ADVERTISEMENT

ಮೈಸೂರು: ಚಾಮುಂಡಿಬೆಟ್ಟದ ‘ಪ್ರಸಾದ’ಕ್ಕೆ ಹೊಸ ಡಿಪಿಆರ್

ಕೇಂದ್ರದಿಂದ ₹45.71 ಕೋಟಿ ಅನುದಾನಕ್ಕಾಗಿ ಕ್ರಮ

ಎಂ.ಮಹೇಶ್
Published 14 ಜನವರಿ 2025, 4:49 IST
Last Updated 14 ಜನವರಿ 2025, 4:49 IST
ಮೈಸೂರಿನ ಚಾಮುಂಡಿಬೆಟ್ಟದ ಮಹಿಷಾಸುರ ಪ್ರತಿಮೆ ಆವರಣದಲ್ಲಿ ಕೈಗೊಳ್ಳಲಿರುವ ಅಭಿವೃದ್ಧಿ ಕಾಮಗಾರಿಯ ನೀಲನಕ್ಷೆ
ಮೈಸೂರಿನ ಚಾಮುಂಡಿಬೆಟ್ಟದ ಮಹಿಷಾಸುರ ಪ್ರತಿಮೆ ಆವರಣದಲ್ಲಿ ಕೈಗೊಳ್ಳಲಿರುವ ಅಭಿವೃದ್ಧಿ ಕಾಮಗಾರಿಯ ನೀಲನಕ್ಷೆ   

ಮೈಸೂರು: ಇಲ್ಲಿನ ಪ್ರಸಿದ್ಧ ಧಾರ್ಮಿಕ ಸ್ಥಳವಾದ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಕೇಂದ್ರದ ‘ಪ್ರಸಾದ್’ ಯೋಜನೆಯಡಿ ಅಭಿವೃದ್ಧಿಪಡಿಸಲು ಪರಿಷ್ಕೃತ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಲ್ಲಿಸಲಾಗಿದೆ.

ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಕೇಂದ್ರ ಪ್ರವಾಸೋದ್ಯಮ ಇಲಾಖೆಗೆ ಡಿಪಿಆರ್‌ ಸಲ್ಲಿಕೆಯಾಗಿದ್ದು, ಅನುಮೋದನೆ ದೊರೆಯುತ್ತಿದ್ದಂತೆಯೇ ರಾಜ್ಯ ಸರ್ಕಾರಕ್ಕೆ ಅನುದಾನ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

ಈ ನಡುವೆ, ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಸಂಬಂಧಿಸಿದ ಒಡೆತನ, ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆಯ ವಿಷಯದಲ್ಲಿ ಸರ್ಕಾರ ಹಾಗೂ ಮೈಸೂರು ರಾಜಮನೆತನದವರ ನಡುವೆ ಉಂಟಾಗಿರುವ ವ್ಯಾಜ್ಯವು ‘ಪ್ರಸಾದ್‌’ ಯೋಜನೆಯ ಅನುಷ್ಠಾನದ ವೇಗಕ್ಕೆ ‘ಬ್ರೇಕ್’ ಹಾಕಿದೆ. ಮೈಸೂರು ರಾಜವಂಶಸ್ಥರೂ ಆಗಿರುವ ಹಾಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಯೋಜನೆಗೆ ಸಮ್ಮತಿ ನೀಡದಿರುವುದು ಅಧಿಕಾರಿಗಳ ತಲೆನೋವಿಗೆ ಕಾರಣವಾಗಿದೆ. ಪರಿಣಾಮ, ಬಹಳ ವರ್ಷಗಳಿಂದಲೂ ಚರ್ಚೆಯಾಗುತ್ತಿರುವ ಯೋಜನೆಯ ಕಾಮಗಾರಿ ಯಾವಾಗ ಶುರುವಾಗುತ್ತದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ADVERTISEMENT

ಈ ನಡುವೆ, ಕೇಂದ್ರದ ಸೂಚನೆಯಂತೆ ಅಧಿಕಾರಿಗಳು ಡಿಪಿಆರ್‌ ಸಲ್ಲಿಸಿದ್ದಾರೆ.

