ADVERTISEMENT

ಡಿ.ಕೆ.ಶಿವಕುಮಾರ್ ನಿರಪರಾಧಿಯಾಗಿ ಹೊರಬಂದರೆ ಸಂತೋಷ: ಕೆ.ಎಸ್.ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2022, 8:45 IST
Last Updated 16 ಸೆಪ್ಟೆಂಬರ್ 2022, 8:45 IST
ಕೆ.ಎಸ್.ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ   

ಮೈಸೂರು: ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಜಾಮೀನಿನ ಮೇಲಿದ್ದಾರೆ. ಅವರು ನಿರಾಪರಾಧಿಯಾಗಿ ಹೊರಬಂದರೆ ಸಂತೋಷ’ ಎಂದು ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಡಿ.ಕೆ.ಶಿವಕುಮಾರ್‌ ಅವರಿಗೆ ಇಡಿ ಸಮನ್ಸ್ ಜಾರಿ ಮಾಡಿರುವುದು ರಾಜಕೀಯ ಪ್ರೇರಿತವಲ್ಲ. ಅವರ ಮೇಲೆ ಇಡಿ ದಾಳಿ ಮಾಡಿದ್ದಾಗ ಬಂಡಲ್‌ಗಟ್ಟಲೆ ಹಣ ಸಿಕ್ಕಿತ್ತು. ಡಿಕೆಶಿ ಹೇಳಿಕೆಯು, ಕಳ್ಳನು ನಾನು ಯಾವುದೋ ಸಂದರ್ಭದಲ್ಲಿದ್ದೇನೆ, ಬಂಧಿಸಬೇಡಿ, ನೋಟಿಸ್‌ ಕೊಡಬೇಡಿ ಎಂದು ಹೇಳಿದಂತಿದೆ’ ಎಂದು ಟೀಕಿಸಿದರು.

‘ಗುತ್ತಿಗೆದಾರರೊಬ್ಬರು ನನ್ನ ವಿರುದ್ಧ ಮಾಡಿದ್ದ ಆರೋಪದಲ್ಲಿ ಎಫ್‌ಐಆರ್‌ ಆಗುತ್ತಿದ್ದಂತೆಯೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೆ. ಕ್ಲೀನ್‌ಚಿಟ್ ಸಿಕ್ಕಾಗ ನನ್ನನ್ನು ಮಂತ್ರಿ ಮಾಡುತ್ತಾರೆ ಎಂದುಕೊಂಡಿದ್ದೆ. ಆದರೆ, ಮಾಡದಿರುವುದಕ್ಕೆ ಬೇಸರವಿದೆ. ಎಲ್ಲವನ್ನೂ ವರಿಷ್ಠರ ತೀರ್ಮಾನಕ್ಕೆ ‌ಬಿಟ್ಟಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

‘ವಿಧಾನಮಂಡಲ ಅಧಿವೇಶನಕ್ಕೆ, ಕಾಲು ನೋವಿನ ಕಾರಣದಿಂದಾಗಿ ಹೋಗಿಲ್ಲ. ಸಚಿವ ಸ್ಥಾನ ಸಿಗಲಿಲ್ಲವೆಂಬ ಬೇಸರದಿಂದಾಗಿ ಹೋಗಿಲ್ಲ ಎಂಬುದು ಸುಳ್ಳು. ಸಚಿವನಾಗದಿದ್ದರೂ ಪಕ್ಷಕ್ಕೆ ದುಡಿಯುತ್ತೇನೆ’ ಎಂದರು.

ಎಲ್ಲ ನಾಯಕರಿಂದಲೂ ದುರುಪಯೋಗ:‘ಸ್ವಾಭಿಮಾನದ ಬದುಕು ದೊರೆಯುವವರೆಗೂ ಮೀಸಲಾತಿ ‌ಮುಂದುವರಿಸಬೇಕು ನಿಜ. ಆದರೆ, ಎಲ್ಲ ರಾಜಕೀಯ ಪಕ್ಷಗಳ ದಲಿತ ನಾಯಕರು ಕೂಡ ಮೀಸಲಾತಿಯನ್ನು ಸಂಪೂರ್ಣ ದುರುಪಯೋಗ ಮಾಡಿಕೊಂಡಿದ್ದಾರೆ’ ಎಂದು ದೂರಿದರು. ‘ಕಟ್ಟ ಕಡೆಯವರಿಗೂ ದೊರೆಯುವಂತಾಗಬೇಕು’ ಎಂದರು.

‘ನಾನು ಸಾಮಾನ್ಯ ಕ್ಷೇತ್ರದಿಂದ ಆಯ್ಕೆಯಾಗಿ ಬರುತ್ತಿದ್ದೇನೆ. ಮೀಸಲಾತಿಯನ್ನು ಬಳಸಿಕೊಳ್ಳುತ್ತಿಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಆರ್ಥಿಕವಾಗಿ ಸಬಲರಾದವರಿಗೆ ಮೀಸಲಾತಿ ನಿಲ್ಲಿಸಬೇಕು. ದಲಿತರು, ಹಿಂದುಳಿದ ವರ್ಗದವರು ಸೇರಿದಂತೆ ಎಲ್ಲ ಜಾತಿಗಳಲ್ಲೂ ಮೀಸಲಾತಿ ಪಡೆದು ಆರ್ಥಿಕವಾಗಿ ಸಬಲರಾದವರು ಮತ್ತೆ ಮೀಸಲಾತಿ ಬಳಸಿಕೊಳ್ಳಬಾರದು. ಅದು ಕಡು ಬಡವರಿಗೆ ಸಿಗುವಂತೆ ಮಾಡಬೇಕು’ ಎಂದರು.

‘ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಎಷ್ಟು ವರ್ಷದಿಂದ ರಾಜಕೀಯದಲ್ಲಿ ಇದ್ದಾರೆ. ಅವರಿಗೆ, ಅವರ ಮಗನಿಗೆ ಮೀಸಲಾತಿ ಏಕೆ ಬೇಕು? ಮಂತ್ರಿಯಾಗಿ ಆರ್ಥಿಕವಾಗಿ ಮೇಲೆ ಬಂದ ಮೇಲೂ ಅಂಥವರಿಗೆ ಕೊಡಬೇಕೇಕೆ?. ಒಂದೇ ಕುಟುಂಬದವರು ಅನುಭವಿಸುವುದು ಸರಿಯಲ್ಲ’ ಎಂದು ಕೇಳಿದರು.

‘ಹಿಂದೂಸ್ತಾನ–ಪಾಕಿಸ್ತಾನ ಒಂದಾಗಬೇಕು. ರಾಷ್ಟ್ರ ಭಕ್ತ ಮುಸ್ಲಿಮರ ಬಗ್ಗೆ ನಮಗೆ ಯಾವ ಅಸಮಾಧಾನವೂ ಇಲ್ಲ. ನಮ್ಮ ವಿರುದ್ಧದೇ ಸಂಚು ಮಾಡುವ, ಪಾಕಿಸ್ತಾನಕ್ಕೆ ಜಿಂದಾಬಾದ್‌ ಎನ್ನುವ ರಾಷ್ಟ್ರ ದ್ರೋಹಿ ಮುಸ್ಲಿಮರನ್ನು ನಾವು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.