. ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಗೊಂದಲ ನ್ಯಾಯಾಲಯದ ಮೆಟ್ಟಿಲೇರಿದ್ದು ಜನಪ್ರತಿನಿಧಿ ಇದ್ದು ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

2015 ರಲ್ಲಿ ಹುಣಸೂರು ಪುರಸಭೆಯು ನಗರಸಭೆಯಾಗಿ ಮೇಲ್ದರ್ಜೆಗೇರಿತು. ಆದರೆ ಸಾಮಾನ್ಯರ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಸಿಕ್ಕದೆ, ಈಗಲೂ ಪುರಸಭೆ ವ್ಯವಸ್ಥೆಯನ್ನೇ ನೆನಪಿಸುವ ಕಾರ್ಯವೈಖರಿ ಮುಂದುವರೆದಿದೆ. ಹೊಸ ಸರ್ಕಾರ ಏಪ್ರಿಲ್‌ನಲ್ಲಿ ಅಧಿಕಾರಕ್ಕೆ ಬಂದಿದ್ದರು, ಸ್ಥಳಿಯ ಜನಪ್ರತಿನಿಧಿಗಳ ಆಡಳಿತಕ್ಕೆ ಹಸಿರು ನಿಶಾನೆ ಸಿಕ್ಕಿಲ್ಲ. ‘ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮತ್ತು ಶಾಸಕ ಹರೀಶ್ ಗೌಡ ಜಂಟಿ ಕೆಡಿಪಿ ಸಭೆ ನಡೆಸಿ ಕುಂದುಕೊರತೆ ಆಲಿಸಿದ್ದಾರೆ. ಆದರೆ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಅನುದಾನವಿಲ್ಲದೆ ವಾರ್ಡ್ ಸದಸ್ಯರೂ ನಾಗರಿಕರಿಗೆ ಕೆಲಸ ಮಾಡಿಸುವ ಭರವಸೆ ನೀಡಲಾಗದ ಸ್ಥಿತಿಯಲ್ಲಿದ್ದಾರೆ’ ಎನ್ನುತ್ತಾರೆ ನಗರಸಭೆ ಸದಸ್ಯ ಕೃಷ್ಣರಾಜಗುಪ್ತ.

ADVERTISEMENT

‘ನಗರೋತ್ಥಾನ ಯೋಜನೆಯಲ್ಲಿ ಮಂಜೂರಾದ ₹ 25 ಕೋಟಿ ಅನುದಾನ ಬಳಕೆಯಾಗಿಲ್ಲ. ಮಂಜುನಾಥ ಬಡಾವಣೆ ಅಭಿವೃದ್ಧಿಗೆ ₹3 ಕೋಟಿ ಮೀಸಲಿಟ್ಟಿರುವುದಾಗಿ ಮಾಜಿ ಶಾಸಕ ಮಂಜುನಾಥ್ ಹೇಳಿದ್ದರು. ಅವರ ಅಧಿಕಾರ ಮುಗಿಯಿತು. ಆದರೆ ನಮ್ಮ ಬವಣೆ ನೀಗಲಿಲ್ಲ. ಈಗಲೂ ಸಣ್ಣ ಮಳೆ ಬಂದರೆ ಬಡಾವಣೆ ಜಲಾವೃತ್ತವಾಗುತ್ತಿದೆ’ ಎಂದು ರವಿಶಂಕರ್ ಹೇಳಿದರು.

‘40 ಗುತ್ತಿಗೆ ಪೌರಕಾರ್ಮಿಕರನ್ನು ಸರ್ಕಾರ ಖಾಯಂಗೊಳಿಸಿ ವಿವಿಧ ಸ್ಥಳಕ್ಕೆ ನಿಯೋಜಿಸಿ ಉದ್ಯೋಗ ಭದ್ರತೆ ನೀಡಿತಾದರೂ, ಖಾಲಿಯಾದ ಸ್ಥಳಕ್ಕೆ ಹೊಸದಾಗಿ ನಿಯೋಜಿಸದೆ 4 ತಿಂಗಳಿಂದ ತ್ಯಾಜ್ಯ ನಿರ್ವಹಣೆ ಸಮಸ್ಯೆ ಎದುರಾಗಿದೆ’ ಎಂದು ನಗರಸಭೆ ಸದಸ್ಯ ಹರೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ನಗರಸಭೆಗೆ ಗುತ್ತಿಗೆ ಆಧಾರದಲ್ಲಿ ಪೌರಕಾರ್ಮಿಕರನ್ನು ನಿಯೋಜಿಸುವಂತೆ ಜಿಲ್ಲಾಧಿಕಾರಿ ಮತ್ತು ಪೌರಾಡಳಿತ ಆಯುಕ್ತರೊಂದಿಗೆ ಚರ್ಚಿಸಿದ್ದೇನೆ.
-ಹರೀಶ್‌ ಗೌಡ, ಶಾಸಕ
ಖಾಲಿ ಹುದ್ದೆಗಳಿಗೆ ಅಧಿಕಾರಿಗಳನ್ನು ನಿಯೋಜಿಸುವಂತೆ ಪೌರಾಯುಕ್ತ ಸಚಿವಾಲಯಕ್ಕೆ ಹಲವು ಪತ್ರ ಬರೆದು ಮನವಿ ಮಾಡಿದ್ದೇನೆ. ಕಂದಾಯ ವಿಭಾಗದಲ್ಲಿ ಸಿಬ್ಬಂದಿ ಇಲ್ಲದೆ ಕಚೇರಿ ನಿರ್ವಹಣೆ ಕಷ್ಟವಾಗಿದೆ.
-ಮಾನಸ, ಪೌರಾಯುಕ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.