ಮೈಸೂರು: ದಶಕದ ಹಿಂದೆ ದಸರೆ ವೇಳೆ ನಡೆಯುತ್ತಿದ್ದ ‘ಚಿತ್ರ ಸಂತೆ’ ಹಾಗೂ ‘ಕಾವಾ ಮೇಳ’ ನೆನಪಿಸುವ ‘ಕಲಾ ಜಾತ್ರೆ’ ಸಿದ್ಧಾರ್ಥನಗರದ ಚಾಮರಾಜೇಂದ್ರ ದೃಶ್ಯಕಲಾ ಕಾಲೇಜಿನಲ್ಲಿ (ಕಾವಾ) ಮೈದಾಳಲಿದೆ.
ವಿನೋಬಾ ರಸ್ತೆಯ ‘ಚಿತ್ರ ಸಂತೆ’ ಹಾಗೂ ಸಯ್ಯಾಜಿರಾವ್ ರಸ್ತೆಯ ಹಳೆಯ ‘ಕಾವಾ’ ಕಾಲೇಜಿನಲ್ಲಿ ಕಲಾಕೃತಿಗಳ ಅದ್ಭುತ ಲೋಕವೇ ಸೃಷ್ಟಿಯಾಗುತ್ತಿತ್ತು. ‘ಚಿತ್ರ ಸಂತೆ’ಯಲ್ಲಿ ದೇಶದ ವಿವಿಧೆಡೆಯ ಕಲಾವಿದರು ಬಂದು ತಮ್ಮ ಕಲಾಕೃತಿಗಳನ್ನು ಪ್ರದರ್ಶನ ಮಾಡಿ, ಮಾರಾಟ ಮಾಡುತ್ತಿದ್ದರು. ‘ಕಾವಾ ಮೇಳ’ದಲ್ಲಿ ವಿದ್ಯಾರ್ಥಿಗಳ ಕಲಾ ಕೌಶಲ ಅನಾವರಣಗೊಳ್ಳುತ್ತಿತ್ತು. ಅವು ನೆನಪಷ್ಟೇ ಆಗಿದ್ದವು.
ಪರಂಪರೆಯನ್ನು ಪುನರಪಿಸುವಂತೆ ‘ದಸರಾ ಲಲಿತಕಲೆ ಮತ್ತು ಕರಕುಶಲ ಉಪಸಮಿತಿ’, ‘ಕಾವಾ’ ಮತ್ತದರ ಹಿರಿಯ ವಿದ್ಯಾರ್ಥಿಗಳ ಸಂಘವು ಶ್ರಮಿಸಿದ್ದು, ಕಲಾಲೋಕವೇ ನಿರ್ಮಾಣವಾಗಲಿದೆ. ಕಲಾಮಂದಿರದ ಆವರಣದಲ್ಲಿ ನಡೆಯುತ್ತಿದ್ದ ಉಪ ಸಮಿತಿಯ ದಸರಾ ಕಾರ್ಯಕ್ರಮಗಳೂ ಸಂಪೂರ್ಣ ‘ಕಾವಾ’ಗೆ ಸ್ಥಳಾಂತರವಾಗಿರುವುದು, ಅದರ ಸಿರಿವಂತಿಕೆ ಮತ್ತಷ್ಟು ಹೆಚ್ಚಿಸಲಿದೆ.
