
ಮೈಸೂರು: ‘ಕನ್ನಡ ಭಾಷೆ ಉಳಿವಿನಲ್ಲಿ ರಂಗಭೂಮಿ, ಸಿನಿಮಾ ಕೊಡುಗೆ ದೊಡ್ಡದು. ಕಲಾವಿದರು ಭಾಷೆಯ ರೂವಾರಿಗಳು’ ಎಂದು ರಂಗಕರ್ಮಿ ಮಂಡ್ಯ ರಮೇಶ್ ಅಭಿಪ್ರಾಯಪಟ್ಟರು.
ನಗರದ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ ಕರ್ನಾಟಕ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದರು.
‘ಎಲ್ಲ ಭಾಷೆಗಳನ್ನೂ ಕಲಿಯಬೇಕು. ಆದರೆ, ಕನ್ನಡದಲ್ಲಿ ಬದುಕಬೇಕು. ಎಲ್ಲ ಆಹ್ವಾನ ಪತ್ರಿಕೆಗಳೂ ಕನ್ನಡಮಯ ಆಗಬೇಕು. ಆಡಳಿತದಲ್ಲೂ ಕನ್ನಡ ಕಡ್ಡಾಯಗೊಳಿಸಿ, ಅನುಷ್ಠಾನಗೊಳಿಸಬೇಕು. ಆದರೆ, ಇದು ಘೋಷಣೆಯಾಗಿಯೇ ಉಳಿದಿದೆ’ ಎಂದರು.
‘ಮಕ್ಕಳಿಗೆ ಕನ್ನಡ ನೆಲದ ಸೊಗಡು ಕಲಿಸಬೇಕು. ಅದಕ್ಕಾಗಿ ಕಲಾ ಪ್ರಕಾರವನ್ನು ಕಲಿಯಲು ಪ್ರೋತ್ಸಾಹ ನೀಡಬೇಕು. ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸುವ ರಂಗಭೂಮಿಗೆ ಸೇರಿಸಬೇಕು. ಕನ್ನಡ ಉಳಿವಿಗೆ ಶ್ರಮಿಸಿದ ಸಾಧಕರನ್ನು ಎಡ–ಬಲಪಂಥ, ಪೂರ್ವಾಗ್ರಹದಿಂದ ನೋಡದೇ ಆಯ್ಕೆ ಮಾಡಿ ಗೌರವಿಸಬೇಕು’ ಎಂದು ಹೇಳಿದರು.
ಭರತನಾಟ್ಯ ಕಲಾವಿದೆ ವಿದುಷಿ ವಸುಂಧರಾ ದೊರೆಸ್ವಾಮಿ, ಚಲನಚಿತ್ರ ನಿರ್ದೇಶಕ ಬಿ.ಸುರೇಶ್, ವಿದುಷಿ ಸುಕನ್ಯಾ ಪ್ರಭಾಕರ್, ಜಾನಪದ ಗಾಯಕ ರಾಜಪ್ಪ ಕಿರಗಸೂರು ಅವರನ್ನು ಸನ್ಮಾನಿಸಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ, ಕುಲಸಚಿವ ಪ್ರೊ.ಎಂ.ಜಿ.ಮಂಜುನಾಥ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.