ಪರಿಷ್ಕೃತ ಡಿಪಿಆರ್‌ನಲ್ಲಿ ಏನಿದೆ?: ಕೇಂದ್ರ ಪ್ರವಾಸೋದ್ಯಮ ಇಲಾಖೆಯಿಂದ ಕೈಗೊಳ್ಳಲಾಗಿರುವ ‘ಪ್ರಸಾದ್’ (ಪಿಲಿಗ್ರಿಮೇಜ್‌ ರಿಜುವೆನೇಷನ್ ಆ್ಯಂಡ್‌ ಸ್ಪಿರಿಚುಯಲ್‌ ಆಗ್‌ಮೆಂಟೇಷನ್‌ ಡ್ರೈವ್) ಯೋಜನೆಯಡಿ ₹ 45.71 ಕೋಟಿ ಅನುದಾನ ದೊರೆಯಲಿದೆ ಎಂದು ತಿಳಿಸಲಾಗಿದೆ. ಈ ಕಾರಣದಿಂದ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದ್ದು, ಏನೇನು ಕಾಮಗಾರಿಗಳನ್ನು ಕೈಗೊಳ್ಳಬಹುದು ಎಂಬುದನ್ನು ಅಂತಿಮಗೊಳಿಸಲಾಗಿದೆ. ಬೆಟ್ಟಕ್ಕೆ ಬರುವ ಭಕ್ತರು ಅಥವಾ ಪ್ರವಾಸಿಗರಿಗೆ ಉತ್ತಮವಾದ ಅನುಭವ ನೀಡುವ ನಿಟ್ಟಿನಲ್ಲಿ ಸೌಕರ್ಯಗಳನ್ನು ಒದಗಿಸುವ ಉದ್ದೇಶ ಹೊಂದಲಾಗಿದೆ.

ಪ್ರಸಿದ್ಧ ಯಾತ್ರಾ ಸ್ಥಳ, ಧಾರ್ಮಿಕ ಕ್ಷೇತ್ರ ಮತ್ತು ಪ್ರವಾಸಿ ತಾಣಗಳನ್ನು ಯೋಜನಾಬದ್ಧ, ಸುಸ್ಥಿರ ಹಾಗೂ ಸಮಗ್ರ ರೀತಿಯಲ್ಲಿ ಅಭಿವೃದ್ಧಿಪಡಿಸುವುದು ಯೋಜನೆಯ ಉದ್ದೇಶವಾಗಿದೆ. 

ಬೆಟ್ಟದಲ್ಲಿ ಒಟ್ಟು 6 ಸ್ಥಳಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ಭಕ್ತರಿಗೆ ಸೌಲಭ್ಯಗಳು, ಮಹಿಷಾಸುರ ಪ್ರತಿಮೆ ಸುತ್ತ ಆಕರ್ಷಕ ಪ್ಲಾಜಾ, ದೇವಿಕೆರೆ, ನಂದಿ ಪ್ರತಿಮೆ, ಚಾಮುಂಡಿಬೆಟ್ಟದ ಪಾದ ಹಾಗೂ ವೀಕ್ಷಣಾ ಪ್ರದೇಶ (ವ್ಯೂ ಪಾಯಿಂಟ್) ಗಳಲ್ಲಿನ ಅಭಿವೃದ್ಧಿಗೆ ಪ್ರತ್ಯೇಕ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಭಕ್ತರ ಸರದಿ ಸಾಲು, ದೇಗುಲದ ಮುಂಭಾಗದ ಪ್ರಾಂಗಣ, ಶೌಚಾಲಯಗಳ ಪರಿಸ್ಥಿತಿ ಸುಧಾರಿಸಲಿದೆ ಎಂದು ಯೋಜನಾ ವರದಿಯಲ್ಲಿ ತಿಳಿಸಲಾಗಿದೆ.

ಪರಿಶೀಲಿಸಬೇಕಾಗುತ್ತದೆ: ಸಂಸದ

‘ಪ್ರಸಾದ್’ ಯೋಜನೆಯಡಿ ಏನೇನು ಮಾಡಲು ಉದ್ದೇಶಿಸಲಾಗಿದೆ ಎಂಬುದನ್ನು ನಾನು ಪರಿಶೀಲನೆ ನಡೆಸಬೇಕಾಗಿದೆ. ಪ್ರಕರಣ ನ್ಯಾಯಾಲಯದಲ್ಲಿರುವ ಕಾರಣ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದ ಪೋಷಕರು ಯಾರು ಎಂಬುದನ್ನು ಸ್ಪಷ್ಟವಾಗಿ ತಿಳಿಸಿ ಕೆಲಸ ಮಾಡಬೇಕಾಗುತ್ತದೆ. ಎಲ್ಲವೂ ಕಾನೂನಾತ್ಮಕವಾಗಿಯೇ ಆಗಬೇಕು’ ಎನ್ನುತ್ತಾರೆ ಮೈಸೂರು ರಾಜವಂಶಸ್ಥರೂ ಆಗಿರುವ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌.