ಜಾತ್ರೆಗೆ ಕೈ ಜೋಡಿಸಿದ್ದೇವೆ:
‘ದೇಶದ ವಿವಿಧೆಡೆಯ 80ಕ್ಕೂ ಹೆಚ್ಚು ಪ್ರಸಿದ್ಧ ಕಲಾವಿದರು ಶಿಲ್ಪಕಲೆ, ಚಿತ್ರಕಲೆ, ಛಾಯಾಚಿತ್ರ ಸೇರಿದಂತೆ ತಮ್ಮ ಕಲಾಕೃತಿಯನ್ನು ಪ್ರದರ್ಶನಕ್ಕೆ ಇಡುತ್ತಿದ್ದು, ಅದಕ್ಕಾಗಿ 80 ಮಳಿಗೆಗಳು ಸಿದ್ಧವಾಗಿವೆ. ಕಾವಾ ಜೊತೆಗೆ ಹಿರಿಯ ವಿದ್ಯಾರ್ಥಿಗಳ ಸಂಘವು ಕೈ ಜೋಡಿಸಿದೆ’ ಎಂದು ಸಂಘದ ಅಧ್ಯಕ್ಷ ಆರ್.ಎಚ್.ಮಂಜು ಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ದಶಕದ ಹಿಂದೆಯೇ ಕಾವಾ ಕಾಲೇಜಿನ ಕ್ಯಾಂಪಸ್ ಸಿದ್ಧಾರ್ಥನಗರದ ಹೊಸ ಜಿಲ್ಲಾಧಿಕಾರಿ ಕಚೇರಿ ಹಿಂಭಾಗಕ್ಕೆ ಸ್ಥಳಾಂತರವಾಗಿದ್ದು, ನಮ್ಮ ಪರಂಪರೆಯನ್ನು ಬಿಂಬಿಸುವ ಕಲಾಕೃತಿಗಳಿಂದ ತುಂಬಿ ಹೋಗಬೇಕಿದೆ. ಖಾಲಿ ಗೋಡೆಗಳಲ್ಲಿ ಚಿತ್ರಗಳು, ಕಲಾಕೃತಿಗಳು ಮತ್ತಷ್ಟು ಭಿತ್ತರವಾಗಬೇಕಿದೆ. ಮ್ಯೂಸಿಯಂನಂತೆ ಆಗಬೇಕಿದ್ದು, ಅದಕ್ಕೆ ಸಂಘವೂ ಕಾಲೇಜಿನೊಂದಿಗೆ ಶ್ರಮಿಸಲಿದೆ’ ಎಂದರು.
ಬೆಂಗಳೂರಿನ ಚಿತ್ರಸಂತೆ ಮಾದರಿ:
‘ಕಲಾ ಜಾತ್ರೆ ಇದೇ ಮೊದಲ ಬಾರಿಗೆ ಮಾಡುತ್ತಿದ್ದು, ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ ನಡೆಸುವ ಚಿತ್ರಸಂತೆ ಮಾದರಿಯಲ್ಲಿಯೇ ಜಾತ್ರೆ ನಡೆಯಲಿದೆ. ಎಲ್ಲ ಕಲಾವಿದರು ಕಲಾಕೃತಿಗಳನ್ನು ಪ್ರದರ್ಶನ ಮಾಡಿ ಮಾರಾಟ ಮಾಡುತ್ತಾರೆ’ ಎಂದು ದಸರಾ ಲಲಿತಕಲೆ ಮತ್ತು ಕರಕುಶಲ ಕಲೆ ಉಪಸಮಿತಿಯ ಕಾರ್ಯದರ್ಶಿಯೂ ಆದ ಕಾಲೇಜಿನ ಡೀನ್ ಎ.ದೇವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.
ಬೆಂಗಳೂರಿನ ಚಿತ್ರಸಂತೆ ಮಾದರಿ ಜಾತ್ರೆಗೆ ಕೈ ಜೋಡಿಸಿದ ಹಿರಿಯರು ಕಲಾಕೃತಿಗಳ ಆಗರವಾಗುವ ‘ಕಾವಾ’
ಕಾವಾ’ ಕಲಾಕೃತಿಗಳಿಂದ ತುಂಬಬೇಕು. ಮ್ಯೂಸಿಯಂನಂತೆ ಆಗಬೇಕು ಎಂಬುದು ಕನಸು. ಅದಕ್ಕೆ ಹಿರಿಯ ವಿದ್ಯಾರ್ಥಿಗಳು ಜೊತೆಯಾಗಿದ್ದೇವೆಆರ್.ಎಚ್.ಮಂಜು ಪ್ರಸಾದ್ ಕಾವಾ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ
ಎಲ್ಲ ಕಲೆಗಳ ಪರಿಚಯವನ್ನು ಈ ದಸರೆಯಲ್ಲಿ ಕಾವಾ ಮಾಡುತ್ತಿದೆ. ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕೆಲಸ ಮಾಡಿದ್ದಾರೆಎ.ದೇವರಾಜು ಡೀನ್ ಕಾವಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.