ಮಹಿಷಾಸುರನಿಗೆ ‘ಮೆರುಗು’

ಡಿಪಿಆರ್‌ ಪ್ರಕಾರ ಮಹಿಷಾಷುರ ಪ್ರತಿಮೆ ಸುತ್ತಲಿನ ಪ್ಲಾಜಾದಲ್ಲಿ ಕಾರಂಜಿ ನಿರ್ಮಾಣ ವಿದ್ಯುದ್ದೀಪಾಲಂಕಾರ ಮಾಡಲಾಗುವುದು. ಪೊಲೀಸ್ ಬೂತ್ ಮಾಹಿತಿ ಕೇಂದ್ರ ಕಂಟ್ರೋಲ್‌ ರೂಂ ಹಾಗೂ ಭಕ್ತರಿಗಾಗಿ ಆಸನ ವ್ಯವಸ್ಥೆ ಕುಡಿಯುವ ನೀರಿನ ಘಟಕ ಕಲ್ಲಿನ ಪ್ರವೇಶ ದ್ವಾರ ನಾಮಫಲಕಗಳನ್ನು ಹಾಕಲಾಗುವುದು. ದೇವಿಕೆರೆಯಲ್ಲಿ ಕಲ್ಲಿನ ಮಂಟಪ ಪ್ರವೇಶ ದ್ವಾರ ಉದ್ಯಾನ ಅಭಿವೃದ್ಧಿ ಮೆಟ್ಟಿಲುಗಳ ನವೀಕರಣ ಹಾಗೂ ಶೌಚಾಲಯ ನಿರ್ಮಾಣಕ್ಕೆ ಯೋಜಿಸಲಾಗಿದೆ. ನಂದಿ ಪ್ರತಿಮೆ ಬಳಿ ಸರದಿ ಸಾಲಿನ ವ್ಯವಸ್ಥೆ ಕುಡಿಯುವ ನೀರು ಹಾಗೂ ಆಸನಗಳ ವ್ಯವಸ್ಥೆ ನೆಲಹಾಸು ಅಭಿವೃದ್ಧಿ ಮೂಲಕ ಸೌಂದರ್ಯೀಕರಣ ಹೆಚ್ಚಿಸಲು ಯೋಜನೆ ರೂಪಿಸಲಾಗಿದೆ.‌

ಮೆಟ್ಟಿಲು ಹತ್ತುವವರ ಅನುಕೂಲಕ್ಕೆ...

ಪಾದದಲ್ಲಿರುವ ಮೆಟ್ಟಿಲುಗಳ ಬದಿಯಲ್ಲಿ ಕಂಬಿಗಳ ಅಳವಡಿಕೆ ನೀರಿನ ಕೊಳವೆಗಳ ಅಳವಡಿಕೆ ಜೊತೆಗೆ ಸುತ್ತಲಿನ ಪ್ರದೇಶದ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ. ಅಲ್ಲಲ್ಲಿ ಭದ್ರತೆಯನ್ನು ಹೆಚ್ಚಿಸುವ ಉದ್ದೇಶದಿಂದ ಸಿ.ಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಕೆಗೂ ಯೋಜಿಸಲಾಗಿದೆ. ಸಾರ್ವಜನಿಕರಿಗೆ ಪ್ರಕಟಣೆಯ ವ್ಯವಸ್ಥೆಗೂ ಕ್ರಮ ವಹಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗಿ ದೇವಿಯ ದರ್ಶನ ಪಡೆಯುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಇಂತಹ ಭಕ್ತರಿಗೆ ವಿಶ್ರಾಂತಿ ಪಡೆಯಲು ಅಲ್ಲಲ್ಲಿ ಆಸನಗಳ ನಿರ್ಮಾಣ ಎರಡೂ ಬದಿಗಳಲ್ಲಿ ರೇಲಿಂಗ್‌ಗಳ ನಿರ್ಮಾಣ ಮಳೆಯಿಂದ ರಕ್ಷಣೆ ಪಡೆಯಲು ತಂಗುದಾಣಗಳನ್ನು ನಿರ್ಮಿಸಲಾಗುತ್ತದೆ. ಕುಡಿಯುವ ನೀರಿನ ವ್ಯವಸ್ಥೆ ಮೆಟ್ಟಿಲುಗಳಲ್ಲಿ ಅಲ್ಲಲ್ಲಿ ಮಾಹಿತಿ ಫಲಕಗಳನ್ನು ಹಾಕಲಾಗುತ್ತದೆ. ದೇವಸ್ಥಾನದಿಂದ ಪ್ರವೇಶ ದ್ವಾರದವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಯೋಜಿಸಲಾಗಿದೆ.

ಪ್ರಸಾದ್ ಯೋಜನೆಯ ಅಂತಿಮ ಡಿಪಿಆರ್‌ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಮೂಲಕ ಕೇಂದ್ರಕ್ಕೆ ಸಲ್ಲಿಕೆಯಾಗಿದೆ. ಅನುಮೋದನೆ ದೊರೆತು ಅನುದಾನ ಬಿಡುಗಡೆಯಾದರೆ ಟೆಂಡರ್‌ ಪ್ರಕ್ರಿಯೆ ನಡೆಯಲಿದೆ
–ಎಂ.ಕೆ.ಸವಿತಾ, ಜಂಟಿ ನಿರ್ದೇಶಕಿ ಪ್ರವಾಸೋದ್ಯಮ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.